ಮೈಸೂರು: ಟೊಮೆಟೊ (Tomato) ವಿಚಾರಕ್ಕೆ ಮಹಿಳೆಯನ್ನ ಕೊಲೆ (Murder) ಮಾಡಿದ ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರೀಶ್, ಶಿವರಾಜ್ ಬಂಧಿತರು. ಮೈಸೂರಿನ ಉದಯಗಿರಿಯ ಕೆ.ಎನ್.ಪುರದಲ್ಲಿ ಫೆಬ್ರವರಿ 2ರಂದು ಸುನಿತಾ ಹತ್ಯೆಯಾಗಿತ್ತು. ಟೊಮೆಟೊ ಎಸೆದ ವಿಚಾರದಲ್ಲಿ ಸುನೀತಾ ಎಂಬಾಕೆಯನ್ನು ಆರೋಪಿಗಳು ಕೊಂದಿದ್ದರು. ಕೊಳೆತ ಟೊಮೆಟೊಗಳನ್ನ ಬೀದಿಗೆ ಬಿಸಾಡಿದ ವಿಚಾರಕ್ಕೆ ಸುನೀತಾ ತಾಯಿ ಭಾರತಿ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನ ಧರ್ಮಪುರಿಯಲ್ಲಿ ತಲೆ ಮರೆಸಿಕೊಂಡಿದ್ದು ಪೊಲೀಸ್ ಕಾರ್ಯಚರಣೆ ಬಳಿಕ ಪತ್ತೆಯಾಗಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖರ್ಚಿಗೆ ಹಣ ಬೇಕಾದಾಗ ಮನೆಗಳ್ಳತನ:
ಬೆಂಗಳೂರು ಗ್ರಾಮಾಂತರ: ಖರ್ಚಿಗೆ ಹಣ ಬೇಕಾದಾಗ ಕಳ್ಳತನ ಮಾಡುತ್ತಿದ್ದ ಮನೆಗಳ್ಳನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನರೇಂದ್ರಬಾಬುನನ್ನು ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 4ವರೆ ಲಕ್ಷ ಮೌಲ್ಯದ 77 ಗ್ರಾಂ ಚಿನ್ನಾಭರಣ, ಬೆಳ್ಳಿ,ಮೊಬೈಲ್, ಜಪ್ತಿ ಮಾಡಿದ್ದಾರೆ. ಅಗಲಕುಪ್ಪೆ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸುವಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ:
ಚಿತ್ರದುರ್ಗ: ಚಳ್ಳಕೆರೆ ಪಟ್ಟಣದ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ ಮಾಡಲಾಗಿದೆ. ಬಳ್ಳಾರಿಯಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ 10 ಟನ್ ಅಕ್ಕಿ ಮತ್ತು ಲಾರಿ ಚಾಲಕ ಮುರಳಿಯನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಚಳ್ಳಕೆರೆ ತಹಸೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ಮಾಡಿದ್ದು, ಅಕ್ರಮ ದಂಧೆಕೋರರಿಗೆ ತಹಸೀಲ್ದಾರ್ ರಘುಮೂರ್ತಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇನ್ನು ಮುಂದೆ ನಿರಂತರ ಕಾರ್ಯಾಚರಣೆ ಮಾಡಲಿದ್ದು, ರಾತ್ರಿ ನಿದ್ದೆಗೆಟ್ಟು ನಿರಂತರ ಕಾರ್ಯಾಚರಣೆ ಮಾಡುತ್ತೇವೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಗಂಡನ ಎದುರೆ ಪತ್ನಿಯ ಬರ್ಬರ ಹತ್ಯೆ:
ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದೆ. ಗಂಡನ ಎದುರೆ ಪತ್ನಿಯ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಲ್ಲಿನಿಂದ ಜಜ್ಜಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸುಮಾ ಕೊಲೆಯಾದ ಮಹಿಳೆ. ಚಿಂದಿ ಆಯ್ದು ದಂಪತಿಗಳಿಬ್ಬರು ಜೀವನ ಸಾಗಿಸುತ್ತಿದ್ದರು. ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಮಲಗಿರುವಾಗ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಾಯಕಾರಿ ವ್ಹೀಲಿಂಗ್ ಸ್ಟಂಟ್ ಮಾಡುತ್ತಿದ್ದ ನಾಲ್ವರ ಬಂಧನ:
ಮಂಗಳೂರು: ಬೈಕ್ ಚಲಾಯಿಸುತ್ತಲೇ ಅಪಾಯಕಾರಿ ವ್ಹೀಲಿಂಗ್ ಸ್ಟಂಟ್ ಮಾಡಿದ ನಾಲ್ವರ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಯಾಸ್ ಝಿಯಾನ್ ಎಂಬಾತ ಬೈಕ್ನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ. ಇಬ್ಬರನ್ನು ಕುಳ್ಳಿರಿಸಿಕೊಂಡು ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡಿದ್ದ ಇಲ್ಯಾಸ್, ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲಬೈಲ್ವರೆಗೆ ಸ್ಟಂಟ್ ಮಾಡಿದ್ದಾನೆ. ಇತರ ವಾಹನ, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿ ಸವಾರಿ ಮಾಡಿದ್ದು, ಸ್ಟಂಟ್ ವಿಡಿಯೋ ಶೂಟ್ ಮಾಡಿ ತನ್ನ ಇನ್ ಸ್ಟಾಗ್ರಾಂ ಅಕೌಂಟ್ನಲ್ಲಿ ಇಲ್ಯಾಸ್ ಹಾಕಿಕೊಂಡಿದ್ದ. ಇಲ್ಯಾಸ್ ಸೇರಿ ಬೈಕ್ ಮಾಲಕ ಮತ್ತು ವಿಡಿಯೋ ಶೂಟ್ ಮಾಡಿದ ಸಫ್ವಾನ್ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೆ ಪ್ರತ್ಯೇಕ ಮೂರು ಪ್ರಕರಣದಲ್ಲಿ ಮೂವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು, ಉಳ್ಳಾಲದಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ತೌಸೀಫ್, ಅಡ್ಯಾರ್ ಸಮೀಪ ಬೈಕ್ನಲ್ಲಿ ವ್ಹೀಲಿಂಗ್ ಮಾಡಿದ ಆರೋಪದ ಮೇಲೆ ಕಿಶನ್ ಶೆಟ್ಟಿ ಮತ್ತು ವಾಮಂಜೂರಿನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆನೀಝ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:
ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್