Crime Update: ವ್ಯಕ್ತಿ ಗಮನ ಬೇರೆಡೆ ಸೆಳೆದು ಕಳ್ಳತನ, ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ಹನಿಟ್ರ್ಯಾಪ್ ಆರೋಪಿಗಳ ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 03, 2022 | 11:18 PM

ಕಾರಿನಿಂದ ಕೆಳಗಿಳಿದು ಪರಿಶೀಲಿಸುವಾಗ ಕಳ್ಳರು ಅವರ ಗಮನ ಬೇರೆಡೆ ಸೆಳೆದು, 10 ಲಕ್ಷ ರೂಪಾಯಿ ಹಣವಿದ್ದ ಚೀಲ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

Crime Update: ವ್ಯಕ್ತಿ ಗಮನ ಬೇರೆಡೆ ಸೆಳೆದು ಕಳ್ಳತನ, ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ಹನಿಟ್ರ್ಯಾಪ್ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
Follow us on

ವಿಜಯಪುರ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ₹ 10 ಲಕ್ಷ ಕಳ್ಳತನ ಮಾಡಿರುವ ಘಟನೆ ವಿಜಯಪುರ ನಗರದ ಬಿಎಲ್​ಡಿ ರಸ್ತೆಯಲ್ಲಿ ನಡೆದಿದೆ. ನಿಂಗರಾಜ್ ನಾಶಿ ಎಂಬುವವರು ಬ್ಯಾಂಕ್​ನಲ್ಲಿ ಹಣ ವಿತ್​ಡ್ರಾ ಮಾಡಿಕೊಂಡು ಕಾರಿನಲ್ಲಿ ಹೊರಟಿದ್ದರು. ಸಿದ್ದೇಶ್ವರ ದೇವಸ್ಥಾನ ಸಮೀಪ ಕಾರಿನ ಎಂಜಿನ್ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಕೆಲವರು ಅವರ ಗಮನ ಸೆಳೆದರು. ನಿಂಗರಾಜ್ ಅವರು ಕಾರಿನಿಂದ ಕೆಳಗಿಳಿದು ಪರಿಶೀಲಿಸುವಾಗ ಕಳ್ಳರು ಅವರ ಗಮನ ಬೇರೆಡೆ ಸೆಳೆದು, ಹಣದ ಚೀಲ ಕದ್ದು ಪರಾರಿಯಾಗಿದ್ದಾರೆ. ಗುತ್ತಿಗೆದಾರ ಹನುಮಂತ ಚಿಂಚಲಿ ಅವರ ಬಳಿ ಲಿಂಗರಾಜ ನಾಶಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲಿಸಿದರು.

ನಕಲಿ ಬಂಗಾರ ನಾಣ್ಯ ನೀಡಿ ವಂಚನೆಗೆ ಯತ್ನ
ಬಳ್ಳಾರಿ: ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆಗೆ ಯತ್ನಿಸುತ್ತಿದ್ದ ಆರೋಪಿ ನಿರಂಜನ್ ಗುಡೇಕೋಟೆ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಾಯಿಯ ಚಿಕಿತ್ಸೆಗೆ ಹಣ ಬೇಕು ಎಂದು ಆರೋಪಿಯು ರಾಜ ಎಂಬುವವರಿಗೆ 300 ನಕಲಿ ಚಿನ್ನದ ನಾಣ್ಯವನ್ನು 50 ಸಾವಿರ ರೂಪಾಯಿಗೆ ಮಾರಲು ಯತ್ನಿಸುತ್ತಿದ್ದ. ಗುಡೇಕೋಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹನಿಟ್ರ್ಯಾಪ್​ ಆರೋಪಿಗಳ ಬಂಧನ
ಕಾರವಾರ: ಶಿರಸಿಯಲ್ಲಿ ವ್ಯಕ್ತಿಯೊಬ್ಬನನ್ನು ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ ₹ 15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಜಿತ್ ಶ್ರೀಕಾಂತ್ ನಾಡಿಗ್, ಧನುಷ್ಯ ಕುಮಾರ್ ಅಲಿಯಾಸ್​ ದಿಲೀಪ್ ಕುಮಾರ್ ಶೆಟ್ಟಿ, ಪದ್ಮಜಾ ಡಿ.ಎನ್. ಎಂದು ಗುರುತಿಸಲಾಗಿದೆ. ಸರ್ಕಾರಿ ನೌಕರಿ ಕೊಡಿಸುವುದಾಗಿ ಶಿವಮೊಗ್ಗಕ್ಕೆ ಕರೆಸಿಕೊಂಡು ರೂಮ್​​ನಲ್ಲಿ ಕೂಡಿಹಾಕಿ ಯುವತಿ ಜೊತೆ ಇರುವ ವಿಡಿಯೊ ಚಿತ್ರೀಕರಿಸಿ ₹ 15 ಲಕ್ಷ ನೀಡುವಂತೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು ಎಂದು ದೂರಲಾಗಿದೆ.

ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ಸಂತ್ರಸ್ತನನ್ನು ನಂಬಿಸಿದ್ದ ಆರೋಪಿಗಳು ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಸಿ ಆತನನ್ನು ರೂಂ ಒಂದರಲ್ಲಿ ಕೂಡಿಹಾಕಿದ್ದರು. ಬಳಿಕ ಆತನನ್ನು ನಗ್ನಗೊಳಿಸಿ ಮಹಿಳೆಯ ಜತೆ ರಾಸಲೀಲೆ ನಡೆಸಿದಂತೆ ಫೋಟೊ ಹಾಗೂ ವಿಡಿಯೋ ಚಿತ್ರೀಕರಿಸಿದ್ದರು. ₹ 15 ಲಕ್ಷ ರೂ.‌ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದರು. ಜನವರಿ 18ರಂದು ಆತನ ತಂದೆಯ ಬಳಿ ತೆರಳಿ ಫೋಟೊ, ವಿಡಿಯೊ ತೋರಿಸಿ, ಪುತ್ರ ಜೀವಂತವಾಗಿ ಬೇಕಂದ್ರೆ ಹಣ ನೀಡುವಂತೆ ಧಮಕಿ ಹಾಕಿದ್ದರು. ಸುಳ್ಳು ಕರಾರು ಪತ್ರ, ಬ್ಲ್ಯಾಂಕ್ ಚೆಕ್ ಕೂಡಾ ಬರೆಸಿಕೊಂಡಿದ್ದರು. ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿದ ಶಿರಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇದನ್ನೂ ಓದಿ: Crime News: ಮೊಬೈಲ್ ಗೇಮ್ಸ್​ ಹುಚ್ಚು ಅಂಟಿಸಿಕೊಂಡಿದ್ದ ಬೆಂಗಳೂರು ಯುವಕ ನಾಪತ್ತೆ; ಕಾರವಾರದಲ್ಲಿ ಸರ್ಕಾರಿ ಉದ್ಯೋಗಿ ಆತ್ಮಹತ್ಯೆ

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ