ಕಾನೂನು ರಕ್ಷಕರೇ ಭಕ್ಷಕರಾದಾಗ ಸಮಾಜ ಹೇಗೆ ತಾನೆ ಸುವ್ಯವಸ್ಥಿತವಾಗಿ ಇರಲು ಸಾಧ್ಯ ಹೇಳಿ…ಹೌದು, ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಭಕ್ಷಕರಾಗಲು ಹೋಗಿ ಇದೀಗ ಜೈಲು ಸೇರಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಸಿರೋಹಿ ಜಿಲ್ಲೆಯ ಬರ್ಲುಟ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸೀಮಾ ಜಾಖರ್ ಅವರನ್ನು ರಾಜಸ್ಥಾನ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅದು ಕೂಡ ಬಿಗ್ ಡೀಲ್ಗೆ ಸಂಬಂಧಿಸಿದ ಪ್ರಕರಣದ ಸಲುವಾಗಿ ಎಂಬುದು ವಿಶೇಷ. ಸಿರೋಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಎಂದೇ ಖ್ಯಾತರಾಗಿದ್ದ ಸೀಮಾ ಜಾಖರ್ ಹೆಸರು ಡ್ರಗ್ಸ್ ಮಾಫಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೆ ಡ್ರಗ್ಸ್ ಕಳ್ಳಸಾಗಣೆದಾರರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಎದುರಿಸಿದ್ದರು. ಇದೀಗ ಈ ಆರೋಪಗಳು ನಿಜವಾಗಿದೆ.
ಏಕೆಂದರೆ ಬರ್ಲುಟ್ ಪೊಲೀಸರು ಕಳೆದ ವರ್ಷ ಡ್ರಗ್ಸ್ ಜಾಲವೊಂದನ್ನು ಬೇಧಿಸಿದ್ದರು. ಅಲ್ಲದೆ ಮಾದಕ ದ್ರವ್ಯ ಸಾಗಣೆದಾರರ ತಂಡವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಅವರ ವಾಹನದಲ್ಲಿ 141 ಕೆಜಿ ವ್ಯಸನಕಾರಿ ಮಾದಕವಸ್ತು ಪತ್ತೆಯಾಗಿತ್ತು. ಆದರೆ ಬಂಧಿತರಾದ ಆರೋಪಿಗಳು ಕೆಲವೇ ಗಂಟೆಗಳ ಅಂತರದಲ್ಲಿ ಪರಾರಿಯಾಗಿದ್ದರು. ಹೀಗೆ ಪರಾರಿಯಾಗಲು ಸಹಾಯ ಮಾಡಿದ್ದು ಸಬ್ ಇನ್‌ಸ್ಪೆಕ್ಟರ್ ಸೀಮಾ ಜಾಖರ್.
ಅಂದು ಕರ್ತವ್ಯದಲ್ಲಿ ಸೀಮಾ ಜಾಖರ್ ಡ್ರಗ್ಸ್ ಡೀಲರ್ಗಳೊಂದಿಗೆ ಡೀಲ್ ಕುದುರಿಸಿದ್ದರು. 10 ಲಕ್ಷ ರೂಪಾಯಿ ಪಡೆಯುವ ಮೂಲಕ ಮಾದಕವಸ್ತು ಸಾಗಣೆದಾರರು ತಪ್ಪಿಸಿಕೊಳ್ಳಲು ನೇರ ಸಹಾಯ ಮಾಡಿದ್ದರು. ಈ ಆರೋಪದ ನಂತರ ಆಕೆ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಆ ಬಳಿಕ ನಡೆದ ತನಿಖೆಯಲ್ಲಿ ಸೀಮಾ ಜಾಖರ್ ಆರೋಪಿಗಳೊಂದಿಗೆ ಡೀಲ್ ಮಾಡಿಕೊಂಡಿರುವ ದೃಶ್ಯಾವಳಿಗಳು ಹೊಟೇಲ್ವೊಂದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿವೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಸೀಮಾ ಜಾಖರ್ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.
ಇದಾಗ್ಯೂ ಸೀಮಾ ಜಾಖರ್ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಹಲವು ಬಾರಿ ತಪ್ಪಿಸಿಕೊಂಡಿದ್ದ ಸ್ವಯಂ ಘೋಷಿತ ಲೇಡಿ ಸಿಂಗಮ್ರನ್ನು ಕೊನೆಗೂ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆ ಜೋಧ್‌ಪುರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ ಸ್ವರೂಪಗಂಜ್ ಪೊಲೀಸರು ಸೀಮಾ ಜಾಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸೋಮವಾರ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿರೋಹಿ ಎಸ್ಪಿ ಧರ್ಮೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಬರ್ಲುಟ್, ಪಾಲಿ ಜಿಲ್ಲೆಯ ಸಂದೇರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಆಗಿ ಮೆರೆದಿದ್ದ ಸೀಮಾ ಜಾಖರ್ ಅವರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಹೌದು, ಕಾನೂನು ರಕ್ಷಕರೇ ಭಕ್ಷಕರಾದಾಗ ಉತ್ತಮ ಸಮಾಜ ಹೇಗೆ ನಿರ್ಮಾಣವಾಗುತ್ತೆ ಹೇಳಿ? .
Published On - 7:52 pm, Mon, 27 June 22