Umran Malik: ಮೂರೇ ಮೂರು ಮ್ಯಾಚ್ನಲ್ಲಿ ಶತಕ ಪೂರೈಸಿದ ಉಮ್ರಾನ್ ಮಲಿಕ್
Umran Malik: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ನ ಕೊರತೆಯನ್ನು ಉಮ್ರಾನ್ ಮಲಿಕ್ ಸರಿದೂಗಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಟೀಮ್ ಇಂಡಿಯಾದ ಯುವ ಸ್ಪೀಡ್ ಮಾಸ್ಟರ್ ಉಮ್ರಾನ್ ಮಲಿಕ್ (Umran Malik) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಏಕೆಂದರೆ ಯುವ ವೇಗಿಯ ವೇಗಕ್ಕೆ ಈಗಾಗಲೇ ಖ್ಯಾತ ಕ್ರಿಕೆಟಿಗರು ಮಾರು ಹೋಗಿದ್ದಾರೆ. ಅದರಲ್ಲೂ ಐಪಿಎಲ್ನಲ್ಲಿ ಶ್ರೇಷ್ಠ ಆಟಗಾರರನ್ನು ಕೂಡ ಕಂಗೆಡಿಸುವಂತೆ ಮಲಿಕ್ ಬೌಲಿಂಗ್ ಮಾಡಿದ್ದರು. ಪರಿಣಾಮ ಎಸ್ಆರ್ಹೆಚ್ ಪರ 14 ಪಂದ್ಯಗಳಲ್ಲಿ 22 ವಿಕೆಟ್ ಉರುಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾದಲ್ಲಿ ಚಾನ್ಸ್ ಲಭಿಸಿತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮಲಿಕ್ ಎಡವುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಆಡಿರುವ 3 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
ಐರ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಮಲಿಕ್ಗೆ ಮೊದಲ ಪಂದ್ಯದಲ್ಲಿ ಸಿಕ್ಕಿದ್ದು ಕೇವಲ 1 ಓವರ್ ಮಾತ್ರ. ಮಳೆಬಾಧಿತ ಈ ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದ ಯುವ ವೇಗಿ 14 ರನ್ ನೀಡಿದ್ದರು. ಇದಾಗ್ಯೂ ಚೊಚ್ಚಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ.
ಇನ್ನು ಐರ್ಲೆಂಡ್ ವಿರುದ್ದದ 2ನೇ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಕೊನೆಯ ಓವರ್ ಮೂಲಕ ಗಮನ ಸೆಳೆದಿದ್ದರು. ಈ ಪಂದ್ಯದ ಅಂತಿಮ ಓವರ್ನಲ್ಲಿ ಐರ್ಲೆಂಡ್ಗೆ 17 ರನ್ ಬೇಕಿತ್ತು. ಈ ವೇಳೆ ಭರ್ಜರಿ ಬೌಲಿಂಗ್ ಮಾಡಿದ್ದ ಮಲಿಕ್ ಕೇವಲ 12 ರನ್ ನೀಡಿ ಟೀಮ್ ಇಂಡಿಯಾಗೆ 4 ರನ್ಗಳ ಜಯ ತಂದುಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 1 ವಿಕೆಟ್ ಪಡೆದರೂ ನೀಡಿದ್ದು ಬರೋಬ್ಬರಿ 42 ರನ್ಗಳು.
ಹಾಗೆಯೇ ಇಂಗ್ಲೆಂಡ್ ವಿರುದ್ದದ 3ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆದ ಮಲಿಕ್ 1 ವಿಕೆಟ್ ಕಬಳಿಸಿದ್ದರು. ಆದರೆ ಮತ್ತೊಮ್ಮೆ ದುಬಾರಿಯಾಗುವ ಮೂಲಕ ನಿರಾಸೆ ಮೂಡಿಸಿದರು. ಅಂದರೆ ಇಂಗ್ಲೆಂಡ್ ವಿರುದ್ದ 4 ಓವರ್ಗಳಲ್ಲಿ ಬರೋಬ್ಬರಿ 56 ರನ್ ಚಚ್ಚಿಸಿಕೊಂಡಿದ್ದರು. ಇಲ್ಲಿ ಮೂರು ಪಂದ್ಯಗಳನ್ನಾಡಿರುವ ಉಮ್ರಾನ್ ಮಲಿಕ್ 12 ಕ್ಕಿಂತ ಎಕಾನಮಿ ರೇಟ್ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಅಂದರೆ ಆಡಿರುವ ಮೂರು ಪಂದ್ಯಗಳ ಒಟ್ಟು 112 ರನ್ಗಳನ್ನು ನೀಡಿದ್ದಾರೆ. ಅದು ಕೂಡ 12.44 ಎಕಾನಮಿ ರೇಟ್ನಲ್ಲಿ. ಇನ್ನು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ. ಇಲ್ಲಿ ಉಮ್ರಾನ್ ಮಲಿಕ್ ಅವರನ್ನು ಮುಂಬರುವ ಟಿ20 ವಿಶ್ವಕಪ್ ಅನ್ನು ಮುಂದಿಟ್ಟುಕೊಂಡು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ನ ಕೊರತೆಯನ್ನು ಉಮ್ರಾನ್ ಮಲಿಕ್ ಸರಿದೂಗಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೀಗ ವಿದೇಶಿ ಪಿಚ್ಗಳಲ್ಲಿ ದುಬಾರಿ ಎನಿಸಿಕೊಳ್ಳುವ ಮೂಲಕ ಉಮ್ರಾನ್ ಮಲಿಕ್ ಆರಂಭದಲ್ಲೇ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಮುಂಬರುವ ವೆಸ್ಟ್ ಇಂಡೀಸ್ ಟಿ20 ಸರಣಿಗೆ ಮಲಿಕ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ವೇಳೆಯೂ ದುಬಾರಿಯಾದರೆ ಟಿ20 ವಿಶ್ವಕಪ್ಗೆ ಆಯ್ಕೆಯಾಗುವುದು ಅನುಮಾನ ಎಂದೇ ಹೇಳಬಹುದು.




