3 ದಿನಗಳ ಹಿಂದೆಯೇ ಕೊಲೆ..ಶವಗಳ ಜತೆಯೇ ಇದ್ದ ಟೆಕ್ಕಿ! FSL ಪರಿಶೀಲನೆ ವೇಳೆ ಹೊರಬಿತ್ತು ಭಯಾನಕ ಸತ್ಯ
ಆ ಟೆಕ್ಕಿ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಐದು ವರ್ಷಗಳ ದಾಂಪತ್ಯ ಬದುಕಿಗೆ ಸಾಕ್ಷಿಯಾಗಿ ಮುದ್ದಾದ ಇಬ್ಬರು ಹೆಣ್ಣುಮಕ್ಕಳು ಮನೆಯ ಸಂತಸ ಹೆಚ್ಚಿಸಿದ್ರು. ಉದ್ಯೋಗ ನಿಮಿತ್ತ ದೂರದ ನೆರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದರು. ಉಜ್ವಲ ಭವಿಷ್ಯದ ಕನಸು ಕಂಡಿದ್ದ ಆ ಇಡೀ ಸುಂದರ ಕುಟುಂಬ ದುರಂತ ಸಾವಿಗೀಡಾಗಿ ಮಸಣ ಸೇರಿದ್ದು, ಕಾರಣ ಇನ್ನೂ ನಿಗೂಢವಾಗಿಯೇ ಇದೆ.
ಬೆಂಗಳೂರು, (ಆಗಸ್ಟ್ 04): ಒಂದೇ ಕುಟುಂಬದ ನಾಲ್ವರು ಸಾವಿನ ಪ್ರಕರಣ ಬೆಂಗಳೂರಿನಲ್ಲಿ(Bengaluru) ಬೆಚ್ಚಿಬೀಳಿಸಿದೆ. ಮೂಲತಃ ಆಂಧ್ರದವರಾದ ವಿಜಯ್ ಹಾಗೂ ಹೇಮಾವತಿ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ರು. ಕಾಡುಗೋಡಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು. ವಿಜಯ್ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಾಗಿದ್ದು, ಕೈತುಂಬ ಸಂಬಳ ಬರುತ್ತಿತ್ತು. ಆರ್ಥಿಕ ಕೊರತೆಯೇನು ಇರಲಿಲ್ಲ. ಆದ್ರೆ ಗಂಡ-ಹೆಂಡ್ತಿ ನಡುವೆ ಅದೇನಾಯ್ತೋ ಏನೋ ಟೆಕ್ಕಿ(Techie) ಕ್ರೌರ್ಯ ಇಡೀ ಕುಟುಂಬವನ್ನೇ ಬಲಿ ಪಡೆದಿದೆ. ಇನ್ನು ಟೆಕ್ಕಿ ವಿಜಯ್ 3 ದಿನಗಳ ಹಿಂದೆಯೇ ಹೆಂಡತಿಯನ್ನೇ ಕೊಲೆ ಮಾಡಿದ್ದನಂತೆ. ನಂತರ 8 ತಿಂಗಳ ಹಸುಗೂಸನ್ನು ಕರ್ಚಿಫ್‌ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದನಂತೆ. ಅದೇ ರೀತಿ 2 ವರ್ಷದ ಹೆಣ್ಣುಮಗಳನ್ನು ಕೊಲೆ ಮಾಡಿದ್ದ. ಹೆಂಡತಿ ಕೊಂದ ಬಳಿಕ 3 ದಿನ ಮೃತದೇಹಗಳ ಜತೆಯೇ ಇದ್ದ ಪತಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ: ಗಲಾಟೆಯಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ, ದೂರು ದಾಖಲು
ನಿನ್ನೆ (ಆಗಸ್ಟ್ 03) ಬೆಳಗ್ಗೆ 11:30ರ ವೇಳಗೆ ಅಕ್ಕಪಕ್ಕದ ನಿವಾಸಿಗಳು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ಮಡದಿ ಮತ್ತು ಇಬ್ಬರು ಹೆಣ್ಣು ಮಕ್ಕಳ ದೇಹ ಫ್ಲಾಟ್ ಕೋಣೆಯ ನೆಲದ ಮೇಲೆ ಬಿದ್ದಿದ್ರೆ,, ಪತಿ ಫ್ಯಾನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿರೋದು ಕಂಡು ಬಂದಿದೆ.
FSL ಅಧಿಕಾರಿಗಳ ಪರಿಶೀಲನೆ ವೇಳೆ ಹೊರಬಿತ್ತು ಭಯಾನಕ ಸತ್ಯ
ಇನ್ನು ಮಕ್ಕಳು ಆಳುವುದನ್ನು ನೋಡಿ ಕೊನೆಗೆ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಹೆಂಡತಿ ಕೊಲೆಯಾದ 24 ಗಂಟೆಗಳ ನಂತರ ಇಬ್ಬರು ಮಕ್ಕಳನ್ನು ಸಹ ಹತ್ಯೆ ಮಾಡಿದ್ದಾನೆ. FSL ಅಧಿಕಾರಿಗಳ ಪರಿಶೀಲನೆ ವೇಳೆ ಕೊನೆಯದಾಗಿ ಸತ್ತಿರುವುದು ವಿಜಯ್ ಎಂದು ಗೊತ್ತಾಗಿದೆ. ಮೂರು ದಿನಗಳ ಹಿಂದೆ ಹೆಂಡತಿ, ಎರಡು ದಿನಗಳ ಹಿಂದೆ ಮಕ್ಕಳನ್ನು ಕೊಲೆ ಮಾಡಿ ನಿನ್ನೆ(ಆಗಸ್ಟ್ 03) ವಿಜಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೀರಾರ್ಜುನ ವಿಜಯ್ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಆದ್ರೆ ಹೇಮಾವತಿ ಮೃತ ದೇಹ ಡಿ ಕಂಪೋಸ್ ಆಗಿದೆ. ಉಳಿದ ಮೂರು ದೇಹಗಳಿಗೆ ಹೋಲಿಕೆ ಮಾಡಿದ್ರೆ ಹೇಮಾವತಿ ಕೊಲೆ ಒಂದು ದಿನ ಮೊದಲೇ ನಡೆದಿದ್ದು, ಟೆಕ್ಕಿ ವಿಜಯ್ ಹೆಂಡತಿ ಹಾಗೂ ಮಕ್ಕಳ ಶವದ ಜೊತೆಯೇ ಎರಡು ದಿನ ಕಳೆದಿದ್ದಾನೆ ಎನ್ನುವ ಅಂಶ ಬಹಿರಂಗವಾಗಿದೆ.
ಟೆಕ್ಕಿ ಕುಟುಂಬದ ಸಾವಿನ ನಿಗೂಢ ಭೇದಿಸಲು ಮುಂದಾದ ಖಾಕಿ
ಟೆಕ್ಕಿ ಕುಟುಂಬದ ಸಾವಿನ ನಿಗೂಢ ಭೇದಿಸಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ವಿಧಿವಿಜ್ಞಾನ ತಂಡ ಮನೆಯನ್ನು ಪರಿಶೀಲಿಸಿ ಸಾಕ್ಷ್ಯ ಸಂಗ್ರಹಿಸಿದೆ. ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಣೆ ಮಾಡಲಾಗಿದೆ. ಇಂದು(ಆಗಸ್ಟ್ 04) ನಾಲ್ವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಘಟನೆಗೆ ಮೂಲ ಕಾರಣ ಏನು ಎಂದು ತಿಳಿಯಲು ಪೊಲೀಸರು ವಿಜಯ್ ಹಾಗೂ ಹೇಮಾವತಿಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆದ್ರೆ, ಸದ್ಯ ಎರಡು ಮೊಬೈಲ್ ಗಳು ಲಾಕ್ ಆಗಿದ್ದು, ಓಪನ್ ಆದ ಬಳಿಕ ಒಂದಷ್ಟು ಮಾಹಿತಿ ಲಭ್ಯ ಸಾಧ್ಯತೆ ಇದ್ದು, ಮೂರು ಕೊಲೆ ಮಾಡಿ ಸೂಸೈಡ್ ಮಾಡಿಕೊಂಡಿದ್ದೇಕೆ ವೀರಾರ್ಜುನ ವಿಜಯ್..? ಎನ್ನುವ ಸಾಕಷ್ಟು ಅನುಮಾನ ಮೂಡಿಸಿದ್ದು, ಟೆಕ್ಕಿ ತನ್ನ ಮಡದಿ ಮಕ್ಕಳನ್ನು ಕೊಲ್ಲಲು ಇರುವ ಬಲವಾದ ಕಾರಣವೇನು ಎನ್ನುವುದನ್ನು ಪತ್ತೆಹಚ್ಚಬೇಕಿದೆ.
ಅದೇನೆ ಇರಲಿ ಗಂಡ, ಹೆಂಡ್ತಿ ದುಡುಕಿನ ನಿರ್ಧಾರಕ್ಕೆ ಮುದ್ದಾದ ಹೆಣ್ಣುಮಕ್ಕಳಿಬ್ಬರು ಬಲಿಯಾಗಿದ್ದು, ತನಿಖೆ ಬಳಿಕವೇ ಸಾವಿನ ಸತ್ಯ ಹೊರಬರಬೇಕಿದೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:30 am, Fri, 4 August 23