Lok Sabha Elections: ಚುನಾವಣೆ ಹೊಸ್ತಿಲಲ್ಲೇ ಸರಣಿ ಕೊಲೆ, ರಾಜ್ಯದಾದ್ಯಂತ ಒಂದೇ ದಿನ 12 ಮಂದಿಯ ಹತ್ಯೆ
ಸರಣಿ ಕೊಲೆ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿವೆ. ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳಿರುವಾಗ ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ದುಷ್ಕೃತ್ಯಗಳಲ್ಲಿ ಬರೋಬ್ಬರಿ 12 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಬ್ಬರ ಪುತ್ರಿ ನೇಹಾ ಕೊಲೆ ರಾಜಕೀಯವಾಗಿಯೂ ಸದ್ದು ಮಾಡುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಗುರುವಾರ ಏನೇನಾಯ್ತು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 19: ಲೋಕಸಭೆ ಚುನಾವಣೆಯ (Lok Sabha Elections) ಎರಡನೇ ಹಂತದ ಮತದಾನಕ್ಕೆ (ಕರ್ನಾಟಕದ ಮೊದಲ ಹಂತದ ಮತದಾನ) ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದಾದ್ಯಂತ (Karnataka) ಗುರುವಾರ ನಡೆದ ಸರಣಿ ಕೊಲೆ (Serial Murder) ಪ್ರಕರಣಗಳಿಂದ ರಾಜ್ಯದ ಜನತೆ ಬೆಚ್ಚಿ ಬೀಳುವಂತಾಗಿದೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯ ಹತ್ಯೆ, ಬೆಂಗಳೂರಿನ ಜೋಡಿ ಕೊಲೆ ಸೇರಿದಂತೆ ರಾಜ್ಯದಾದ್ಯಂತ ಒಂದೇ ದಿನ 12 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯ ಹತ್ಯೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠರ ಪುತ್ರಿ ನೇಹಾಳನ್ನು ಬಿವಿಬಿ ಕಾಲೇಜ್ನಲ್ಲಿ ಗುರುವಾರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು, ಕೊಲೆ ಆರೋಪಿ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿ ಫಯಾಜ್ ಎಂಬವನನ್ನು ಬಂಧಿಸಿದ್ದು, ಆತನಿಗೆ ಸದ್ಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚುನಾವಣೆಗೆ ಕೆಲವೇ ದಿನಗಳಿರುವಾಗ ನಡೆದ ಈ ಕೊಲೆ ಸದ್ಯ ಹಿಂದೂ ಮುಸ್ಲಿಂ ಆಯಾಮ ಪಡೆದುಕೊಳ್ಳುವ ಲಕ್ಷಣ ಕಾಣಿಸುತ್ತಿದೆ. ಎಬಿವಿಪಿ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ನಾಯಕರೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ, ಹುಬ್ಬಳ್ಳಿಯ ಕೊಲೆ ಒಂದು ಪ್ರೇಮ ವೈಫಲ್ಯ ಪ್ರಕರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.
ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂದ ನಾಲ್ವರ ಕೊಲೆ
ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮೃತರಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕೂಡ ಸೇರಿದ್ದಾರೆ. ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ (27), ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.
ತಡರಾತ್ರಿ ಪರಶುರಾಮ ಕುಟುಂಬ ಮಲಗಿದ್ದ ಕೋಣೆಯ ಗಾಜಿನ ಕಿಟಕಿಯನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಿಟಿಕಿ ಒಡೆದ ಮತ್ತು ಕಿರಿಚಾಟದ ಸದ್ದು ಕೇಳಿ ಏನಾಯಿತೆಂದು ಕೆಳಗಿನ ಕೋಣೆಯಲ್ಲಿ ಮಲಗಿದ್ದ ಕಾರ್ತಿಕ್ ಬಾಕಳೆ ನೋಡಲು ಮೇಲೆ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಕಾರ್ತಿಕ್ನನ್ನೂ ಕೊಲೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 5 ಮರ್ಡರ್
ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಗುರುವಾರ ನಡೆದಿದೆ. ಮತ್ತೊಂದೆಡೆ ಇದರ ಬೆನ್ನಲ್ಲೇ, ಕೌಟುಂಬಿಕ ಕಲಹದಿಂದ ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷದ ನೀರು ಕುಡಿಸಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಡಬಲ್ ಮರ್ಡರ್
ಬೆಂಗಳೂರಿನ ಸಾರಕ್ಕಿ ಬಳಿಯಿರುವ ಪಾರ್ಕ್ನಲ್ಲಿ ಸುರೇಶ್ ಮತ್ತು ಅನುಷಾ ಎನ್ನುವ ಜೋಡಿ ಗುರುವಾರ ಹತ್ಯೆಗೀಡಾಗಿದ್ದಾರೆ. ಘಟನೆಯಲ್ಲಿ ಸುರೇಶ್ ಎಂಬಾತ ಅನುಷಾಳನ್ನು ಕೊಲೆ ಮಾಡಿದ್ದರೆ, ಸುರೇಶ್ನನ್ನು ಅನುಷಾಳ ತಾಯಿ (ಗೀತಾ) ಕೊಲೆ ಮಾಡಿದ್ದರು ಎಂಬುದು ನಂತರ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ಇದನ್ನೂ ಓದಿ: ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್
ಸುರೇಶ್ ಮತ್ತು ಅನುಷಾ ಇಬ್ಬರ ನಡುವೆ ಹಲವು ವರ್ಷಗಳಿಂದ ಪರಿಚಯವಿತ್ತು. ಅದು ಬೇರೆ ಸಂಬಂಧಕ್ಕೂ ತಿರುಗಿತ್ತು. ಸುರೇಶನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರು. ಆದರೂ ಅನುಷಾಳೊಂದಿಗೆ ಸುರೇಶ್ ಸಂಬಂಧ ಹೊಂದಿದ್ದ. ತಮ್ಮಿಬ್ಬರ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನುಷಾ ಹೇಳಿದ್ದಕ್ಕೆ ಸುರೇಶ್ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅನುಷಾಳ ತಾಯಿ ಸುರೇಶನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಪರಿಣಾಮ ಸುರೇಶ್ ಸಹ ಸಾವನ್ನಪ್ಪಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Fri, 19 April 24