Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ
Rape Case: 2012ರಲ್ಲಿ ಮಾನಸಿಕ ಅಸ್ವಸ್ಥಳಾಗಿದ್ದ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ 10 ವರ್ಷಗಳ: ಕಠಿಣ ಜೈಲುಶಿಕ್ಷೆ ವಿಧಿಸಲಾಗಿದೆ.
ಮುಂಬೈ: ಮಹಿಳೆಯ ಆತ್ಮಶಕ್ತಿಯನ್ನೇ ನಾಶಪಡಿಸುವ ಅತ್ಯಾಚಾರವು ಕೊಲೆಗಿಂತ ಘೋರವಾದ ಅಪರಾಧವಾಗಿದೆ ಎಂದು ವಿಶೇಷ ಪೋಕ್ಸೊ ನ್ಯಾಯಾಲಯ (Special POCSO Court) ಅಭಿಪ್ರಾಯಪಟ್ಟಿದೆ. ಸಾಮೂಹಿಕ ಅತ್ಯಾಚಾರ (Gang Rape) ನಡೆಸಲು ಪ್ರಯತ್ನಿಸಿದ 28 ವರ್ಷದ ಯುವಕನಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಪೋಕ್ಸೋ ನ್ಯಾಯಾಲಯವು ಈ ಬಗ್ಗೆ ಹೇಳಿದೆ. 2012ರಲ್ಲಿ ಮಾನಸಿಕ ಅಸ್ವಸ್ಥಳಾಗಿದ್ದ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಈ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎರಡನೇ ಆರೋಪಿ ವಿಚಾರಣೆ ಬಾಕಿ ಇರುವಾಗಲೇ ಮೃತಪಟ್ಟಿದ್ದಾನೆ.
ಮಾನಸಿಕ ಅಸ್ವಸ್ಥಳಾಗಿದ್ದ ಬಾಲಕಿಯನ್ನು ನ್ಯಾಯಾಲಯಕ್ಕೆ ಕರೆಸಲಾಯಿತು. ಈಗ ಶಿಕ್ಷೆಗೊಳಗಾದ ಅಪರಾಧಿಯ ವಿರುದ್ಧ ಆಕೆಯಿಂದ ಸಾಕ್ಷಿ ಹೇಳಿಸಲಾಯಿತು. ಸಂತ್ರಸ್ತೆ ನೀಡಿರುವ ಸಾಕ್ಷ್ಯಗಳು ಆತ್ಮವಿಶ್ವಾಸ, ಸ್ಪೂರ್ತಿದಾಯಕ, ವಿಶ್ವಾಸಾರ್ಹವಾಗಿದ್ದು, ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶದಿಂದ ಸಂತ್ರಸ್ತೆಯನ್ನು ನಿರ್ಜನವಾದ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ವಿಶೇಷ ನ್ಯಾಯಾಧೀಶ ಎಚ್.ಸಿ.ಶೆಂಡೆ ಹೇಳಿದ್ದಾರೆ.
ಆರೋಪಿಯನ್ನು ತಪ್ಪಾಗಿ ರೂಪಿಸಲಾಗಿದೆ ಎಂಬ ಪ್ರತಿವಾದಿಯ ವಾದವನ್ನು ನ್ಯಾಯಾಲಯವು ವಜಾಗೊಳಿಸಿದೆ. ಬಾಲಕಿಗೆ ತನ್ನ ಮೇಲೆ ಅತ್ಯಾಚಾರ ನಡೆಸಲು ಬಂದ ಆರೋಪಿಯ ಪರಿಚಯವಿದೆ. ಹೀಗಾಗಿ, ಆಕೆಯ ಹೇಳಿಕೆಯೇ ಮುಖ್ಯ ಸಾಕ್ಷಿಯಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ಸ್ಥಿತಿಯಿಂದಾಗಿ ಅಪ್ರಾಪ್ತ ಬಾಲಕಿ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆಕೆಯ ಸಹೋದರರು ಪ್ರತಿದಿನ ಶಾಲೆಗೆ ಹೋಗುತ್ತಿದ್ದರು. ಅಪ್ರಾಪ್ತ ಬಾಲಕಿಯ ತಾಯಿಯ ಪ್ರಕಾರ, 2015ರ ಸೆಪ್ಟೆಂಬರ್ 4ರಂದು ಆಕೆ ಕೆಲಸದಿಂದ ಹಿಂದಿರುಗಿದ ನಂತರ ತನ್ನ ಮಗಳ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದಳು. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಆಕೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಳು. ಆರೋಪಿಯು ತನಗೆ 10 ರೂ. ಕೊಡುವ ಆಮಿಷವೊಡ್ಡಿ ಏಕಾಂತದ ಸ್ಥಳಕ್ಕೆ ಕರೆದುಕೊಂಡಿದ್ದಾಗಿ ಆ ಬಾಲಕಿ ಹೇಳಿದ್ದಳು. ಈ ಹಿಂದೆಯೂ ಈ ರೀತಿ ನಡೆದಿದೆ ಎಂದು ಬಾಲಕಿ ತನ್ನ ತಾಯಿಯ ಬಳಿ ಹೇಳಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ; ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ ಘೋಷಣೆ