ಕೆಎಎಸ್ ಅಧಿಕಾರಿ ಪತ್ನಿ ಚೈತ್ರಾರದ್ದು ಕೊಲೆಯಲ್ಲ ಆತ್ಮಹತ್ಯೆ, ಪೊಲೀಸ್ ತನಿಖೆಯಲ್ಲಿ ಬಯಲು
ಬೆಂಗಳೂರಿನ ಸಂಜಯ್ನಗರದ ಮನೆಯಲ್ಲಿ ಕೆಎಎಸ್ ಅಧಿಕಾರಿ ಪತ್ನಿ, ವಕೀಲೆ ಚೈತ್ರಗೌಡ ಮೃತದೇಹ ನೇಣು ಬಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚೈತ್ರಗೌಡ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದಾಗ, ವಕೀಲೆ ಚೈತ್ರಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.
ಬೆಂಗಳೂರು, ಮೇ 24: ಕೆಎಎಸ್ (KAS) ಆಫೀಸರ್ ಪತ್ನಿ, ವಕೀಲೆ ಚೈತ್ರಾಗೌಡ (Lawyer Chaitragowda) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ. ವಕೀಲೆ ಚೈತ್ರಾಗೌಡ ಮನೆಯಲ್ಲಿ ಪೊಲೀಸರಿಗೆ ಡೆತ್ನೋಟ್ ಸಿಕ್ಕಿತ್ತು. ಈ ಡೆತ್ನೋಟ್ ಅನ್ನು ಚೈತ್ರಾಗೌಡ ಅವರೇ ಬರೆದಿದ್ದಾರೆ ಎಂದು ತನಿಖೆಯಲ್ಲಿ ದೃಢವಾಗಿದೆ. ಅಲ್ಲದೆ ಮರಣೋತ್ತರ ಪರೀಕ್ಷೆ ವರದಿಯಲ್ಲೂ ಚೈತ್ರಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮೂದಿಸಲಾಗಿದೆ. ಈ ಬಗ್ಗೆ ಸಂಜಯನಗರ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಕೀಲೆ ಚೈತ್ರಾಗೌಡ ಅವರ ಶವ ಮೇ11ರಂದು ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಗ ಚೈತ್ರಾಗೌಡ ಕುಟುಂಬಸ್ಥರು “ಇದು ಆತ್ಮಹತ್ಯೆ ಅಲ್ಲ ಕೊಲೆ” ಅಂತ ಆರೋಪಿಸಿ ದೂರು ನೀಡಿದ್ದರು. ಚೈತ್ರಾಗೌಡ ಕುಟುಂಬಸ್ಥರ ದೂರಿನನ್ವಯ ಪೊಲೀಸರು ಪತಿ ಕೆಎಎಸ್ ಅಧಿಕಾರಿ ಶಿವಕುಮಾರ್ ಕರೆದು ವಿಚಾರಣೆ ನಡೆಸಿದರು.
ಇದನ್ನೂ ಓದಿ: ಪರಮೇಶ್ವರ್ ತವರು ಕ್ಷೇತ್ರದಲ್ಲಿ ಯೋಧನ ಮೇಲೆ ಮದ್ಯದ ಬಾಟಲಿಯಿಂದ ಮಾರಣಾಂತಿಕ ಹಲ್ಲೆ
ವಿಚಾರಣೆಯಲ್ಲಿ ಕೆಎಎಸ್ ಅಧಿಕಾರಿ ಶಿವಕುಮಾರ್ “ಪತ್ನಿ ಜೊತೆ ಯಾವುದೇ ವೈಷಮ್ಯ ಇರಲಿಲ್ಲ. ಯಾವುದೇ ಹಣಕಾಸಿನ ಸಮಸ್ಯೆ ಸಹ ಇರಲಿಲ್ಲ. ಖಿನ್ನತೆಗೊಳಗಾಗಿದ್ದಳು” ಅಂತ ಪೊಲೀಸರಿಗೆ ಹೇಳಿದ್ದರು.
ಇನ್ನು ವಕೀಲೆ ಚೈತ್ರಾಗೌಡ ಮೂರು ತಿಂಗಳ ಹಿಂದೆಯೇ ಕುಟುಂಬಸ್ಥರ ಎದುರು ಸಾಯುವ ಮಾತಾಡಿದ್ದರು. ಬಳಿಕ ಡೆತ್ ನೋಟ್ ಬರೆದಿಟ್ಟಿದ್ದರು ಎಂದು ಪೊಲೀಸರು ಹಿರಿಯ ಅಧಿಕಾರಿಗಳಿಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಸಂಜಯ್ನಗರದ ನಿವಾಸದಲ್ಲಿ ಶವ ಪತ್ತೆ
ವಕೀಲೆ ಚೈತ್ರಾಗೌಡ ಮೂರು ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಎರಡನೇ ಫ್ಲಾಟ್ನಲ್ಲಿ ಚೈತ್ರಾಗೌಡ ಅವರ ಕುಟುಂಬಸ್ಥರು ವಾಸವಾಗಿದ್ದು, ಇನ್ನೊಂದು ಫ್ಲಾಟ್ನಲ್ಲಿ ಚೈತ್ರಾಗೌಡ ಅವರ ತಮ್ಮ ವಾಸವಾಗಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜೊತೆಗೆ ಮಾತನಾಡಿದ್ದಾರೆ. ನಂತರ ತಮ್ಮನ ಜೊತಗೆ ಮಾತನಾಡಿದ್ದಾರೆ. 11 ಗಂಟೆ ಸುಮಾರಿಗೆ ತಮ್ಮ ಅವರ ಮನೆ ಬಳಿ ಹೋಗಿ ಅವರನ್ನು ಕರೆದಿದ್ದಾರೆ. ಆದರೆ ಚೈತ್ರಾಗೌಡ ಸ್ಪಂದಿಸಿಲ್ಲ.
ಈ ವೇಳೆ ಕಿಟಕಿಯಿಂದ ನೋಡಿದಾಗ ಫ್ಯಾನ್ಗೆ ನೇಣು ಹಾಕಿಕೊಂಡು ಸಾವನಪ್ಪಿರುವುದು ಕಂಡು ಬಂದಿತ್ತು. ತಕ್ಷಣ ಮೃತಳ ತಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ