ರಾಯಚೂರು, ಮಾ.02: ಗ್ರಾಮ ದೇವತೆ ಜಾತ್ರೆಗೆ ಬೆಂಗಳೂರಿನಿಂದ ಊರಿಗೆ ಬಂದಿದ್ದವನನ್ನ ಕೊಲೆ ಮಾಡಿದ ಘಟನೆ ಜಿಲ್ಲೆಯ ಮಾನ್ವಿ (Manvi) ತಾಲ್ಲೂಕಿನ ನಿರಮಾನ್ವಿ ಗ್ರಾಮದಲ್ಲಿ ನಡೆದಿದೆ. ಸುರೇಶ್(20) ಮೃತ ರ್ದುದೈವಿ. ಈ ಗ್ರಾಮದಲ್ಲಿ ಪ್ರತಿವರ್ಷ ಫೆಬ್ರವರಿ ಕೊನೆಯಲ್ಲಿ ರೇಣುಕಾ ಯಲ್ಲಮ್ಮದೇವಿ ಜಾತ್ರೆ ನಡೆಯುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಅದೇ ರೀತಿ ಈ ಗ್ರಾಮದ ಜನ ಕೂಡ ಪ್ರತಿ ವರ್ಷ ಯಲ್ಲಮ್ಮದೇವಿಗೆ ಮರಿ ಬಲಿ ಕೊಟ್ಟು ಪೂಜೆ ಮಾಡುತ್ತಾರೆ. ನಿರಮಾನ್ವಿ ಗ್ರಾಮದ ನಾಗೇಶ್ ಕುಟುಂಬ ಕೂಡ ದೇವಿಗೆ ಮರಿ ಹೊಡೆಯಲು ಮುಂದಾಗಿದ್ದರು.
ಹೀಗಾಗಿ ಇದೇ ಫೆಬ್ರವರಿ 25 ರಂದು ಹಬ್ಬಕ್ಕೆ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುವ ಮೂವರು ಗಂಡು ಮಕ್ಕಳು ಬಂದಿದ್ದರು. 20 ವರ್ಷದ ಸುರೇಶ್ ಸಹೋದರರಾದ ಮಹೇಶ್ ಹಾಗೂ ವಿನಯ್ ಕೂಡ ಬಂದಿದ್ದರು. ರೇಣುಕಾ ಯಲ್ಲಮ್ಮ ರಥೋತ್ಸವದ ಬಳಿಕ ಇದೇ ಮಾರ್ಚ್ 1 ರಂದು ನಾಗೇಶ್ ಕುಟುಂಬಸ್ಥರಿಗೆಲ್ಲ ಹೇಳಿ ಮರಿ ಹರಕೆ ತೀರಿಸಲು ಮುಂದಾಗಿದ್ರು. ಇದಕ್ಕೂ ಮುನ್ನ ಅಪರೂಪಕ್ಕೆ ಗ್ರಾಮಕ್ಕೆ ಸುರೇಶ್ ಬಂದಿದ್ದರಿಂದ ದೋಸ್ತ್ಗಳು ಆತನನ್ನ ಕರೆದುಕೊಂಡು ಸುತ್ತಾಡ ತೊಡಗಿದ್ದರು. ಫೆಬ್ರವರಿ 26 ರಂದು ಸುರೇಶ್ ಮನೆಯಲ್ಲಿದ್ದ. ಆಗ ಆತನ ಸ್ನೇಹಿತರು ಬಂದು ಪಾರ್ಟಿ ಮಾಡಲು ಸುರೇಶ್ನನ್ನ ಕರೆದೊಯ್ದಿದ್ದಾರೆ. ಹೀಗೆ ಪಾರ್ಟಿಗೆ ಹೋದವ ಮತ್ತೆ ಮನೆಗೆ ಬಾರಲೇ ಇಲ್ಲ.
ಇದನ್ನೂ ಓದಿ:ಡ್ರ್ಯಾಗರ್ನಿಂದ ಇರಿದು ರೌಡಿ ಶೀಟರ್ ಕೊಲೆ; ಹಳೆ ಕೇಸ್ ರಾಜಿ ಮಾಡಿಕೊಳ್ಳಲು ಹೋದವ ಸೇರಿದ ಮಸಣ
ಹೀಗೆ ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಸುರೇಶ್ ಮನೆಗೆ ಬರುವುದು ವಿಳಂಬವಾದಾಗ ತಂದೆ ನಾಗೇಶ್ ಸಂಬಂಧಿ ದೇವರಾಜ್ ಎನ್ನುವವರ ಮೂಲಕ ಫೋನ್ ಮಾಡಿಸಿದ್ರು. ಆಗ ಆತನ ಫೋನ್ ಸ್ವಿಚ್ಟ್ ಆಫ್ ಆಗಿತ್ತು. ನಂತರ ಸುರೇಶ್ ಸ್ನೇಹಿತರಿಗೆ ಕರೆ ಮಾಡಲಾಗಿತ್ತು. ಆಗಲು ಮಾಹಿತಿ ಸಿಕ್ಕಿರಲಿಲ್ಲ. ಸುರೇಶ್ನನ್ನ ಕರೆದೊಯ್ದಿದ್ದ ಸ್ನೇಹಿತರನ್ನ ವಿಚಾರಿಸಿದಾಗ ಆತನನ್ನ ಆಗಲೇ ಮನೆ ಬಳಿ ಬಿಟ್ಟು ಹೋಗಿದ್ದಿವಿ ಎಂಬ ಉತ್ತರ ಬಂದಿತ್ತು. ಕೊನೆಗೆ ಬೈಕ್ಗಳ ಮೂಲಕ ಸುರೇಶ್ಗಾಗಿ ಹುಡುಕಾಡದ ಸ್ಥಳವೇ ಇಲ್ಲದಂತಾಗಿತ್ತು.
ಊರು, ಹಳ್ಳಿಹಳ್ಳಿ ಸುತ್ತಾಡಿದರೂ ಸುರೇಶ್ನ ಮಾಹಿತಿಯೇ ಸಿಕ್ಕಿರಲಿಲ್ಲ. ಈ ಮಧ್ಯೆ ಫೆಬ್ರವರಿ 29ರ ಮದ್ಯಾಹ್ನ ಊರ ಹೊರಭಾಗದ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ನಂತರ ಮಾನ್ವಿ ಪೊಲೀಸರು ಅಲರ್ಟ್ ಆಗಿ ಪರಿಶೀಲನೆ ನಡೆಸಿದರು. ಆಗ ಅರ್ಧಂಬರ್ಧ ಸುಟ್ಟಿದ್ದ ಮೃತದೇಹ ನೋಡಿ ಅದು ನಾಪತ್ತೆಯಾಗಿದ್ದ ಸುರೇಶ್ನ ಶವ ಎನ್ನುವುದು ದೃಢಪಟ್ಟಿತ್ತು. ಕಾಣೆಯಾಗಿದ್ದ ಸುರೇಶ್ ಹೆಣವಾಗಿ ಪತ್ತೆಯಾಗಿದ್ದ. ಪಾರ್ಟಿಗೆಂದು ಕರೆದೊಯ್ದಿದ್ದ ಸ್ನೇಹಿತರೇ ಆತನನ್ನ ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ತಮ್ಮನ ಸಾವಿನ ಸೇಡಿಗೆ ಅಣ್ಣನ ಕೊಲೆ; ಇಬ್ಬರು ಅಂದರ್
ಪಾರ್ಟಿಗೆಂದು ಮೃತ ಸುರೇಶ್ನನ್ನ ಕರೆದೊಯ್ದಿದ್ದ ಸ್ನೇಹಿತರನ್ನ ವಿಚಾರಣೆಗೊಳಪಡಿಸಲಾಗಿದೆ. ಇದೇ ಕೇಸ್ನಲ್ಲಿ ಮೃತನ ಸಹೋದರ ಸಂಬಂಧಿ ದೇವರಾಜ್ನನ್ನ ವಿಚಾರಿಸಲಾಗಿದೆ. ಆದ್ರೆ, ಸುರೇಶ್ ಕತ್ತು ಸೀಳಿ, ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದು ಸುಟ್ಟು ಹಾಕಲು ಯತ್ನಿಸಲಾಗಿದೆ. ಹೀಗಾಗಿ ಈ ಕೃತ್ಯದಲ್ಲಿ ಬಲವಾದ ಕಾರಣವಿರುವ ಶಂಕೆ ವ್ಯಕ್ತವಾಗಿದ್ದು, ಮಾನ್ವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Sun, 3 March 24