ರಾಯಚೂರು, ಸೆ.24: ಕೂಲಿ ಕೆಲಸ ಮಾಡುತ್ತೇನೆಂದು ಬಿಂಬಿಸಿ ಕಳ್ಳತನ ಮಾಡುತ್ತಿದ್ದ ರಾಯಚೂರಿನ(Raichur) ಕುಖ್ಯಾತ ಕಳ್ಳ ನಾಗರಾಜ್ ದೇವರಮನಿಯನ್ನು ದೇವದುರ್ಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಇತ್ತೀಚೆಗೆ ಮನೆಗಳ್ಳತನ ಹಾಗೂ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. ಸದ್ಯ ಬಂಧಿತನಿಂದ 6 ಲಕ್ಷ ಮೌಲ್ಯದ 85 ಗ್ರಾಂ ಚಿನ್ನಾಭರಣ ಹಾಗೂ 70 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮತ್ತೊಂದೆಡೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೊಂಗರಹಳ್ಳಿ ಬಳಿ ಗಾಂಜಾ ಮಾರುತ್ತಿದ್ದ ಆಂಧ್ರದ ಪೆದ್ದಗಿರಗರಪಲ್ಲಿ ಮೂಲದ ಚಲಪತಿ ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 6 ಕೆಜಿ 160 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೆಜಿಎಫ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಯುವಕನಿಗೆ ಚೂರಿ ಇರಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23), ಯಜ್ಞೆಶ್ (22) ಬಂಧಿತ ಆರೋಪಿಗಳು.
ಮಂಗಳೂರು ಹೊರವಲಯದ ಕಳವಾರು ಎಂಬಲ್ಲಿ ಕಳವಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ (23) ಎಂಬಾತನಿಗೆ ಮೂವರು ಆರೋಪಿಗಳು ಚೂರಿ ಇರಿದಿದ್ದರು. ಅಬ್ದುಲ್ ಸಫ್ವಾನ್ ತನ್ನ ಸ್ನೇಹಿತ ಮೊಹಮ್ಮದ್ ಸಫ್ವಾನ್ ನೊಂದಿಗೆ ಬೈಕ್ ನಲ್ಲಿ ತೆರಳುತಿದ್ದಾಗ ಎರಡು ಬೈಕ್ನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಅಬ್ದುಲ್ ಸಫ್ವಾನ್ ಅವರ ಕೈ, ತೋಳು ಹಾಗೂ ಬೆನ್ನಿಗೆ ಚೂರಿಯಿಂದ ಇರಿದ ಗಾಯಗಳಾಗಿದ್ದವು. ಗಾಯಗೊಂಡ ಸಫ್ವಾನ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಫ್ವಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತೆರಳಿ ಸುರತ್ಕಲ್ ಠಾಣೆಯ ಪೊಲೀಸರು ತನಿಖೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ