ಮೈಸೂರು ಗ್ಯಾಂಗ್‌ರೇಪ್: ಕಾನೂನಿಗೆ ಮತ್ತಷ್ಟು ತಿದ್ದುಪಡಿ ತರುವ ಬಗ್ಗೆ ಯೋಚನೆ ಮಾಡಿದ್ದೇವೆ -ಕಾನೂನು ಸಚಿವ ಜೆಸಿ ಮಾಧುಸ್ವಾಮಿ
ಈ ಪ್ರಕರಣದಲ್ಲಿ ನಾವು ಯಾರನ್ನೂ ಉಳಿಸಬೇಕಾದ ಅಗತ್ಯವಿಲ್ಲ. ಸಂತ್ರಸ್ತ ಯುವತಿ ಈ ರಾಜ್ಯದವರು ಕೂಡ ಅಲ್ಲ. ನಮ್ಮ ರಾಜ್ಯದ ಪೊಲೀಸರಿಂದ ಯಾವ ಅಚಾತುರ್ಯವೂ ಆಗಿಲ್ಲ. 164 ಅಡಿ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವರ ಪರವಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದ ಸಂಬಂಧ ವಿಧಾನ ಪರಿಷತ್‌ನಲ್ಲಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ನಿಯಮ 68ರ ಮೇಲಿನ ಚರ್ಚೆಗೆ ಗೃಹ ಸಚಿವರ ಪರವಾಗಿ ಉತ್ತರ ನೀಡಿದ್ದಾರೆ. ಬಹಳ ತೀವ್ರವಾಗಿ, ತೀಕ್ಷ್ಣ ವಾಗಿ ಪ್ರಕರಣ ನಿಭಾಯಿಸಿದ್ದೇವೆ. ಪೊಲೀಸರು ಬೇಜವಾಬ್ದಾರಿ ವರ್ತನೆ ತೋರಿಸಿದ್ದಾರೆ ಎಂದು ಪರಿಗಣಿಸಲು ಆಗೋದಿಲ್ಲ. ಮೈಸೂರಿನಲ್ಲಿರುವಷ್ಟು ಪೊಲೀಸರು ಬೇರೆ ಎಲ್ಲಿಯೂ ಇಲ್ಲ ಎಂದು ಸದನಕ್ಕೆ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಕಾನೂನಿಗೆ ಮತ್ತಷ್ಟು ತಿದ್ದುಪಡಿ ತರುವ ಬಗ್ಗೆ ನಾವು ಯೋಚನೆ ಮಾಡಿದ್ದೇವೆ. ಇದು ನಾವು ಯಾರೂ ಸಹಿಸುವುದಲ್ಲ, ಇದನ್ನು ಸಮರ್ಥಿಸಿಕೊಳ್ಳೋಕೆ ಆಗಲ್ಲ. ಮೈಸೂರು ಕೇಸ್ ದಲ್ಲಿ ತನಿಖೆ ತೀವ್ರವಾಗಿ ನಡೆಸುತ್ತಿದ್ದೇವೆ. ಪೋಕ್ಸೊ ಕೆಸ್ ಗೆ ಹೆಚ್ಚಾಗಿ ಮಹಿಳಾ ವಕೀಲರನ್ನೇ ನೇಮಿಸಬೇಕು ಅಂದುಕೊಂಡಿದ್ದೀವಿ. ವಿಶೇಷ ನ್ಯಾಯಾಲಯಗಳಲ್ಲಿ ಸರ್ಕಾರಿ ವಕೀಲರ ನೇಮಕ ಮಾಡುವಾಗ ಹೆಣ್ಣುಮಕ್ಕಳಿಗೆ ಹೆಚ್ಚು ಪ್ರಾತಿನಿಧ್ಯ ನೀಡ್ತೇವೆ. ದೌರ್ಜನ್ಯ ಒಳಗಾದ ಹೆಣ್ಣುಮಕ್ಕಳು ಮುಕ್ತವಾಗಿ ಮಾಹಿತಿ ನೀಡಬೇಕು, ತೊಂದರೆ ಆಗಬಾರದು. ಆದಷ್ಟು ಬೇಗ ಚಾರ್ಜ್ ಶೀಟ್ ಫೈಲ್ ಮಾಡಿ ತೀವ್ರ ಶಿಕ್ಷೆ ನೀಡಲು ಮುಂದಾಗ್ತೇವೆ ಎಂದು ಸಚಿವ ಮಾಧುಸ್ವಾಮಿ ಸದನಕ್ಕೆ ತಿಳಿಸಿದರು.
ರೇಪ್ ಪ್ರಕರಣ ದಿಢೀರ್ ಆಗುವಂಥದ್ದು. rape cannot be established until there is a evidence. ಪ್ರತಿಪಕ್ಷಗಳಿಗೆ ಬಂದಿರುವ ಭಾವನೆ ನೈಜವಲ್ಲ ಅಂದುಕೊಂಡಿದ್ದೇನೆ. ಕೃತ್ಯದಲ್ಲಿ ಭಾಗಿಯಾದವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಸ್ಕೀಂ ಮಾಡಿ ಪ್ಲ್ಯಾನ್ ಮಾಡಿ ಮಾಡಿದ್ದಲ್ಲ ಇದು, ಅನಿರೀಕ್ಷಿತ ಕೃತ್ಯ. ತನಿಖೆ ಹಂತದಲ್ಲಿ ಇದ್ದಾಗ ಬಹಳಷ್ಟು ವಿಚಾರ ಬಹಿರಂಗಪಡಿಸುವುದು ಸರಿಯಲ್ಲ. ಇದಕ್ಕಿಂತ ಹೆಚ್ಚು ಹೇಳುವುದಕ್ಕೆ ಆಗುವುದಿಲ್ಲ. ತುಮಕೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ನಾನೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ತುಮಕೂರು ಪ್ರಕರಣದಲ್ಲಿ ನಮಗೆ ಒಂದೇ ಒಂದು ಕ್ಲ್ಯೂ ಸಿಕ್ಕಿಲ್ಲ. ಪೊಲೀಸ್ ಕ್ಯಾಂಪಿಂಗ್ ಮಾಡಿ ಸ್ಪೆಷಲ್ ಟೀಂ ಮಾಡಿ ಎಷ್ಟೇ ಹುಡುಕಿದರೂ ಸಿಗ್ತಿಲ್ಲ. ಹೀಗಾಗಿ ಅಪರಾಧಿ ಹುಡುಕಲು ಕಷ್ಟವಾಗುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಈ ಪ್ರಕರಣದಲ್ಲಿ ನಾವು ಯಾರನ್ನೂ ಉಳಿಸಬೇಕಾದ ಅಗತ್ಯವಿಲ್ಲ. ಸಂತ್ರಸ್ತ ಯುವತಿ ಈ ರಾಜ್ಯದವರು ಕೂಡ ಅಲ್ಲ. ನಮ್ಮ ರಾಜ್ಯದ ಪೊಲೀಸರಿಂದ ಯಾವ ಅಚಾತುರ್ಯವೂ ಆಗಿಲ್ಲ. 164 ಅಡಿ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವರ ಪರವಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಮೈಸೂರು ಘಟನೆ ದುರದೃಷ್ಟಕರ, ಇಂಥದ್ದನ್ನು ಸರ್ಕಾರ ಬಯಸೋದಿಲ್ಲ. ಮನುಷ್ಯನ ದಾನವೀಗುಣ ಹೊರಗೆ ಬಂದ್ರೆ ಇಂಥದ್ದೆಲ್ಲ ಆಗತ್ತೆ ಎಂದರು. ಮಾಧುಸ್ವಾಮಿ ಉತ್ತರದ ವೇಳೆ ಗೃಹ ಸಚಿವರು ಇಲ್ಲದ ಬಗ್ಗೆ ಎಸ್ ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ಮಾಧುಸ್ವಾಮಿ ನಿನ್ನೆಯೆಲ್ಲಾ ಗೃಹ ಸಚಿವರು ಇಲ್ಲಿಯೇ ಇದ್ದರು, ನಾನು ಸರ್ಕಾರದ ಪರವಾಗಿ ಉತ್ತರ ಕೊಡ್ತೇನೆ ಎಂದರು.
ಮತ್ತೆ ಉತ್ತರ ಮುಂದುವರಿಸಿದ ಮಾಧುಸ್ವಾಮಿ ದೌರ್ಜನ್ಯಕ್ಕೆ ಒಳಗಾದ ಮೇಲೆ ಅವರಷ್ಟಕ್ಕೆ ಅವರೇ ಜೆಎಸ್ಎಸ್ ಆಸ್ಪತ್ರೆಗೆ ಹೋದರು. ಹುಡುಗನ ತಂದೆ ನಮಗೆ ಮಾಹಿತಿ ನೀಡಿದರು. 2006 ರಲ್ಲಿ ಐಪಿಸಿ ಸೆಕ್ಷನ್ ನಲ್ಲಿ ಬಹಳಷ್ಟು ತಿದ್ದುಪಡಿ ಮಾಡಲಾಗಿದೆ. ಇಂಥ ಪ್ರಕರಣಗಳಲ್ಲಿ ಹೇಗೆ ವರ್ತಿಸಬೇಕು ಅಂತ ಕೇಂದ್ರ ಸರ್ಕಾರ ನಮಗೆ ಎಸ್.ಓ.ಪಿ ನೀಡಿದೆ.
ಎಂಎಲ್ಸಿ ಕೃಷ್ಣರಾಜಪುರಂ ಸ್ಟೇಷನ್ ನಿಂದ ಆಲನಹಳ್ಳಿ ಸ್ಟೇಷನ್ ಗೆ ದೂರು ಟ್ರಾನ್ಸಫರ್ ಮಾಡುವಾಗ ತಡವಾಗಿದೆ. 15 ಗಂಟೆ ತಡವಾಗಿದ್ದಕ್ಕೆ ಯಾವುದೇ ದುರುದ್ದೇಶವೂ ಕೂಡ ಇಲ್ಲ. ಹುಡುಗ ಕೂಡ ಸ್ಪಷ್ಟವಾಗಿ ಮೊದಲು ಹೇಳಲಿಲ್ಲ. ಅವರ ತಂದೆ ಫೋನ್ ಮಾಡಿದಾಗಲೇ ಎಲ್ಲ ಸ್ಪಷ್ಟವಾಗಿದ್ದು. ಈ ಪ್ರಕರಣದಲ್ಲಿ ಅವರಾಗಿಯೇ ಖಾಸಗಿ ಆಸ್ಪತ್ರೆ ಗೆ ಹೋಗಿದ್ದಾರೆ. ಇದರಲ್ಲಿ ಹೈಡ್ ಆ್ಯಂಡ್ ಸೀಕ್ ಇಲ್ಲ. ಯಾರನ್ನೂ ಉಳಿಸಬೇಕಿಲ್ಲ ನಾವು, ಆ ಹುಡುಗಿ ಈ ರಾಜ್ಯದವಳೂ ಅಲ್ಲ. ಸ್ಟೇಟ್ ಮೆಂಟ್ ಕೊಡುವ ಸ್ಥಿತಿಯಲ್ಲಿ ಆ ಹುಡುಗಿ ಇರಲಿಲ್ಲ. ಆದರೂ 164 ಅಡಿ ಹುಡುಗಿ ಸ್ಟೇಟಮೆಂಟ್ ಆಗಿದೆ. ನಮ್ಮ ಪೊಲೀಸರಿಂದ ಯಾವ ಅಚಾತುರ್ಯವೂ ಆಗಿಲ್ಲ ಎಂದು ಪುನರುಚ್ಚರಿಸಿದರು.
(mysore gang rape case karnataka government wants bring in some more amendments to rape law minister jc madhuswamy)