ಬೆಂಗಳೂರು: ಇಂಟರ್ನ್ಯಾಷನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಗೋಪಾಲ್ ಎಂಬ ಬೆಂಗಳೂರು ಜಯನಗರದ ಆಸಾಮಿ ಡ್ರಗ್ಸ್ ಕೇಸ್ ಮತ್ತು ಬಿಟ್ಕಾಯಿನ್ ಪ್ರಕರಣದಲ್ಲಿ ತಗಲುಹಾಕಿಕೊಂಡಿದ್ದೇ ಬಂತು ಭಾರತದ ರಾಜಕೀಯ ವಲಯದಲ್ಲಿ ಶ್ರೀಕಿಯದ್ದೇ ಸದ್ದು ಎಂಬಂತಾಗಿದೆ. ಕೇವಲ ಎರಡೇ ದಿನಕ್ಕೆ ಜಾಮೀನು ಪಡೆದು ಸದ್ಯಕ್ಕೆ ಅಜ್ಞಾತ ಸ್ಥಳದಲ್ಲಿರೋ ಶ್ರೀಕಿ ಕತ್ತಲ ಜೈಲಲ್ಲಿ ಹೇಗಿದ್ದ ಗೊತ್ತಾ ಎಂಬುದರತ್ತ ಬೆಳಕು ಚೆಲ್ಲುವುದಾದರೆ. ಅಸಲಿಗೆ ಶ್ರೀಕಿ ಜೈಲಿನಲ್ಲಿದ್ದಿದ್ದು ಬರೀ ಎರಡೇ ದಿನ. ಜೈಲಲ್ಲಿದ್ದಾಗ ಶ್ರೀಕಿಗೆ ಭದ್ರತೆ ಜೋರಾಗಿತ್ತು. ಪರಪ್ಪನ ಅಗ್ರಹಾರ ಜೈಲಲ್ಲಿದ್ದಾಗ ಶ್ರೀಕಿಯ ದಿನಚರಿಯ ಇಂಟ್ರಸ್ಟಿಂಗ್ ಸ್ಟೊರಿ ಇಲ್ಲಿದೆ.
ಜೀವನ್ ಭೀಮಾ ನಗರ ಕೇಸ್ ನಲ್ಲಿ ಬಂಧನವಾಗಿದ್ದ ಶ್ರೀಕಿಯನ್ನ ಕೋವಿಡ್ ಕ್ವಾರಂಟೈನ್ ಸೆಲ್ ಗೆ ಜೈಲಾಧಿಕಾರಿಗಳು ಶಿಫ್ಟ್ ಮಾಡಿದ್ದರು. ಹದಿನೈದು ಮಂದಿಗೆ ವ್ಯವಸ್ಥೆ ಇರುವ ಬ್ಯಾರಕ್ ನಲ್ಲಿ ಶ್ರೀಕಿ ಒಬ್ಬನನ್ನೇ ಶಿಫ್ಟ್ ಮಾಡಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿತ್ತು. ರಾತ್ರಿ ಹಗಲು ತಲಾ ಒಂದು ಪಾಳಿಯಂತೆ ನಾಲ್ವರು ಸಿಬ್ಬಂದಿಯನ್ನು ಬ್ಯಾರಕ್ ಮುಂದೆಯೇ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಜೈಲಿನಲ್ಲಿ ಇರಿಸಿದ್ದ ಜೈಲಾಧಿಕಾರಿಗಳು ಶ್ರೀಕಿಯಿದ್ದ ಸೆಲ್ ಬಳಿಗೆ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ.
ಶ್ರೀಕಿ ವಿರುದ್ಧ ಗಂಭೀರ ಆರೋಪಗಳು ಇರುವ ಹಿನ್ನೆಲೆ ಅಧಿಕಾರಿಗಳು ಮೊದಲೇ ಎಚ್ಚರಿಕೆ ವಹಿಸಿದ್ದರು. ಜೈಲಿನಲ್ಲಿ ಸಹ ಕೈದಿಗಳಿಂದ ಶ್ರೀಕಿಗೆ ಸಮಸ್ಯೆಯಾದರೆ ಕಷ್ಟ ಎಂದು ಬಗೆದು ಮೊದಲೇ ಎಚ್ಚರಿಕೆ ವಹಿಸಿದ್ದರು. ಹೀಗಾಗಿ ಕ್ವಾರಂಟೈನ್ ಸೆಲ್ ಬಳಿ ಯಾವೊಬ್ಬ ಕೈದಿಗೂ ಅವಕಾಶ ಕೊಡದೆ ನಿರ್ಬಂಧ ಹೇರಿದ್ದರು.
ಶ್ರೀಕಿ ಜೈಲಿನಲ್ಲಿ ಇದ್ದಾಗ ಮೂರು ಇಂಗ್ಲಿಷ್ ಭಾಷೆಯ ಆಧ್ಯಾತ್ಮಿಕ ಪುಸ್ತಕಗಳನ್ನ ಪಡೆದಿದ್ದ. ಅದ್ರಲ್ಲಿ ಶ್ರೀ ಕೃಷ್ಣನ ವೇದೋಪದೇಶದ ಒಂದು ಪುಸ್ತಕ ಪಡೆದು ಓದುತ್ತಿದ್ದ. ಸಿಬ್ಬಂದಿ ಮಾತನಾಡಿಸಿದರೂ ಪುಸ್ತಕ ಓದಿನಲ್ಲೇ ಮಗ್ನನಾಗಿ ಇರುತ್ತಿದ್ದ ಶ್ರೀಕಿ. ಪ್ರತೀ ಗಂಟೆಗೆ ಭಗವದ್ಗೀತೆ ಪಠನ ಮಾಡಿಕೊಂಡು ಧ್ಯಾನ ಮಾಡುತ್ತಿದ್ದ. ಶ್ರೀಕಿಯ ಬಾಯಲ್ಲಿ ನಿರರ್ಗಳವಾಗಿ ಬರ್ತಿದ್ದ ಶ್ಲೋಕಗಳನ್ನು ಕೇಳಿ ಸಿಬ್ಬಂದಿ ಅವಾಕ್ಕಾಗಿದ್ದರು. ರಾತ್ರಿ ಹಗಲು ಶ್ರೀಕಿಯ ಚಲನವಲನ ಪರಿಶೀಲನೆಗೆ ಓರ್ವ ಅಧಿಕಾರಿಯನ್ನೂ ನೇಮಿಸಲಾಗಿತ್ತು.
(sriki alias sri krishna international hacker used to read bhagavath geetha in parappana agrahara jail)