ಡ್ರ್ಯಾಗರ್ನಿಂದ ಇರಿದು ರೌಡಿ ಶೀಟರ್ ಕೊಲೆ; ಹಳೆ ಕೇಸ್ ರಾಜಿ ಮಾಡಿಕೊಳ್ಳಲು ಹೋದವ ಸೇರಿದ ಮಸಣ
ಆತ ಅಪರಾಧ ಕೃತ್ಯಗಳನ್ನ ಎಸಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ ರೌಡಿ ಶೀಟರ್. ಬಳಿಕ ಪುಡಿ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಇಲ್ಲಸಲ್ಲದ ಕಿರಿಕ್ ಮಾಡುತ್ತಿದ್ದ. ಅದೇ ರೀತಿ ಹಳೆ ಕೇಸ್ ಒಂದಕ್ಕೆ ಸಾಕ್ಷಿ ಹೇಳಲು ಮುಂದಾಗಿದ್ದ ಯುವಕನನ್ನ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದ. ಈ ವೇಳೆ ಎರಡು ಗ್ಯಾಂಗ್ ನಡುವೆ ಗ್ಯಾಂಗ್ ವಾರ್ ನಡೆದು ರೌಡಿ ಶೀಟರ್ ಕೊಲೆ ಆಗಿ ಹೋಗಿದ್ದ. ಅಷ್ಟಕ್ಕೂ ಈ ಕೊಲೆಗೆ ಕಾರಣ ಏನು?, ಕೊಲೆ ಮಾಡಿದ ಹಂತಕರು ಯಾರು. ಈ ಸ್ಟೋರಿ ಓದಿ.
ಬೆಂಗಳೂರು ಗ್ರಾಮಾಂತರ, ಮಾ.01: ಬೆಂಗಳೂರು ಹೊರವಲಯ ಆನೇಕಲ್(Anekal) ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ (Rowdy sheeter) ಆಗಿದ್ದ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ, ನಿನ್ನೆ(ಮಾ.01) ರಾತ್ರಿ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಇದೇ ತಿಂಗಳ 23 ನೇ ತಾರೀಖಿನ ರಾತ್ರಿ ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ತನ್ನ ಗ್ಯಾಂಗ್ ಜೊತೆ ಮಾರಕಾಸ್ತ್ರಗಳೊಂದಿಗೆ ಎಂಟ್ರಿ ಕೊಟ್ಟಿದ್ದ ಮೆಂಟಲ್ ಮಂಜ, ಗಲಾಟೆ ಪ್ರಕರಣವೊಂದರ ಸಾಕ್ಷಿಯಾಗಿದ್ದ ಟ್ಯಾಟೂ ವಿಜಿಗೆ ಸಾಕ್ಷಿ ಹೇಳುವಂತೆ ವಾರ್ನ್ ಮಾಡಿದ್ದ. ಇದಕ್ಕೆ ಒಪ್ಪದೆ ಇದ್ದಾಗ ಇಡೀ ಏರಿಯಾದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದ. ಅಷ್ಟೊತ್ತಿಗೆ ಸ್ಥಳೀಯ ನಿವಾಸಿಗಳು ಅದರಲ್ಲೂ ಮಹಿಳೆಯರು ವಿಜಿ ನೆರವಿಗೆ ಧಾವಿಸಿ ಬಚಾವ್ ಮಾಡಿದ್ದಾರೆ. ಮೂಗು ಬಾಯಲ್ಲಿ ರಕ್ತ ಸುರಿಯುತ್ತಿದ್ದರಿಂದ ಆಸ್ಪತ್ರೆಗೆ ಕರೆದೊಯ್ದಿದ್ದರು.
ಇನ್ನು ಕುಡಿದ ನಶೆಯಲ್ಲಿದ್ದ ಮೆಂಟಲ್ ಮಂಜ, ಅಷ್ಟಕ್ಕೆ ಸುಮ್ಮನಾಗದೇ ಪುನಃ ಟ್ಯಾಟೂ ವಿಜಿ ಮನೆ ಬಳಿ ಟೂಲ್ಸ್ ಸಮೇತ ಹುಡುಗರನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟೊತ್ತಿಗೆ ಟ್ಯಾಟೂ ವಿಜಿ ಮೇಲಿನ ಹಲ್ಲೆ ವಿಚಾರ ತಿಳಿದು ಆತನ ಸ್ನೇಹಿತರು ಮನೆ ಬಳಿ ಬಂದಿದ್ದಾರೆ. ಈ ವೇಳೆ ಎರಡು ಟೀಮ್ ನಡುವೆ ಮಾರಾಮಾರಿಯಾಗಿದೆ. ಮೆಂಟಲ್ ಮಂಜನಿಗೆ ಎದೆ, ಬೆನ್ನು ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿತ್ತಿದ್ದಂತೆ ಉಳಿದವರು ಎಸ್ಕೇಪ್ ಆಗಿದ್ದಾರೆ. ಟ್ಯಾಟೂ ಹಾಕುವುದರ ಜೊತೆಗೆ ನಾಯಿ ಸಾಕಾಣಿಕೆ ಮಾಡುತ್ತಿದ್ದ ವಿಜಿ, ನೊಂದವರಿಗೆ ನೆರವಾಗುತ್ತಿದ್ದ, ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಆದ್ರೆ, ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಇತನನ್ನು ಕೊಲ್ಲಲು ಬಂದ ಮೆಂಟಲ್ ಮಂಜ, ಇದೀಗ ತಾನೇ ಹತ್ಯೆಯಾಗಿ ಹೋಗಿದ್ದಾನೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ; ಲಾಂಗ್ನಿಂದ ಹೊಡೆದು ಕೊಲೆ
ಆರೋಪಿಗಳು ಅಂದರ್
ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜನನ್ನ ಕೊಲೆ ಮಾಡಿದ್ದ ಆರೋಪಿಗಳನ್ನ ಆನೇಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಪಟ್ಟಣದ ನಿವಾಸಿ ಮೆಂಟಲ್ ಮಂಜ ಕೊಲೆಯಾದ ರೌಡಿ ಶೀಟರ್ ಆಗಿದ್ದಾನೆ. ಮಧು, ಕಿರಣ್, ಗೌತಮ್, ಅಕ್ಷಯ್ ಶಶಿ ಮತ್ತು ವಿಜಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಘಟನೆ ಸಂಬಂಧ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೆಂಟಲ್ ಮಂಜ ಹಾಗೂ ಸಹಚರ ಸಜ್ಜಾದ್, ಕಳೆದೊಂದು ವರ್ಷದ ಹಿಂದೆ ಪಟ್ಟಣದ ಫಾತಿಮಾ ಎಂಬ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಇವೊಂದು ಪ್ರಕರಣಕ್ಕೆ ಟ್ಯಾಟೂ ವಿಜಿ ವಿಟ್ನೆಸ್ ಆಗಿದ್ದ.
ಇದೇ ಕಾರಣಕ್ಕೆ ಎರಡು ಗ್ಯಾಂಗ್ಗಳ ನಡುವೆ ಗಲಾಟೆ ನಡೆದು ರೌಡಿ ಶೀಟರ್ ಮಂಜನ ಕೊಲೆಯಾಗಿದೆ. ಪ್ರಕರಣದ ಆರೋಪಿಗಳಾದ ಮಧು, ಕಿರಣ್, ಗೌತಮ್, ಅಕ್ಷಯ್ ಶಶಿ ಮತ್ತು ವಿಜಿ ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಈ ಕೊಲೆಯಾದ ಮೆಂಟಲ್ ಮಂಜನ ಮೇಲೆ ಕಳ್ಳತನ, ರಾಬರಿ, ಗಲಾಟೆ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಪುಡಿ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಸಿಕ್ಕ ಸಿಕ್ಕಲ್ಲಿ ಈ ಮೆಂಟಲ್ ಮಂಜ ಹಾವಳಿ ಕೊಡುತ್ತಿದ್ದ. ಇದರಿಂದ ಏರಿಯಾ ಜನರು ಸಹ ಇವನ ಕಿರುಕುಳಕ್ಕೆ ಬೇಸತ್ತು ಹೋಗಿದ್ದರು. ಅದಲ್ಲದೆ ಕೊಲೆಯಾದ ಮಂಜನ ಕುಟುಂಬ ಸಿರಿವಂತ ಕುಟುಂಬವಾಗಿದ್ದು, ಒಬ್ಬನೇ ಮಗನಾಗಿದ್ದ. ಆನೇಕಲ್ ಪಟ್ಟಣದಲ್ಲಿ ಕೋಟ್ಯಾಂತರ. ರೂಪಾಯಿ ಆಸ್ತಿ ಸಹ ಮೆಂಟಲ್ ಮಂಜನ ಕುಟುಂಬ ಹೊಂದಿತ್ತು. ಆದ್ರೆ ಮಚ್ಚು ಹಿಡಿದು ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ದ ಮೆಂಟಲ್ ಮಂಜ ಇದೀಗ ಬೀದಿ ಹೆಣವಾಗಿ ಹೋಗಿದ್ದಾನೆ.
ಇದನ್ನೂ ಓದಿ:ತುಮಕೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ; ಸ್ನೇಹಿತರಿಂದಲೇ ಕೊಲೆಯಾದ್ನಾ?
ಇನ್ನು ಟ್ಯಾಟೂ ವಿಜಿ ಕನ್ನಡಪರ ಸಂಘಟನೆಯಲ್ಲಿ ಗುರುತಿಸಿಕೊಂಡು ಸಮಾಜಸೇವೆಯಲ್ಲಿ ತೊಡಿಗಿದ್ದ ಯುವಕ. ಆದ್ರೆ, ವಿಜಿ ಜೊತೆಯಲ್ಲಿದ್ದ ಸ್ನೇಹಿತರಾದ ಶಶಿ- ಮಧು ಎಂಬ ಸಹೋದರರು 307 ಕೇಸ್ ಒಂದರಲ್ಲಿ ಭಾಗಿಯಾಗಿ ರೌಡಿ ಶೀಟರ್ಗಳಾಗಿದ್ರು. ಜೊತೆಗೆ ಅಂಡರ್ ವರ್ಲ್ಡ್ ಫೀಲ್ಡ್ ನಲ್ಲಿ ಹೆಸರು ಮಾಡಬೇಕೆಂದು ಬೆಂಗಳೂರಿನ ರೌಡಿಶೀಟರ್ ಗಳ ಜೊತೆ ಸಂಪರ್ಕದಲ್ಲಿದ್ರು ಎನ್ನಲಾಗಿದೆ. ಅದೇ ರೀತಿ ಆನೇಕಲ್ನಲ್ಲೂ ಈ ಮಧು ಒಂದು ತಂಡವನ್ನ ರೂಪಿಸಿಕೊಂಡು, ರೌಡಿ ಚಟುವಟಿಕೆಯಲ್ಲಿ ಆ್ಯಕ್ಟಿವ್ ಆಗಿದ್ದ ಎನ್ನಲಾಗಿದೆ. ಈ ಬಗ್ಗೆಯೂ ಸಹ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ಕಿರಿಕ್ ಮಾಡಿಕೊಂಡು ಸಿಕ್ಕ ಸಿಕ್ಕಲ್ಲಿ ಹಾವಳಿ ಎಬ್ಬಿಸುತ್ತಿದ್ದ ರೌಡಿ ಶೀಟರ್ ಮೆಂಟಲ್ ಮಂಜ, ಬೀದಿ ಹೆಣವಾಗಿ ಹೋದರೆ, ಅತ್ತ ಗಲಾಟೆ ಯಲ್ಲಿ ರೌಡಿ ಶೀಟರ್ ಮೆಂಟಲ್ ಮಂಜನನ್ನು ಕೊಲೆ ಮಾಡಿ ಇದೀಗ ಆರೋಪಿಗಳು ಜೈಲು ಪಾಲಾಗಿದ್ದಾರೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ