ಜೈಪುರ: ತಾನೇ ಹೆತ್ತ 3 ವರ್ಷದ ಮಗಳನ್ನು ಕೊಂದು, ಆ ಮಗುವಿನ ಶವವನ್ನು ಚಲಿಸುವ ರೈಲಿನಿಂದ ಕೆಳಗೆ ಬಿಸಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ (Rajasthan Crime News) ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. 3 ವರ್ಷದ ಬಾಲಕಿಯನ್ನು ಕೊಂದು (Murder) ಚಲಿಸುವ ರೈಲಿನಿಂದ ಶವ ಎಸೆದ ಆರೋಪದ ಮೇಲೆ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ಆರೋಪಿಗಳನ್ನು ಸುನೀತಾ ಮತ್ತು ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸೋಮವಾರ ಮಧ್ಯರಾತ್ರಿ ಮಹಿಳೆ ಪ್ರಿಯಕರನ ಸಹಾಯದಿಂದ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಶ್ರೀಗಂಗಾನಗರ ರೈಲು ನಿಲ್ದಾಣಕ್ಕೆ ಹೋಗಿದ್ದಳು.
ಇದನ್ನೂ ಓದಿ: Crime News: ಗಂಡ, ಅತ್ತೆ-ಮಾವನಿಂದ ಕಿರುಕುಳ; 22ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ
ಮರುದಿನ ಬೆಳಿಗ್ಗೆ 6.10ಕ್ಕೆ ರೈಲು ಹತ್ತಿದ ಆಕೆ ರೈಲು ಫತುಹಿ ರೈಲ್ವೆ ನಿಲ್ದಾಣಕ್ಕೂ ಮೊದಲು ಕಾಲುವೆಯ ಮೇಲಿನ ಸೇತುವೆಯನ್ನು ತಲುಪಿದಾಗ ಚಲಿಸುವ ರೈಲಿನಿಂದ ಆ ಮಗುವಿನ ಶವವನ್ನು ಎಸೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಶ್ರೀಗಂಗಾನಗರ) ಆನಂದ್ ಶರ್ಮಾ ತಿಳಿಸಿದ್ದಾರೆ.
ಸುನೀತಾ ತನ್ನ ಮಗಳ ಶವವನ್ನು ಕಾಲುವೆಯಲ್ಲಿ ಬಿಸಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಯೋಚಿಸಿದ್ದಳು. ಆದರೆ, ಚಲಿಸುವ ರೈಲಿನಿಂದ ಶವ ಬಿಸಾಡಿದ್ದರಿಂದ ಆ ಹೆಣ ಕಾಲುವೆಯ ಬದಲು ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ಆ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಆ ಶವವನ್ನು ವಶಕ್ಕೆ ಪಡೆದರು.
ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಪತ್ತೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್ಐಎ
5 ಮಕ್ಕಳನ್ನು ಹೊಂದಿರುವ ಸುನೀತಾ ತನ್ನ ಪ್ರೇಮಿ ಸನ್ನಿ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದಳು. ಆಕೆಯ ಉಳಿದ ಮೂವರು ಮಕ್ಕಳು ಆಕೆಯ ಪತಿಯೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಶವ ಸಿಕ್ಕ ಬಳಿಕ ಬಾಲಕಿಯ ಗುರುತು ಪತ್ತೆ ಹಚ್ಚಿದ ಪೊಲೀಸರು ಸುನೀತಾಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಕರೆದೊಯ್ದರು. ವಿಚಾರಣೆ ವೇಳೆ ಆಕೆ ತನ್ನ ಮಗಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.