Virat Kohli: ರೋಹಿತ್ ರನ್ ಗಳಿಸದಿದ್ದಾಗ ಯಾರೂ ಮಾತಾಡಿಲ್ಲ: ಕೊಹ್ಲಿ ಬೆಂಬಲಕ್ಕೆ ನಿಂತ ಗವಾಸ್ಕರ್
Sunil Gavaskar: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಖಂಡಿತವಾಗಿಯೂ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾ (Team India) ಟಿ20 ತಂಡದಿಂದ ವಿರಾಟ್ ಕೊಹ್ಲಿ (Virat Kohli) ಅವರನ್ನು ಕೈಬಿಡುವಂತೆ ಅನೇಕ ಮಾತುಗಳು ಕೇಳಿಬರುತ್ತಿದೆ. ಫಾರ್ಮ್ನಲ್ಲಿ ಇಲ್ಲದಾಗ ತಂಡದಿಂದ ಕೈಬಿಟ್ಟು ದೇಶೀಯ ಕ್ರಿಕೆಟ್ ಆಡಿ ಕಮ್ಬ್ಯಾಕ್ ಮಾಡಬೇಕು ಎಂದು ಕೆಲ ಕ್ರಿಕೆಟ್ ದಿಗ್ಗಜರು ಅಭಿಪ್ರಾಯ ಹೊರಹಾಕಿದ್ದಾರೆ. ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹೆಚ್ಚಿನ ಮಾಜಿ ಆಟಗಾರರು ಕೊಹ್ಲಿ ಟಿ20 ತಂಡದಿಂದ ಹೊರಬರಬೇಕು ಎಂದು ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar) ಅವರು ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಖಂಡಿತವಾಗಿಯೂ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗವಾಸ್ಕರ್, “ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ. ಭಾರತ ತಂಡದಲ್ಲಿ ರೋಹಿತ್ ಶರ್ಮಾ ರನ್ ಗಳಿಸದೇ ಇದ್ದಾಗ ಯಾರುಕೂಡ ಮಾತನಾಡುವುದಿಲ್ಲ. ಇದೀಗ ಕೊಹ್ಲಿ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ. ಕೊಹ್ಲಿ ಎಲ್ಲ ಆಟಗಾರರ ಹಾಗೆ ಅಲ್ಲವೆ. ಫಾರ್ಮ್ ಎಂಬುದು ತಾತ್ಕಾಲಿಕ, ಅವರು ಆಡುವ ಶೈಲಿ ಶಾಶ್ವತ. ಟಿ20 ಕ್ರಿಕೆಟ್ನಲ್ಲಿ ಚೆಂಡಿಗೆ ಬ್ಯಾಟ್ ಬಡಿದಾಗ ಅದು ಸ್ವಿಂಗ್ ಆಗುತ್ತದೆ. ಇದರಿಂದ ಯಶಸ್ಸು ಸಿಗಬಹುದು ಅಥವಾ ಔಟ್ ಕೂಡ ಆಗಬಹುದು,” ಎಂದು ಗವಾಸ್ಕರ್ ಹೇಳಿದ್ದಾರೆ.
“ನನಗನಿಸುವ ಪ್ರಕರಾ ಕೊಹ್ಲಿಗೆ ಈಗ ಸಮಯ ಬಂದಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಅವರಿಗೆ ಉತ್ತಮ ಅವಕಾಶ. ಏಕದಿನ ಕ್ರಿಕೆಟ್ ಟೆಸ್ಟ್ ಮಾದರಿಯ ಅತ್ಯುತ್ತಮ ಆಟ. ಇಲ್ಲಿ ಸೆಟಲ್ ಆಗಲು ಸಮಯ ಇರುತ್ತದೆ. ಸಂದರ್ಭಕ್ಕೆ ತಕ್ಕಂತೆ ಆಡಲು ಇಲ್ಲಿ ಅವಕಾಶಗಳಿವೆ. ನಮ್ಮಲ್ಲಿ ಉತ್ತಮ ಆಯ್ಕೆ ಸಮಿತಿಯ ಸದಸ್ಯರಿದ್ದಾರೆ. ಅವರು ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ,” ಎಂಬುದು ಗವಾಸ್ಕರ್ ಮಾತು.
ವೆಂಕಟೇಶ್ ಪ್ರಸಾದ್ ಏನಂದ್ರು?:
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬೇಗನೆ ಔಟಾದಾಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದರು. “ಅದೊಂದು ಕಾಲವಿತ್ತು, ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಆಟಗಾರನನ್ನು ತಂಡದಿಂದ ಬಿಡುವುದು. ಅದು ಆತ ಎಷ್ಟೇ ಖ್ಯಾತಿಯನ್ನು ಪಡೆದುಕೊಂಡಿರಲಿ. ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಂಗ್, ಜಹಿರ್ ಖಾನ್, ಲಕ್ಷ್ಮೀಪತಿ ಬಾಲಾಜಿ ಹೀಗೆ ಅನೇಕರು ಫಾರ್ಮ್ನಲ್ಲಿ ಇಲ್ಲದಾಗ ಅವರನ್ನ ತಂಡದಿಂದ ಕೈಬಿಡಲಾಗಿತ್ತು. ಅವರು ದೇಶೀಯ ಕ್ರಿಕೆಟ್ನಲ್ಲಿ ಆಡಿ ರನ್ ಗಳಿಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.”
“ಫಾರ್ಮ್ ಕಳೆದುಕೊಂಡಾಗ ವಿಶ್ರಾಂತಿ ಪಡೆದುಕೊಳ್ಳುವುದು ಪ್ರಗತಿಗೆ ಮಾರ್ಗವಲ್ಲ. ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಖ್ಯಾತಿಯ ಮೇಲೆ ಆಟವಾಡಲು ಸಾಧ್ಯವಿಲ್ಲ. ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಕೂಡ ಅನೇಕ ಸಂದರ್ಭಗಳಲ್ಲಿ ತಂಡದಿಂದ ಹೊರಗುಳಿದಿದ್ದರು,” ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದರು.
ಕಪಿಲ್ ದೇವ್ ಹೇಳಿಕೆ:
ಇತ್ತೀಚೆಗಷ್ಟೆ ಕಪಿಲ್ ದೇವ್ ಕೂಡ ಬಿಸಿಸಿಐಗೆ ಕೊಹ್ಲಿಯನ್ನು ಟಿ20 ತಂಡದಿಂದ ಕೈಬಿಡುವಂತೆ ಸೂಚಿಸಿದ್ದರು. “ವಿರಾಟ್ ಕೊಹ್ಲಿ ಸುಮಾರು 3 ವರ್ಷಗಳಿಂದ ದೊಡ್ಡ ಇನ್ನಿಂಗ್ಸ್ ಆಡಲು ಹೋರಾಡುತ್ತಿದ್ದಾರೆ. ಭಾರತೀಯ ತಂಡದ ಆಡಳಿತವು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಲಯದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿದ್ದರೆ, ಅದು ಅವರಿಗೆ ಮಾಡುವ ಅನ್ಯಾಯವಾಗುತ್ತದೆ. ಹೀಗಾಗಿ ಫಾರ್ಮ್ನಲ್ಲಿ ಇಲ್ಲದವರನ್ನು ಕೈ ಬಿಟ್ಟು ಫಾರ್ಮ್ನಲ್ಲಿ ಇರುವವರಿಗೆ ಅವಕಾಶ ನೀಡಿ. ದೀರ್ಘಕಾಲದಿಂದ ಲಯಕ್ಕೆ ಮರಳಲು ಹೋರಾಡುತ್ತಿರುವ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿಯಬೇಕು,” ಎಂದು ಹೇಳಿದ್ದರು.