7 ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಾಯಿ ಪರಾರಿ; ಅಮ್ಮ ಬೇಕೆಂದು ಅಳುತ್ತಾ ಪೊಲೀಸ್ ಠಾಣೆಗೆ ಬಂದ ಮಕ್ಕಳು
ಉತ್ತರ ಪ್ರದೇಶದ ಕನೌಜ್ನಲ್ಲಿ ತಾಯಿಯೊಬ್ಬಳು ತನ್ನ 7 ಮಕ್ಕಳನ್ನು ಬಿಟ್ಟು ಓಡಿ ಹೋಗಿದ್ದಾಳೆ. ಆಕೆಯ ಕೃತ್ಯಕ್ಕೆ ಗ್ರಾಮಸ್ಥರೂ ಬೆಚ್ಚಿಬಿದ್ದಿದ್ದಾರೆ. ಮಹಿಳೆಗೆ ಒಂದು ಹಾಲು ಕುಡಿಯುವ ಹೆಣ್ಣು ಮಗು ಕೂಡ ಇದ್ದು, ಎಲ್ಲಾ ಮಕ್ಕಳು ತಮ್ಮ ತಾಯಿಗಾಗಿ ಕಾಯುತ್ತಿದ್ದಾರೆ.
ಕನೌಜ್: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ 7 ಮಕ್ಕಳನ್ನು ದಿಢೀರನೆ ಬಿಟ್ಟು ದೂರ ಹೋಗಿದ್ದಾಳೆ. ಮಹಿಳೆಯ 7 ಮಕ್ಕಳಲ್ಲಿ ಒಂದು ಪುಟ್ಟ ಹೆಣ್ಣು ಮಗು ಕೂಡ ಸೇರಿದೆ. ಆ ಮಗು ತುಂಬಾ ಅಳುತ್ತಿದೆ. ಚಿಕ್ಕ ಮಗು ತನ್ನ ತಾಯಿಯಿಂದ ದೂರವಿರುವುದು ತುಂಬಾ ಕಷ್ಟ. ಅದೇ ಗ್ರಾಮದಲ್ಲಿ ವಾಸವಾಗಿರುವ ಇನ್ನೋರ್ವ ಮಹಿಳೆ ಆಕೆಯನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಸೇರಿಸಿಕೊಂಡಿದ್ದಾಳೆ ಎಂದು ಆ ಮಹಿಳೆಯ ಸೋದರ ಮಾವ ಆರೋಪಿಸಿದ್ದಾರೆ. ಈ ಬಗ್ಗೆ ಮಹಿಳೆಯ ಸೋದರ ಮಾವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗುರ್ಸಹೈಗಂಜ್‌ನ ಹಳ್ಳಿಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕುಟುಂಬವನ್ನು ಸಾಕಲು ದುಡಿಯುವ ಸಲುವಾಗಿ ಅವರು ಆಗಾಗ ಮನೆಯಿಂದ ದೂರ ಉಳಿಯುತ್ತಿದ್ದರು. ಅವರ ಹೆಂಡತಿ ಮನೆಯಲ್ಲಿಯೇ ಇರುತ್ತಿದ್ದಳು. ಅವರಿಗೆ 7 ಮಕ್ಕಳಿದ್ದರು. ಆ ವ್ಯಕ್ತಿಯ ಕುಟುಂಬಸ್ಥರ ಪ್ರಕಾರ ಆತನ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಕಾರಣದಿಂದ ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ಬಾರಿ ಅವಳು ಮತ್ತೆ ಎರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಎಲ್ಲೋ ಹೋಗಿದ್ದಾಳೆ. ಇನ್ನೂ ಮನೆಗೆ ವಾಪಾಸ್ ಬಂದಿಲ್ಲ. ಇದರಿಂದ ಕಂಗಾಲಾಗಿ ಅಳುತ್ತಿರುವ ಆಕೆಯ 7 ಮಕ್ಕಳು ತಮ್ಮ ಅಮ್ಮನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ರಾತ್ರಿ ಮನೆಯಿಂದ ಹೊರಗೆ ಕಾಲಿಟ್ಟರೆ ನಿಗೂಢ ಹಾವಿನ ಕಾಟ!
ಮನೆಯಲ್ಲಿ ತಾಯಿ ಇಲ್ಲದಿರುವುದನ್ನು ಕಂಡು ಆಕೆಯ ಪುಟ್ಟ ಮಕ್ಕಳು ಅಳತೊಡಗಿದ್ದಾರೆ. ಚಿಕ್ಕ ಹುಡುಗಿ ನಿರಂತರವಾಗಿ ಅಳುತ್ತಿದ್ದಳು. ಇದನ್ನು ನೋಡಿದ ಸುತ್ತಮುತ್ತಲಿನವರು ತಾಯಿಯ ಕ್ರೌರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಆಕೆಯ ಬಗ್ಗೆ ಹುಡುಕಾಟ ನಡೆಸಿದ ನಂತರ ಕುಟುಂಬಸ್ಥರು ಆ ಮಹಿಳೆ ಪತ್ತೆಯಾಗದಿದ್ದಾಗ ಮಕ್ಕಳೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಆ ಮಹಿಳೆಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಪತ್ತೆಗೆ ತಂಡವನ್ನು ರಚಿಸಲಾಗಿದೆ. ಆ ಮಹಿಳೆಯ ಮಕ್ಕಳು ಇನ್ನೂ ತಮ್ಮ ತಾಯಿಗಾಗಿ ಮನೆಯ ಬಾಗಿಲನ್ನು ದಿಟ್ಟಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ