ನಿಮಗೆ 2014 ರಲ್ಲಿ ಬಾಲಿವುಡ್ನಲ್ಲಿ ‘ಲತೀಫ್: ದಿ ಕಿಂಗ್ ಆಫ್ ಕ್ರೈಮ್’ ಸಿನಿಮಾ ಬಂದಿರುವುದು ನೆನಪಿರಬಹುದು. ಆ ಚಿತ್ರವೇನೋ ತೋಪೆದ್ದು ಹೋಗಿತ್ತು, ಅದು ಬೇರೆ ವಿಷಯ. ಆದರೆ ಈ ಚಿತ್ರದ ಕಥೆ ಒಂದು ಕಾಲದಲ್ಲಿ ಮುಂಬೈಯನ್ನು ಆಳಿದ್ದ ಭೂಗತ ಪಾತಕಿ ಅಬ್ದುಲ್ ಲತೀಫ್ ಅವರ ಜೀವನವನ್ನು ಹೋಲುತ್ತಿತ್ತು. ಅಂದರೆ ಲತೀಫ್ ಜೀವನದ ಕ್ರೈಮ್ ಕಥೆಯನ್ನೇ ಆಧರಿಸಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಹೌದು, ಮುಂಬೈ ಎಂದರೆ ದಾವೂದ್ ಇಬ್ರಾಹಿಂ ಎನ್ನುವ ಕಾಲದಲ್ಲಿ ಲತೀಫ್ ಎಂಬ ಮತ್ತೊಬ್ಬ ಡಾನ್ ಹುಟ್ಟಿಕೊಂಡಿದ್ದ. ಅದು ಕೂಡ ದಾವೂದ್ಗೆ ಸವಾಲಾಗುವ ಮೂಲಕ ಎಂಬುದು ವಿಶೇಷ. ಇದೇ ಕಾರಣದಿಂದ ಇಂದಿಗೂ ಕೂಡ ಭೂಗತ ಜಗತ್ತಿನಲ್ಲಿ ಲತೀಫ್ ಹೆಸರು ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಏಕೆಂದರೆ ದಾವೂದ್ನನ್ನು ನೇರವಾಗಿ ಎದುರಿಸಿದ ಡಾನ್ಗಳಲ್ಲಿ ಲತೀಫ್ ಮೊದಲಿಗ.
ಲತೀಫ್ ಮೂಲತಃ ಅಹಮದಾಬಾದ್ ನಿವಾಸಿ. ಕಡು ಬಡ ಕುಟುಂಬದಲ್ಲಿ ಜನನಿಸಿದ್ದ ಈತ ಮಹತ್ವಾಕಾಂಕ್ಷಿಯಾಗಿದ್ದ. ಹೀಗಾಗಿ ಬಾಲ್ಯದಿಂದಲೇ ಬದಕಲು ಏನು ಬೇಕಾದರೂ ಮಾಡಬಲ್ಲೆ ಎಂಬ ಛಲ ಬೆಳೆಸಿಕೊಂಡಿದ್ದ. ಒಂದೆಡೆ ತಂದೆ ಅಬ್ದುಲ್ ವಹಾಬ್ ಶೇಖ್ ಬೀದಿ ಬೀದಿಗಳಲ್ಲಿ ಬೀಡಿ-ಸಿಗರೇಟ್ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇನ್ನೊಂದೆಡೆ ಬಾಲ್ಯವನ್ನು ಕೊಳೆಗೇರಿಯಲ್ಲಿ ಕಳೆದಿದ್ದ ಲತೀಫ್ ಐಷರಾಮಿ ಜೀವನವನ್ನು ಬಯಸಿದ್ದ.
ಹೀಗಾಗಿಯೇ ದಿಢೀರಣೆ ಶ್ರೀಮಂತನಾಗುವ ದಾರಿ ಹುಡುಕಿಕೊಂಡ. ಅದರಂತೆ ನೇರವಾಗಿ ಅಪರಾಧ ಪ್ರಪಂಚಕ್ಕೆ ಎಂಟ್ರಿ ಕೊಟ್ಟ. ಮುಂಬೈ ಎಂಬ ಮಹಾನಗರದಲ್ಲಿ ಕುಕೃತ್ಯಗಳಿಗೆ ಕೈ ಹಾಕಿದ. ಈ ವೇಳೆ ಮುಂಬೈಯನ್ನು ಆಳುತ್ತಿದ್ದವನು ಡಾನ್ ದಾವೂದ್ ಇಬ್ರಾಹಿಂ. ಹೀಗೆ ಬಂದು ಹೋದ ಸಣ್ಣ ಪುಟ್ಟ ಡಾನ್ಗಳ ನಡುವೆ 22 ವರ್ಷದ ಯುವಕನೊಬ್ಬ ಏಕಾಏಕಿ ದಾವೂದ್ಗೆ ಸವಾಲೆಸೆಯುವ ಮಟ್ಟಕ್ಕೆ ಬೆಳೆದಿದ್ದ. ಇದನ್ನು ಕಂಡು ಖುದ್ದು ದಾವೂದ್ ಕೂಡ ದಂಗಾಗಿದ್ದನು. ಇತ್ತ ಲತೀಫ್ ವರ್ಷ ಕಳೆದಂತೆ ದೊಡ್ಡ ಮಟ್ಟಕ್ಕೆ ಬೆಳೆಯಲಾರಂಭಿಸಿದ.
ಅತ್ತ ದಾವೂದ್ಗೂ ಭಯ ಶುರುವಾಗಿತ್ತು. ಹೀಗಾಗಿಯೇ ಲತೀಫ್ ಜೊತೆ ಕೈ ಜೋಡಿಸಲು ಬಯಸಿದ್ದ. ಆದರೆ ಆರಂಭದಲ್ಲಿ ತನ್ನ ದಾರಿಗೆ ಅಡ್ಡಗಾಲಗಿದ್ದ ದಾವೂದ್ನ ಆಹ್ವಾನವನ್ನು ಒಪ್ಪಲು ಲತೀಫ್ ಸಿದ್ಧನಿರಲಿಲ್ಲ. ಎದುರಾಳಿ ಯಾವತ್ತಿದ್ದರೂ ನನ್ನ ಎದುರಾಳಿನೇ ಎಂದು ಹೇಳಿ ಕಳುಹಿಸಿದ್ದ. ಈ ಮಾತು ಕೇಳಿ ಅತ್ತ ದಾವೂದ್ ಕೂಡ ಲತೀಫ್ನನ್ನು ಮುಗಿಸಲು ಸ್ಕೆಚ್ ಹಾಕಲು ಆರಂಭಿಸಿದ್ದನು. ಆದರೆ ಕಿಂಗ್ ಆಫ್ ಕ್ರೈಮ್ ಎನಿಸಿಕೊಂಡಿದ್ದ ಸ್ಲಂ ಡಾನ್ನನ್ನು ಮುಗಿಸೋದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.
ಅದೊಂದು ದಿನ ದಾವೂದ್ ಗ್ಯಾಂಗ್ ಹುಡುಗರು ಲತೀಫ್ನನ್ನು ನೇರವಾಗಿ ಮುಗಿಸಲು ಯತ್ನಿಸಿದ್ದರು. ಆದರೆ ಆ ಸ್ಕೆಚ್ನಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ. ಇದರಿಂದ ರೊಚ್ಚಿಗೆದ್ದ ಲತೀಫ್ ತನ್ನನ್ನು ಮುಗಿಸಲು ಬಂದವನಿಗೆ ಮುಹೂರ್ತ ಇಟ್ಟಿದ್ದ. ಅದಕ್ಕಾಗಿ ನಂಬಿಕಸ್ಥ ಶೂಟರ್ಗಳನ್ನು ಕರೆಸಿಕೊಂಡಿದ್ದ. ಆ ಪ್ಲ್ಯಾನ್ ಹೇಗಿತ್ತು ಅಂದರೆ ದಾವೂದ್ನ ನಂಬಿಕಸ್ಥ ಬಂಟನನ್ನೇ ಮುಗಿಸಿ, ಇಡೀ ಡಿ ಗ್ಯಾಂಗ್ಗೆ ಭಯ ಹುಟ್ಟಿಸಲು ಲತೀಫ್ ನಿರ್ಧರಿಸಿದ್ದ.
ಎಲ್ಲಾ ಅಂದುಕೊಂಡಂತೆ ನಡೆಯಿತು. ಶೂಟರ್‌ಗಳು ಓಧವ್ ಪ್ರದೇಶದಲ್ಲಿನ ರಾಧಿಕಾ ಜಿಮ್ಖಾನಾಗೆ ತಲುಪಿದ್ದರು. ಎಕೆ -47 ನಂತಹ ಶಸ್ತ್ರಾಸ್ತಗಳೊಂದಿಗೆ ಸ್ಥಳಕ್ಕೆ ತೆರಳಿದ್ದ ಲತೀಫ್ ಗ್ಯಾಂಗ್ನ ಶೂಟರ್‌ಗಳಿಗೆ ಸಮಸ್ಯೆ ಎದುರಾಗಿತ್ತು. ಅಲ್ಲಿ ಒಂದಷ್ಟು ಗ್ಯಾಂಗ್ ಹುಡುಗರಿದ್ದರು. ಅದರಲ್ಲಿ ಯಾರು ದಾವೂದ್ ಬಂಟ ಎಂಬುದು ತಿಳಿದಿರಲಿಲ್ಲ. ಹಿಂದೆ ಮುಂದೆ ಯೋಚಿಸದೇ ಅಲ್ಲಿದ್ದವರನ್ನು ಮುಗಿಸಿ ಬಿಡಿ. ಅದರಲ್ಲೊಬ್ಬ ದಾವೂದ್ ಬಂಟನಾಗಿರುತ್ತಾನೆ. ಇದರೊಂದಿಗೆ ಡಿ ಗ್ಯಾಂಗ್ ಸದ್ದಡಗುತ್ತೆ ಎಂದು ಲತೀಫ್ ತಿಳಿಸಿದ್ದ. ಅಷ್ಟೇ ತಡ, ಜಿಮ್ಖಾನದಲ್ಲಿ ಗುಂಡಿನ ಸುರಿಮಳೆಯಾಯಿತು. ಒಟ್ಟು 9 ಮಂದಿ ಸತ್ತು ಬಿದ್ದಿದ್ದರು. ಲತೀಫ್ ನಿರೀಕ್ಷೆಯಂತೆ ದಾವೂದ್ ಗ್ಯಾಂಗ್ನ ಸದ್ದಡಗಿತು.
ಆ ಭೀಕರ ಸಾಮೂಹಿಕ ಹತ್ಯೆಯ ನಂತರ, ಅಬ್ದುಲ್ ಲತೀಫ್ ಪೊಲೀಸರ ಮೋಸ್ಟ್ ವಾಂಟೆಡ್ ಲೀಸ್ಟ್ನಲ್ಲಿ ಸ್ಥಾನ ಪಡೆದ. ಹಾಗಾಗಿ ಆತ ದುಬೈ ಮೂಲಕ ಪಾಕಿಸ್ತಾನಕ್ಕೆ ಹೋಗಿ ಅಡಗಿಕೊಂಡ. ಆದಾಗ್ಯೂ, ವರ್ಷಗಳ ಬಳಿಕ ಮತ್ತೆ ದೆಹಲಿಗೆ ಆಗಮಿಸಿದ್ದ. ಈ ವೇಳೆ ದೆಹಲಿ ಪೊಲೀಸರು ಮತ್ತು ಸಿಬಿಐಯ ಜಂಟಿ ತಂಡ ಲತೀಫ್ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆ ಬಂಧನದ ಎರಡು ವರ್ಷಗಳ ನಂತರ, ಅಂದರೆ 29 ನವೆಂಬರ್ 1997 ರಂದು, ಅಬ್ದುಲ್ ಲತೀಫ್ ಎಂಬ ಭೂಗತ ಪಾತಕಿಯನ್ನು ಪೊಲೀಸ್ ಎನ್ಕೌಂಟರ್ ಮಾಡಿ ಮುಗಿಸಿದರು.
ಅಲ್ಲಿಗೆ ಲತೀಫ್ನ ಜೂಜು, ಮದ್ಯ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಅಪಹರಣ, ಸುಪಾರಿ ಕಿಲ್ಲಿಂಗ್ಗಳಿಗೆ ಸಾಮ್ರಾಜ್ಯದ ಅಧಃಪತನವಾಯಿತು. ಇತ್ತ ಎದುರಾಳಿ ಸಾವಿನ ಬೆನ್ನಲ್ಲೇ ದಾವೂದ್ ತನ್ನ ಭೂಗತ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ. ಇದಾಗ್ಯೂ ಲತೀಫ್ ಹೆಸರಿನಲ್ಲಿ ಸಿನಿಮಾ ನಿರ್ಮಿಸಲು ಬಾಲಿವುಡ್ ನಿರ್ಮಾಪಕರು ಹೆದರುತ್ತಿದ್ದರು. ಯಾರು ಯಾವಾಗ ಅಟ್ಯಾಕ್ ಮಾಡುತ್ತಾರೆ ಎಂಬ ಭಯವಿತ್ತು. ಆ ಭಯ ಕೊನೆಗೊಂಡಿದ್ದು ಆತ ಎನ್ಕೌಂಟರ್ ಆಗಿ 18 ವರ್ಷಗಳ ನಂತರ ಎಂದರೆ ಪಾತಕ ಲೋಕದಲ್ಲಿ ಲತೀಫ್ ಸೃಷ್ಟಿಸಿದ್ದ ಹವಾ ಎಂಥದ್ದು ಎಂದು ಊಹಿಸಬಹುದು ಎನ್ನುತ್ತಾರೆ ದೆಹಲಿಯ ನಿವೃತ್ತ ಪೊಲೀಸ್ ಆಯುಕ್ತ ಮತ್ತು ಸಿಬಿಐನ ಮಾಜಿ ಜಂಟಿ ನಿರ್ದೇಶಕರಾದ ನೀರಜ್ ಕುಮಾರ್.
ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್ ಆಫರ್ ನೀಡಿದ ಮೂರು ಕಂಪೆನಿಗಳು
ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ
(Underworld don dawood and abdul latif 9 innocent people killing story)
Published On - 10:23 pm, Sun, 29 August 21