ಬೆಂಗಳೂರು: ಪೊಲೀಸರ ಸೋಗಿನಲ್ಲಿ ದರೋಡೆ, ವಿಚಾರಣೆ ವೇಳೆ ಕಟ್ಟುಕತೆ ಬಯಲಿಗೆ: ಇಬ್ಬರ ಬಂಧನ
ಪೊಲೀಸರ ಸೋಗಿನಲ್ಲಿ ಹಣ ದರೋಡೆ ಮಾಡಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಬ್ಯಾಟರಾಯನಪುರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಹಣ ದರೋಡೆ (Robbery) ಮಾಡಿದ ಪ್ರಕರಣ ಸಂಬಂಧ ಬ್ಯಾಟರಾಯನಪುರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಅಬ್ದುಲ್ ಶಾಬಾದ್ ಮತ್ತು ಅಜಿತ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 3.4 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಬ್ಯಾಟರಾಯನಪುರದಲ್ಲಿರುವ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅದರಂತೆ ಆರೋಪಿಗಳು ಜೂ.28ರಂದು ಮೊಬೈಲ್ ಸೇಲ್ ಮಾಡಿದ್ದ ಐದು ಲಕ್ಷ ಹಣ ಸಂಗ್ರಹಿಸಿ ತರುತ್ತಿದ್ದರು. ಈ ವೇಳೆ ಪೊಲೀಸರ ಸೋಗಿನಲ್ಲಿ ಈ ಹಣವನ್ನು ದರೋಡೆ ಮಾಡಲಾಗಿತ್ತು. ನಂತರ ಅಂಗಡಿಗೆ ಬಂದ ಆರೋಪಿಗಳು ಅಂಗಡಿ ಮಾಲೀಕನ ಬಳಿ ಕಥೆ ಕಟ್ಟಿದ್ದಾರೆ.
ನಾವು ಬರುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ಪೊಲೀಸರು, ಗಾಂಜಾ ಇದೆ ಎಂದು ಹೇಳಿ ಬೈಕ್ ಸಹಿತ ಕಿತ್ತುಕೊಂಡು ಹೋಗಿದ್ದಾರೆ ಎಂದು ಕೆಲಸಗಾರರು ಮಾಲೀಕನ ಬಳಿ ಕಟ್ಟುಕಥೆ ಹೇಳಿದ್ದಾರೆ. ಪ್ರಕರಣ ಸಂಬಂಧ ಮೊಬೈಲ್ ಶಾಪ್ ಮಾಲೀಕ ಅಬುಬಕರ್ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಬಿಸಿದ್ದಾರೆ. ಅದರಂತೆ, ದರೋಡೆ ಸಮಯದಲ್ಲಿ ಕೆಲಸಗಾರರು ಅಂಗಡಿ ರಸ್ತೆಯಲ್ಲಿ ಬರುವುದನ್ನು ಬಿಟ್ಟು ಬೇರೆ ರಸ್ತೆ ಮೂಲಕ ಬಂದಿರುವುದು ಪೊಲೀಸರ ಶಂಕೆಗೆ ಕಾರಣವಾಗಿದೆ. ಹೀಗಾಗಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಶಾಬಾದ್ ಮತ್ತು ಅಜಿತ್ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲಸಗಾರರು ದರೊಡೆಯ ಸತ್ಯಸಂಗತಿ ಹೊರಹಾಕಿದ್ದಾರೆ.
ಅಸಲಿಗೆ ದರೋಡೆ ನಡೆಸಿದವರು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳ ಸ್ನೇಹಿತರು. ಮೊಬೈಲ್ ಮಾರಾಟದ ಹಣ ಸಂಗ್ರಹಿಸಿ ತರುತ್ತಿದ್ದ ಅಬ್ದುಲ್ ಶಾಬಾದ್ ಮತ್ತು ಅಜಿತ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಪೊಲೀಸರ ಸೋಗಿನಲ್ಲಿ ಬಂದು ಹಣ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಆಗಮಿಸಿದ ಇಬ್ಬರು ಹಣ ಕೊಂಡೊಯ್ದಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಮತ್ತಿಬ್ಬರು ಬಂಧನಕ್ಕೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Thu, 13 July 23