ವಿಜಯಪುರ: ಶಿಕ್ಷಕಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಪ್ರಕರಣ; ಆರೋಪಿಯನ್ನ ಬಂಧಿಸಿದ ಪೊಲೀಸರು
ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಶಿಕ್ಷಕಿ ಸಾವನ್ನಪ್ಪಿದ್ದಳು. ಇದಕ್ಕೂ ಮುನ್ನ ಇದೇ ಶಿಕ್ಷಕಿಯ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದವರೇ ಶಿಕ್ಷಕಿಯನ್ನು ಹತ್ಯೆ ಮಾಡಿದ್ದು, ಇದೀಗ ಆರೋಪಿಯನ್ನ ಬಂಧಿಸಲಾಗಿದೆ. ಯಾಕೆ ಕೊಲೆ ಮಾಡಲಾಗಿದೆ? ಯಾರು ಕೊಲೆ ಮಾಡಿದವರು ಎಂಬುದರ ಕುರಿತು ಇಲ್ಲಿದೆ ನೋಡಿ.
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಹಾಡ ಹಗಲೇ ಸರ್ಕಾರಿ ಶಾಲಾ ಶಿಕ್ಷಕಿಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರ ಹತ್ಯೆ ಮಾಡಲಾಗಿದೆ. ಜೊತೆಗೆ ಶಿಕ್ಷಕಿಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನೆ(ಫೆ.21) ಸಾಯಂಕಾಲ 5 ರಿಂದ 6 ಗಂಟೆ ಸಮಯದಲ್ಲಿ ಇಂಡಿ ಪಟ್ಟಣದ ಗಣೇಶ ನಗರದ ಬಳಿಯ ರಸ್ತೆಯಲ್ಲಿದ್ದ ಜನರು ಭಯದಲ್ಲಿ ಓಡ ತೊಡಗಿದ್ದರು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಓರ್ವ ವ್ಯಕ್ತಿ ಕೈಯಲ್ಲಿದ್ದ ಮಚ್ಚಿನಿಂದ ಬುರ್ಖಾಧಾರಿ ಮಹಿಳೆ ಮೇಲೆ ಬೀಸಿದ್ದ. ಮಾರಕಾಸ್ತ್ರದಿಂದ ಏಟು ಬೀಳುತ್ತಲೇ ಆ ಮಹಿಳೆ ಕುಸಿದು ಬಿದ್ದು ಬಿಟ್ಟಿದ್ದಳು. ಆಕೆ ನೆಲಕ್ಕೆ ಬೀಳುತ್ತಿದ್ದಂತೆ ಹಲ್ಲೆ ಮಾಡಿದ ದುಷ್ಕರ್ಮಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ಆಕೆಯನ್ನು ಇಂಡಿ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆಯ ಉಸಿರು ನಿಂತಿತ್ತು.
ಅಷ್ಟಕ್ಕೂ ಭೀಕರವಾಗಿ ಕೊಲೆಯಾದ ಮಹಿಳೆಯ ಹೆಸರು ದಿಲ್ಶಾದ್ ಹವಾಲ್ದಾರ್ (42) ಎಂದು ತಿಳಿದು ಬಂದಿದೆ. ಇಂಡಿ ತಾಲೂಕಿನ ಸಾತಲಗಾಂವ್ ಗ್ರಾಮದಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿತ್ಯದ ನಮಾಜ್ ಮುಗಿಸಿಕೊಂಡು ಜನರು ಮಸೀದಿಯಿಂದ ಜನರು ಹೊರ ಬರುವ ವೇಳೆ ಈ ಘಟನೆ ನಡೆದಿದೆ. ಇಷ್ಟರ ಮಧ್ಯೆ ಇದೇ ಇಂಡಿ ಪಟ್ಟಣದಲ್ಲಿ ದಿಲ್ಶಾದ್ ಮೇಲೆ ಹಲ್ಲೆ ಮಾಡುವ ಮುನ್ನ ಅದೇ ಹಲ್ಲೆಕೋರ ವ್ಯಕ್ತಿ ದಿಲ್ಶಾದ್ ಹವಾಲ್ದಾರ್ ಪುತ್ರ ಮುಜಾಮಿಲ್ ಮೇಲೂ ಹಲ್ಲೆ ಮಾಡಿದ್ದನಂತೆ. ಪಟ್ಟಣದ ವಿಕೆಜಿ ಹೊಟೇಲ್ ಬಳಿ ಅಂಗಡಿಯಲ್ಲಿದ್ದ ಮುಜಾಮಿಲ್ ಮೇಲೆ ಮಚ್ಚು ಹಾಗೂ ಲಾಂಗ್ ಛಳಪಿಸಿದ್ದಾನೆ. ಆಗ ಮುಜಾಮಿಲ್ ಎರಡೂ ಕೈಗಳನ್ನು ಅಡ್ಡ ಮಾಡಿದ ಪರಿಣಾಮ ಮಚ್ಚು ಹಾಗೂ ಲಾಂಗ್ ಏಟು ಮುಜಾಮಿಲ್ ಎರಡೂ ಕೈಗೆ ಬಡಿದಿವೆ. ಈ ವೇಳೆ ಮುಜಾಮಿಲ್ ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ಇಷ್ಟರ ಬಳಿಕ ಹಂತಕ ದಿಲ್ಶಾನ್ ಮೇಲೆ ಅಟ್ಯಾಕ್ ಮಾಡಿ ಅಕೆಯನ್ನು ಖಲಾಸ್ ಮಾಡಿದ್ದಾನೆ.
ಇನ್ನು ತೀವ್ರವಾಗಿ ಗಾಯಗೊಂಡಿದ್ದ ದಿಲ್ಶಾದ್ ಪುತ್ರ ಮುಜಾಮಿಲ್ನನ್ನು ಸಂಬಂಧಿಕರು ಹಾಗೂ ಸ್ಥಳೀಯರು ಇಂಡಿಯ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ವಿಜಯಪುರ ನಗರದ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಮುಜಾಮಿಲ್ ಗೆ ತೀವ್ರವಾದ ಗಾಯಗಳಾಗಿವೆ. ಕೈಯಲ್ಲಿನ ನರಗಳೆಲ್ಲಾ ಕಟ್ ಆಗಿ ತೀವ್ರ ರಕ್ತಸ್ರಾವವಾಗಿ ಎಲುಬಿಗೆ ಪೆಟ್ಟಾಗಿದ್ದು, ಆತನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಿಎಂ ನನ್ನ ಮಗನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ: ಸಂಜಯ್ ರಾವತ್ ಗಂಭೀರ ಆರೋಪ
ಹತ್ಯೆ ಮಾಡಿದವರು ಯಾರು.? ಕಾರಣವೇನು?
ಇನ್ನು ತನ್ನ ಮೇಲೆ ಹಲ್ಲೆ ಮಾಡಿದವ ಬಾಷಾಶೇಖ್ ಇಂಡಿ ಎಂದು ಮುಜಾಮಿಲ್ ಹೇಳಿದ್ದಾನೆ. ಭಾಷಾಶೇಖ್ ಇಂಡಿ ಹಾಗೂ ನಮ್ಮ ಮದ್ಯೆ ಜಗಳ ಇತ್ತು. ಭಾಷಾಶೇಖ್ ಇಂಡಿಯ ಸಹೋದರಿಯ ಪತಿ ರಫೀಕ್ ಜೊತೆಗೆ ನಮ್ಮ ತಾಯಿ ದಿಲ್ಶಾದ್ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಸದಾ ಸಂಶಯ ಪಡುತ್ತಿದ್ದ. ಇದೇ ಕಾರಣದಿಂದ ನಮ್ಮೊಂದಿಗೆ ಹಲವಾರು ಬಾರಿ ಜಗಳ ಮಾಡಿ ಹಲ್ಲೆಯನ್ನೂ ಮಾಡಿದ್ದ. ಇದೇ ವಿಚಾರದಲ್ಲಿ ಹಲವಾರು ಬಾರಿ ನಮ್ಮ ಸಮುದಾಯದ ಹಿರಿಯರು ನ್ಯಾಯ ಪಂಚಾಯತಿಯನ್ನು ಮಾಡಿದ್ದರು ಎಂದು ಹೇಳಿದ್ದಾರೆ. ದಿಲ್ಶಾದ್ ಗೂ ತನ್ನ ಹೋದರಿಯ ಪತಿ ರಫೀಕ್ ಗೂ ಅಕ್ರಮ ಸಂಬಂಧ ಇದೆ ಎಂಬ ಸಂಶಯವೇ ಇಲ್ಲಿ ಬಾಷಾಶೇಖ್ ಇಂಡಿ ದಿಲ್ಶಾದ್ ಹಾಗೂ ಆಕೆಯ ಪುತ್ರನನ್ನು ಕೊಲೆ ಮಾಡಲು ತೀರ್ಮಾನಿಸಿದ್ದಾನೆ. ದಿಲ್ಶಾದ್ ಹಲ್ಲೆಯಿಂದ ಪ್ರಾಣ ಬಿಟ್ಟರೆ ಮುಜಾಮಿಲ್ ಹಲ್ಲೆಗೆ ಈಡಾಗಿ ಗಂಭೀರ ಸ್ಥಿತಿಯಲ್ಲಿದ್ದಾನೆ.
ಕೊಲೆಯಾದ ದಿಲ್ಶಾದ್, ಪತಿ ಹಾಗೂ ಪುತ್ರನೊಂದಿಗೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುತ್ತಾರೆ. ಮನೆಯಲ್ಲಿ ದಿಲ್ಶಾದ್ ಹಾಗೂ ಆಕೆಯ ಪುತ್ರ ಮುಜಾಮಿಲ್ ಮಾತ್ರ ಇರುತ್ತಾರೆ. ಈ ಕಾರಣ ದಿಲ್ಶಾದ್ ಹಾಗೂ ಹಂತಕ ಭಾಷಾಶೇಖ್ ಇಂಡಿ ಸಹೋದರಿಯ ಪತಿ ರಫೀಕ್ ಮದ್ಯೆ ಅನೈತಿಕ ಸಂಬಂಧ ನಡೆದಿದೆ ಎಂಬ ಸಂಶಯ ಭಾಷಾಶೇಖ್ ಗೆ ಬಂದಿದೆ. ಇವರಿಬ್ಬರ ಅನೈತಿಕ ಸಂಬಂಧದಿಂದ ನನ್ನ ಸಹೋದರಿಯ ಸಂಸಾರ ಹಾಳಾಗುತ್ತದೆ ಎಂಬ ಕೋಪವೇ ಇಂದಿನ ಭಯಾನಕ ಘಟನೆಗೆ ಕಾರಣವಾಗಿದೆ. ಘಟನೆ ಬಳಿಕ ಓಡಿ ಹೋಗಿದ್ದ ಭಾಷಾಶೇಖ್ ಇಂಡಿಯನ್ನು ಇಂಡಿ ಪಟ್ಟಣ ಪೊಲಿಸರು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆ ಕುರಿತು ಇಂಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ