ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಬರ್ಬರ ಹತ್ಯೆ; ಕೊಲೆ ಕಂಡು ಇನ್ನೋರ್ವ ವ್ಯಕ್ತಿಯೂ ಸಾವು
Murder: ಸಂಜಿತ್ ಬೈಕ್ನಿಂದ ಕೆಳಗೆ ಬಿದ್ದಾಗ ಆತನ ಹೆಂಡತಿ ಮತ್ತು ಇತರ ಕೆಲವರ ಮುಂದೆಯೇ ಸಂಜಿತ್ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಕೊಲೆಯನ್ನು ನೋಡಿದ 56 ವರ್ಷದ ರಾಮು ಎಂಬುವವರು ಆಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಳೀಯ ಮುಖಂಡನೊಬ್ಬನನ್ನು ಪತ್ನಿಯ ಎದುರೇ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯನ್ನು ಕಣ್ಣಾರೆ ನೋಡಿದ ಮಧ್ಯ ವಯಸ್ಕರೊಬ್ಬರು ರಕ್ತವನ್ನು ನೋಡಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಲಪ್ಪುಲ್ಲಿ ಮೂಲದ ಎಸ್. ಸಂಜಿತ್ (27) ಎಂಬ ಆರ್‌ಎಸ್‌ಎಸ್ ನಾಯಕ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಪತ್ನಿಯನ್ನು ಜಿಲ್ಲೆಯ ಮಂಬರಂ ಪ್ರದೇಶದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.
ಆ ಹಲ್ಲೆ ನಡೆಸಿದವರು ಸಂಜಿತ್ನನ್ನು ವಾಹನದಲ್ಲಿ ಹಿಂಬಾಲಿಸಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸಂಜಿತ್ ಬೈಕ್ನಿಂದ ಕೆಳಗೆ ಬಿದ್ದಾಗ ಆತನ ಹೆಂಡತಿ ಮತ್ತು ಇತರ ಕೆಲವರ ಮುಂದೆಯೇ ಸಂಜಿತ್ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಘಟನೆಯಿಂದ ಸಂಜಿತ್ ದೇಹದ ಮೇಲೆ 50ಕ್ಕೂ ಹೆಚ್ಚು ಇರಿತದ ಗಾಯಗಳಾಗಿ ಸಂಜಿತ್ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕೊಲೆಯನ್ನು ನೋಡಿದ 56 ವರ್ಷದ ರಾಮು ಎಂಬುವವರು ಆಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮರುತ ರಸ್ತೆಯ ನಿವಾಸಿ 56 ವರ್ಷದ ರಾಮು ಅವರು ಸಂಜಿತ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ರಕ್ತಪಾತವನ್ನು ನೋಡಿದ್ದರಿಂದ ಆಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೊಲೆಯ ದೃಶ್ಯವನ್ನು ನೋಡಿದ ನಂತರ ಅವರು ಕುಸಿದುಬಿದ್ದರು. ರಾಮು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಹತ್ಯೆಯ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಸಂಜಿತ್ ಹತ್ಯೆಯಲ್ಲಿ ಇಸ್ಲಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ನ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರ ಪಾತ್ರವಿದೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನುಮಾನ ವ್ಯಕ್ತಪಡಿಸಿದೆ. ಈ ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಲು ಪೊಲೀಸರು ಮತ್ತು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ