ಅಯೋಧ್ಯೆ ವಿಶೇಷ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಪ್ರಕರಣ; ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು?
ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು-ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದಾಗ ಮಾರ್ಗ ಮಧ್ಯೆ ಹತ್ತಿದ ಅನ್ಯಕೋಮಿನ ಮೂವರು ಯುವಕರು ರೈಲಿಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಕೆರಳಿದ್ದ ರಾಮ ಭಕ್ತರು ರೈಲು ತಡೆದ ಪ್ರತಿಭಟನೆ ನಡೆಸಿದ್ದರು. ಬಳಿಕ ಒಬ್ಬ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಜಯನಗರ, ಫೆ.23: ಮೈಸೂರು-ಅಯೋಧ್ಯೆ (Ayodhya) ದಾಮಾ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಆರೋಪಿ ಶೇಕ್ಷಾವಲಿ ಸಾಹೆಬ್ನನ್ನು ರೈಲ್ವೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ರೈಲ್ವೆ ವಲಯದಲ್ಲಿ ಟೆಕ್ನೆಷನ್ ಆಗಿರೋ ಶೇಕ್ಷಾವಲಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ. ಕರ್ತವ್ಯಕ್ಕೆ ಹೋಗುವ ಅವಸರದಲ್ಲಿ ಎಡವಟ್ಟು ನಡೆದಿದೆ ಎಂದು ಒಪ್ಪಿಕೊಂಡಿದ್ದಾನೆ.
ಹುಬ್ಬಳ್ಳಿಗೆ ತೆರಳುವ ರೈಲು ಮೂರನೇ ಪ್ಲಾಟ್ ಫಾರಂನಲ್ಲಿತ್ತು. ಒಂದನೇ ಪ್ಲಾಟ್ ಫಾರಂ ಮೇಲೆ ಅಯೋಧ್ಯೆಯಿಂದ ಬಂದಿರುವ ರೈಲು ನಿಂತಿತ್ತು. ಮೇಲ್ಸೇತುವೆ ಮೂಲಕ ಹೋದರೆ ಮೂರನೇ ಪ್ಲಾಟ್ ಫಾರಂನಲ್ಲಿರುವ ರೈಲು ಹಿಡಿಯಲು ಕಷ್ಟವಾಗುತ್ತದೆ ಎಂದು ಅಯೋಧ್ಯೆ ರೈಲಿನ ಮೂಲಕ ಹೋಗಲು ಯತ್ನಸಿದ್ದರಂತೆ.
ಅಲ್ಲದೆ, ಅಯೋಧ್ಯೆ ರೈಲು ಹತ್ತುತ್ತಿದ್ದಂತೆ ಹಿಂದೂಪರ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆದಿದೆ. ಈ ವೇಳೆ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದೆವು. ಬೇಕು ಅಂತಲೂ ಅಥವಾ ಯಾವುದೇ ದುರುದ್ದೇಶದಿಂದ ಹೇಳಿಲ್ಲ ಎಂದು ಆರೋಪಿ ಶೇಕ್ಷಾವಲಿ ರೈಲ್ವೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂದು ಉನ್ನತ ರೈಲ್ವೆ ಪೋಲಿಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?
ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು ಬೋಗಿ ನಂ 2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಲು ಮುಂದಾಗಿದ್ದಾರಂತೆ. ಯಾತ್ರಿಕರು ಯುವಕರನ್ನ ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ಸೂಚಿಸಿದ್ದರು.
ಇದನ್ನೂ ಓದಿ: ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆದರಿಕೆ ಪ್ರಕರಣ; ಸರ್ಕಾರ ಸಮಗ್ರ ತನಿಖೆ ನಡೆಸಲಿ- ಸಿಟಿ ರವಿ
ಆದರೆ ಆ ಯುವಕರು ಯಾತ್ರಿಕರ ಮಾತು ಕೇಳಿದೆ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ರೈಲು ಏನು ನಿಮ್ಮ ಅಪ್ಪನ ಮನೆದಲ್ಲ. ಇದಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ ಅನ್ಯಕೋಮಿನ ಯುವಕರು ಬೆದರಿಕೆ ಹಾಕಿದ್ದರು. ಯುವಕರನ್ನ ಬಂಧಿಸಿ ಅವರ ವಿರುದ್ಧ ಎಪ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ರೈಲು ತಡೆದು ಪ್ರತಿಭಟನೆ ಇಳಿದಿದ್ದರು. ಅದರಂತೆ ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರಿಗೆ ಮೂವರು ಯುವಕರನ್ನು ಒಪ್ಪಿಸಲಾಗಿತ್ತು.
ಧಮ್ಕಿ ಹಾಕಿದ್ದ ಅನ್ಯಕೋಮಿನ ಯುವಕರನ್ನ ಬಂಧಿಸುವ ಕೆಲಸ ಮಾಡಬೇಕಿದ್ದ ರೈಲ್ವೆ ಪೋಲೀಸರು ಯಾತ್ರಿಕರ ಮುಂದೆ ಅವರನ್ನ ಬಿಟ್ಟು ಕಳಿಸಿದ್ದರು. ಇದರಿಂದ ಕೆರಳಿದ ರಾಮ ಭಕ್ತರು ರೈಲ್ವೆ ಪೋಲಿಸರ ಮೇಲೆ ಆಕ್ರೋಶಗೊಂಡು ಅಯೋಧ್ಯೆ ರೈಲನ್ನು ಸ್ಟಾಪ್ ಮಾಡಿ ಒಂದು ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಮಾಡಿದ್ದರು. ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಹೊಸಪೇಟೆಯ ಸ್ಥಳೀಯ ಹಿಂದೂ ಕಾರ್ಯಕರ್ತರು, ಭಜರಂಗದಳ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ಆಗಮಿಸಿ ಪ್ರತಿಭಟಿಸಿದ್ದರು.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿಜಯನಗರ ಎಸ್ಪಿ ಶ್ರೀಹರಿಬಾಬು, ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ರೈಲು ಪ್ರಯಾಣ ಮುಂದುವರೆಯುವಂತೆ ಯಾತ್ರಿಕರ ಮನವೊಲಿಸುವಲ್ಲಿ ಯಶಸ್ವಿಯಾದರು.
ಗೋದ್ರಾ ಹತ್ಯಾ ಕಾಂಡ ಮತ್ತೆ ಮರಕಳಿಸುತ್ತೆ ಅಂತಾ ಹೇಳಿದ್ದ ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ ಮಾತು ನೆನಪಾಗಿ ನಾವು ಇದನ್ನ ಸುಮ್ಮನೆ ಬಿಟ್ಟರೆ ಆಗಲ್ಲ ಅಂತಾ ಪ್ರತಿಭಟನೆ ಮಾಡಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾಗಿ ಪ್ರತಿಭಟನಾಕಾರರು ಹೇಳಿದ್ದರು.
ಪ್ರತಿಭಟನೆ ನಂತರ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಮೂವರ ಬಂಧನಕ್ಕೆ ತನಿಖೆ ಆರಂಭಿಸಲಾಗಿತ್ತು. ಅದರಂತೆ ಮೂವರ ಪೈಕಿ ಶೇಕ್ಷಾವಲಿ ಸಾಹೆಬ್ನನ್ನು ಬಂಧಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Fri, 23 February 24