ಕೊಲೆ ಪ್ರಕರಣವೊಂದರ ಗಡಿ ವ್ಯಾಪ್ತಿ ವಿವಾದದಲ್ಲಿ ಇಬ್ಬರು PSI ಗಳ ಅಮಾನತು ಮಾಡಿ SP ಚನ್ನಣ್ಣನವರ್ ಅದೇಶ
ಗಡಿ ಗಲಾಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಥಳದಲ್ಲಿ ಆದ ವಿವಾದ ಸಂಬಂಧ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆ ಇಬ್ಬರು ಪಿಎಸ್‌ಐಗಳನ್ನ ಅಮಾನತ್ತಿನಟ್ಟಿಟ್ಟು ವಿಚಾರಣೆ ನಡೆಸುವಂತೆ ಎಸ್ಪಿ ರವಿ ಡಿ ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ.
ನೆಲಮಂಗಲ: ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಜಿಲ್ಲೆ ಎರಡು ಠಾಣೆಯ ಪೊಲೀಸರ ನಡುವೆ ಗಡಿ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿಯಾಗಿತ್ತು. ಹೀಗಾಗಿ ಎರಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಮೃತ ದೇಹವನ್ನ ಗಂಟೆಗಟ್ಟೆಲೇ ರಸ್ತೆಯಲ್ಲಿ ಬಿಟ್ಟಿದ್ದ ಪ್ರಕರಣ ಸಂಬಂಧ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಸುದ್ದಿ ಬೆನ್ನಲ್ಲೇ ಎರಡು ಠಾಣೆಯ ಪಿಎಸ್‌ಐಗಳನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನವೆಂಬರ್ 22 ರಂದು ದೊಡ್ಡಬಳ್ಳಾಪುರ ಬಳಿಯ ರಾಜನಕುಂಟೆಯ ಮನೆಯೊಂದರಲ್ಲಿ ತನ್ನ ಅಕ್ರಮ ಸಂಬಂದಕ್ಕೆ ತೊಡಕಾಗುತ್ತಾನೆ ಎಂದು ಪತ್ನಿ ಕಲ್ಪನ ತನ್ನ ಪ್ರಿಯಕರ ಲಕ್ಷಣ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಗಂಡ ಬೀರೆಗೌಡ (40) ಕೊಲೆ ಮಾಡಿದ್ದರು. ತದನಂತರ ಮೃತ ದೇಹವನ್ನ ತುಮಕೂರು ಮಾರ್ಗವಾಗಿ ಸಾಗಿಸುವಾಗ ರಸ್ತೆ ಮಧ್ಯೆ ಪೊಲೀಸರನ್ನ ಕಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಪೊಲೀಸ್ ಠಾಣ ವ್ಯಾಪ್ತಿಯ ಅಪ್ಪಕಾರನಹಳ್ಳಿ ಬಳಿ ಮೃತ ದೇಹವನ್ನ ಟಾಟಾ ಏಸ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು.
ಇಬ್ಬರು ಪಿಎಸ್‌ಐಗಳ ನಡುವೆ ಗಡಿ ಕಿತ್ತಾಟ.. ಘಟನೆಗೆ ಸಂಬಂಧಿಸಿದಂತೆ ಅಪ್ಪಕಾರನಹಳ್ಳಿ ಗ್ರಾಮವು ತ್ಯಾಮಗೊಂಡ್ಲು ಹಾಗೂ ದೊಡ್ಡಬೆಳವಂಗಲ ಎರಡು ಠಾಣೆಯ ಗಡಿಗೆ ಹೊಂದಿಕೊಂಡ್ಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಮಂಜೆಗೌಡ ಸ್ಥಳಕ್ಕೆ ದಾವಿಸಿದ ನಂತರ ಇದು ನಮ್ಮ ಠಾಣ ವ್ಯಾಪ್ತಿಗೆ ಬರುವುದಿಲ್ಲ ಎಂದು ತ್ಯಾಮಗೊಂಡ್ಲು ಪಿಎಸ್‌ಐ ವರುಣ್ ಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ವರುಣ್ ಕುಮಾರ್ ಸಹ ಸ್ಥಳಕ್ಕೆ ದೌಡಾಯಿಸಿ ಈ ಪ್ರಕರಣ ತ್ಯಾಮಗೊಂಡ್ಲು ವ್ಯಾಪ್ತಿಗೆ ಬರುವುದಿಲ್ಲ ದೊಡ್ಡ ಬೆಳವಂಗಲ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ.
ಗಡಿ ಪ್ರದೇಶಕ್ಲೆ ಸಂಬಂಧಿಸಿದಂತೆ ಇಬ್ಬರು ಪಿಎಸ್‌ಐಗಳು ರಸ್ತೆಯಲ್ಲಿಯೇ ಜನ ನೋಡುವಂತೆ ರಸ್ತೆಯಲ್ಲಿ ಮಾತುಕತೆಗೆ ಇಳಿದು ಕೊಲೆಯಾಗಿದ್ದ ಮೃತ ದೇಹವನ್ನ ಗಂಟೆಗಟ್ಟಲೆ ರಸ್ತೆಯಲ್ಲಿ ಬಿಟ್ಟಿದ್ದರು. ಗಡಿ ಗಲಾಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಥಳದಲ್ಲಿ ಆದ ವಿವಾದ ಸಂಬಂಧ ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆ ಇಬ್ಬರು ಪಿಎಸ್‌ಐಗಳನ್ನ ಅಮಾನತ್ತಿನಟ್ಟಿಟ್ಟು ವಿಚಾರಣೆ ನಡೆಸುವಂತೆ ಎಸ್ಪಿ ರವಿ ಡಿ ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ.
ಇನ್ನೂ ಹೆಚ್ಚುವರಿ ಎಸ್ಪಿ ಲಕ್ಷ್ಮಿಗಣೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದು ಅಮಾನತ್ತುಗೊಂಡ ಪಿಎಸ್‌ಐಗಳ ಸ್ಥಾನಕ್ಕೆ ಎರಡು ಠಾಣೆಯ ಎಎಸ್‌ಐಗಳನ್ನ ಪ್ರಭಾರಿಯಾಗಿ ನೇಮಿಸಿದ್ದಾರೆ. ಅಲ್ಲದೆ ಠಾಣೆಯಲ್ಲಿ ನಿತ್ಯ ಕಾರ್ಯಗಳಿಗೆ ತೊಡಕು ಉಂಟಾಗುತ್ತಿದೆ ಎಂದು ಸ್ಥಳೀಯರು ಸಹ ದೂರಿದ್ದಾರೆ. -ಮೂರ್ತಿ.ಬಿ
ಇದನ್ನೂ ಓದಿ: ಖಾಕಿಗಳ ‘ವ್ಯಾಪ್ತಿ’ ಕಿತ್ತಾಟದಲ್ಲಿ.. ಅನಾಥವಾಗಿಯೇ ಉಳಿದ ಶವ, ಯಾವೂರಲ್ಲಿ?
Published On - 9:12 pm, Fri, 27 November 20