ತುಮಕೂರು, ಮೇ 24: ದಾರಿ ಬಿಡಿ ಎಂದಿದ್ದಕ್ಕೆ ಯೋಧನ (Soldier) ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೊರಟಗೆರೆ (Kortagere) ತಾಲೂಕಿನ ಬೈರೇನಹಳ್ಳಿ ಕ್ರಾಸ್ಬಳಿ ನಡೆದಿದೆ. ಗೋವಿಂದರಾಜು (30) ಹಲ್ಲೆಗೊಳಗಾದ ಯೋಧ. ಭರತ್, ಪುನೀತ್, ಗೌರಿಶಂಕರ, ಶಿವಾ, ದಿಲೀಪ್ ಎಂಬುವರಿಂದ ಹಲ್ಲೆ ಮಾಡಿದ ಪುಂಡರು.
ಯೋಧ ಗೋವಿಂದರಾಜು ಅವರು ಜಮ್ಮುಕಾಶ್ಮಿರದ ರಜೌರಿನಲ್ಲಿ ಭಾರತೀಯ ಭೂಸೇನೆ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ಮೇಲೆ ಊರಿಗೆ ಬಂದಿದ್ದು, ಬೈರೇನಹಳ್ಳಿ ಕ್ರಾಸ್ಗೆ ಬರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ನಿಂತಿದ್ದವರಿಗೆ ಯೋಧ ಗೋವಿಂದರಾಜು ಅವರು ದಾರಿ ಬಿಡಿ ಎಂದಿದ್ದಾರೆ.
ಈ ವೇಳೆ ಕುಡಿದ ಮತ್ತಲ್ಲಿ ಐವರು ಮದ್ಯದ ಬಾಟಲಿಯಿಂದ ಯೋಧ ಗೋವಿಂದರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಚಾಲಕನಿಗೆ ಚಾಕುವಿನಿಂದ ಇರಿಯಲಾಗಿದೆ. ಟಾಟಾ ಏಸ್ ಚಾಲಕ ಭಾಸ್ಕರ್ ರೆಡ್ಡಿ ವೇಗವಾಗಿ ಬಂದು ದಾಬಸ್ ಪೇಟೆ ಬಳಿ ಕೊಪ್ಪಳದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಅಡ್ಡಗಟ್ಟಿದ್ದಾನೆ. ಬಳಿಕ “ನನ್ನನ್ನೇ ಓವರ್ ಟೆಕ್” ಮಾಡಿಕೊಂಡು ಬರುತ್ತೀಯಾ ಅಂತ ಕೆಎಸ್ಆರ್ಟಿಸಿ ಬಸ್ ಚಾಲಕ ಶಿವಪ್ಪ ಮಡಿವಾಳರ ಜೊತೆ ಗಲಾಟೆ ಮಾಡಿ, ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ: ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರಿನ ಯೋಧ ಸಾವು
ಇದರಿಂದ ಗಾಯಗೊಂಡ ಶಿವಪ್ಪ ಮಡಿವಾಳ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾ ಏಸ್ ಚಾಲಕ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಸರಿಯಾದ ಸಮಯಕ್ಕೆ ಬಸ್ ಹೊರಡದಿದ್ದನ್ನ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಕೆಎಸ್ಆರ್ಟಿಸಿ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ಘಟನೆ ನಿಲ್ದಾಣದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೆಎಸ್ಆರ್ಟಿಸಿ ಬಸ್ ಬೆಂಗಳೂರಿಂದ ತಿರುವಣ್ಣಾಮಲೈಗೆ ಬೆಳಗ್ಗೆ 8.45ಕ್ಕೆ ಹೊರಡಬೇಕಿತ್ತು. 9:30 ಆದರೂ ಬಸ್ ಹೊರಡಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದ ಪ್ರಯಾಣಿಕನ ಮೇಲೆ ಡಿಪೋ ಮ್ಯಾನೇಜರ್, ಸೆಕ್ಯುರಿಟಿ ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮೇ 22 ರಂದು ಬೆಂಗಳೂರು ಡಿಪೋ-6ರ ಬಸ್ ತಮಿಳುನಾಡಿನ ವಿಳ್ಳುಪುರಂಗೆ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 8.45 ಹೊರಡಬೇಕಾಗಿತ್ತು. ಆದರೆ ಬಸ್ ಟೈರ್ ಪಂಚರ್ ಆಗಿತ್ತು. ಕೂಡಲೆ ವಾಹನ ದುರಸ್ತಿ ಪಡಿಸಿ ಹೊರಡುವಾಗ ಪ್ರಯಾಣಿಕರು, 9 ಗಂಟೆಗೆ ಘಟಕಕ್ಕೆ ಆಗಮಿಸಿ ಘಟಕದ ಸಿಬ್ಬಂದಿಯವರೊಡನೆ ಮಾತುಕತೆ ನಡೆಸಿದ್ದಾರೆ.
ಈ ಸಂಬಂಧ ಪ್ರಯಾಣಿಕರನ್ನು ಅದೇ ದಿನ ಸಂಪರ್ಕಿಸಿ, ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇವೆ. ಘಟಕದ ಸಿಬ್ಬಂದಿ ಮೇಲೆ ಕ್ರಮವಹಿಸಲಾಗಿರುತ್ತದೆ. ಪ್ರಯಾಣಿಕನ ಮೇಲೆ ಕೆಎಸ್ಆರ್ಟಿಸಿ ಸೆಕ್ಯುರಿಟಿಗಳು ಹಲ್ಲೆ ಮಾಡಿಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಕೆಎಸ್ಆರ್ಟಿಸಿ ಸಿಬ್ಬಂದಿ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ