Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಂಕಿ ಅಂಶಗಳನ್ನೊಮ್ಮೆ ನೋಡಿ..!

Virat Kohli: ಇತರೆ ಆಟಗಾರರ ಅಂಕಿ ಅಂಶಗಳನ್ನು ನೋಡಿದ್ರೆ ಕೊಹ್ಲಿಗಿಂತ ಅವರೇ ಮೊದಲು ತಂಡದಿಂದ ಹೊರಬೀಳಬೇಕಾಗುತ್ತದೆ. ಇದೇ ಕಾರಣದಿಂದಾಗಿ ಇಲ್ಲಿ ವಿರಾಟ್ ಕೊಹ್ಲಿ ಟಾರ್ಗೆಟ್ ಆಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.

Virat Kohli: ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಂಕಿ ಅಂಶಗಳನ್ನೊಮ್ಮೆ ನೋಡಿ..!
Virat Kohli
TV9kannada Web Team

| Edited By: Zahir PY

Jul 12, 2022 | 2:54 PM

ವಿರಾಟ್ ಕೊಹ್ಲಿ (Virat Kohli) ಕಳಪೆ ಫಾರ್ಮ್​ನಲ್ಲಿದ್ದಾರೆ. ಕೊಹ್ಲಿಯನ್ನು ತಂಡದಿಂದ ಕೈ ಬಿಡಲು ಇದು ಸೂಕ್ತ ಸಮಯ. ವಿರಾಟ್ ಟಿ20 ಕ್ರಿಕೆಟ್​ಗೆ ಸೂಕ್ತರಲ್ಲ. ಅವರನ್ನು ಟಿ20 ವಿಶ್ವಕಪ್​ಗೆ (T20 World Cup 2022) ಆಯ್ಕೆ ಮಾಡಬೇಡಿ….ಹೀಗೆ ಕಳೆದ ಒಂದೆರೆಡು ವಾರಗಳಲ್ಲಿ ನೀವು ಇಂತಹ ಹಲವು ಸುದ್ದಿಗಳನ್ನು ಓದಿರುತ್ತೀರಿ. ಆದರೆ ಅಷ್ಟಕ್ಕೂ ವಿರಾಟ್ ಕೊಹ್ಲಿ ಫಾರ್ಮ್​ನಲ್ಲಿ ಇಲ್ವಾ ಎಂಬ ಪ್ರಶ್ನೆಗಳನ್ನು ಮುಂದಿಟ್ಟರೆ ಎಲ್ಲರ ಬಾಯಲ್ಲೂ ಬರುವ ಉತ್ತರ ಇಲ್ಲ ಫಾರ್ಮ್​ನಲ್ಲಿ ಇಲ್ಲ. ಆದರೆ ಕಿಂಗ್ ಕೊಹ್ಲಿಯ ಅಂಕಿ ಅಂಶಗಳು ಹೇಳುವುದೇ ಬೇರೆ. ಏಕೆಂದರೆ ಕೊಹ್ಲಿಯ ಕೊನೆಯ 10 ಇನಿಂಗ್ಸ್ ತೆಗೆದುಕೊಂಡರೆ ಉತ್ತಮ ಫಾರ್ಮ್​ನಲ್ಲಿರುವುದು ಸ್ಪಷ್ಟ. ಅದೇ ಸಮಯದಲ್ಲಿ ಇತರೆ ಆಟಗಾರರ ಅಂಕಿ ಅಂಶಗಳನ್ನು ನೋಡಿದ್ರೆ ಕೊಹ್ಲಿಗಿಂತ ಅವರೇ ಮೊದಲು ತಂಡದಿಂದ ಹೊರಬೀಳಬೇಕಾಗುತ್ತದೆ. ಇದೇ ಕಾರಣದಿಂದಾಗಿ ಇಲ್ಲಿ ವಿರಾಟ್ ಕೊಹ್ಲಿ ಟಾರ್ಗೆಟ್ ಆಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.

ಏಕೆಂದರೆ ವಿರಾಟ್ ಕೊಹ್ಲಿ ತಮ್ಮ ಕೊನೆಯ 8 ಟಿ20 ಮ್ಯಾಚ್​ಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. ಅಂದರೆ ಕೊನೆಯ 8 ಇನಿಂಗ್ಸ್​ ಮೂಲಕ ಕೊಹ್ಲಿ 229 ರನ್​ ಕಲೆಹಾಕಿದ್ದಾರೆ. ಇದೇ ಅವಧಿಯಲ್ಲಿ 10 ಟಿ20 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರಿಸಿದ್ದು ಕೇವಲ ಒಂದು ಅರ್ಧಶತಕ ಮಾತ್ರ. ಇನ್ನು ಈ ವೇಳೆ 10 ಇನಿಂಗ್ಸ್ ಮೂಲಕ ಹಿಟ್​ಮ್ಯಾನ್ ಕಲೆಹಾಕಿದ್ದು 238 ರನ್​ ಮಾತ್ರ.

ಇನ್ನು 2022ರ ಒಟ್ಟಾರೆ ಅಂಕಿ ಅಂಶಗಳನ್ನು ತೆಗೆದುಕೊಂಡರೂ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಕೊಹ್ಲಿ ಒಟ್ಟು 16 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿದ್ದು 432 ರನ್​ಗಳು. ಇದರಲ್ಲಿ 4 ಅರ್ಧಶತಕಗಳು ಕೂಡ ಸೇರಿವೆ. ಆದರೆ ಮತ್ತೊಂದೆಡೆ ರೋಹಿತ್ ಶರ್ಮಾ ಈ ವರ್ಷ 14 ಇನಿಂಗ್ಸ್​ಗಳಲ್ಲಿ 1 ಅರ್ಧಶತಕದೊಂದಿಗೆ ಕೇವಲ 339 ರನ್​ ಮಾತ್ರ ಬಾರಿಸಿದ್ದಾರೆ.

ಆದರೆ ಇಲ್ಲಿ ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಅದೇ ವೇಳೆ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ ಅವರ ಫಾರ್ಮ್​ ಬಗ್ಗೆ ಯಾರು ಕೂಡ ಮಾತನಾಡದಿರುವುದು ಅಚ್ಚರಿಯ ವಿಷಯ. ಏಕೆಂದರೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಡಿಕೆ ಕಳೆದ 9 ಟಿ20 ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್​ ಮಾತ್ರ.

ಇನ್ನು ಶ್ರೇಯಸ್ ಅಯ್ಯರ್ ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. ಟಿ20 ಕ್ರಿಕೆಟ್​ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದರು. ಇಂಗ್ಲೆಂಡ್ ವಿರುದ್ದದ 3ನೇ ಟಿ20 ಪಂದ್ಯದಲ್ಲೂ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಒಂದೆಡೆ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ, ಮತ್ತೊಂದೆಡೆ ಶ್ರೇಯಸ್ ಅಯ್ಯರ್ 23 ಎಸೆತಗಳನ್ನು ಎದುರಿಸಿ ಕೇವಲ 28 ರನ್​ ಮಾತ್ರ ಬಾರಿಸಿದ್ದರು.  ಇದು ಕೂಡ ಇಂಗ್ಲೆಂಡ್ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾಯಿತು.

ಆದರೆ ಕಳೆದ 8 ಇನಿಂಗ್ಸ್​ಗಳಲ್ಲಿ 3 ಅರ್ಧಶತಕ ಬಾರಿಸಿರುವ ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಮಾತ್ರ ಮಾಜಿ ಕ್ರಿಕೆಟಿಗರು ಟೀಕೆ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿಗಿಂತ ಕಳಪೆ ಫಾರ್ಮ್​ನಲ್ಲಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ಯಾರು ಸಹ ಚಕಾರವೆತ್ತುತ್ತಿಲ್ಲ.

ಹೀಗಾಗಿಯೇ ಸುನಿಲ್ ಗಾವಸ್ಕರ್ ಟೀಕಾಗಾರರಿಗೆ ದೊಡ್ಡ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ರನ್ ಗಳಿಸದೇ ಇದ್ದಾಗ ಯಾರು ಸಹ ಮಾತನಾಡುವುದಿಲ್ಲ. ಅದೇ ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಹೀಗೆ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಅತ್ತ ವಿರಾಟ್ ಕೊಹ್ಲಿಯ ಟಿ20 ಫಾರ್ಮ್​ ಬಗ್ಗೆ ಮಾತನಾಡಿರುವ ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಮಾಜಿ ಆಟಗಾರರು ಕೊಹ್ಲಿಯ ಕೊನೆಯ 10 ಇನಿಂಗ್ಸ್​ ಗಳತ್ತ ಕಣ್ಣಾಡಿಸುವುದು ಸೂಕ್ತ. ಏಕೆಂದರೆ ಕೊಹ್ಲಿಯು ಕೊನೆಯ 8 ಟಿ20 ಇನಿಂಗ್ಸ್​ಗಳಲ್ಲಿ 3 ಅರ್ಧಶತಕ ಸಿಡಿಸಿದ್ದಾರೆ. ಕೇವಲ 2 ಪಂದ್ಯಗಳಲ್ಲಿ ವಿಫಲರಾಗಿರುವುದನ್ನು ಗಣನೆಗೆ ತೆಗೆದುಕೊಳ್ಳಬಹುದಾದರೆ, ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿರುವುದು ಕೂಡ ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಇಂಗ್ಲೆಂಡ್ ವಿರುದ್ದದ ಈ 2 ಪಂದ್ಯಗಳಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಹಾಫ್ ಸೆಂಚುರಿ ಬಾರಿಸಿದ್ದರು.

ಇದಾಗ್ಯೂ ವಿರಾಟ್ ಕೊಹ್ಲಿಯ ಫಾರ್ಮ್​ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಾದರೆ, ಅದಕ್ಕೂ ಮುನ್ನ ಇಲ್ಲಿ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರ ಕೊನೆಯ 10 ಇನಿಂಗ್ಸ್​ಗಳ ಬಗ್ಗೆ ಕೂಡ ಚರ್ಚೆ ನಡೆಯಬೇಕಿದೆ. ಆದರೆ ಇದು ಆಗದಿರುವುದೇ ವಿರಾಟ್ ಕೊಹ್ಲಿ ಮಾತ್ರ ಇಲ್ಲಿ ಟಾರ್ಗೆಟ್ ಆಗುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟುಹಾಕಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada