ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ
ಗಂಡನನ್ನು ಬಿಟ್ಟು ತನ್ನೊಂದಿಗೆ ಬರದಿದಕ್ಕೆ ಕೋಪಗೊಂಡ ಪ್ರಿಯಕರ ಮಹಿಳೆಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರ್ಘಟನೆ ಬೆಂಗಳೂರಿನ ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರ ಹಳ್ಳಿಯಲ್ಲಿ ನಡೆದಿದೆ. ಮಹಿಳೆಗೆ ಮದ್ವೆಯಾಗಿದ್ದರೂ ಸಹ ಪ್ರಿಯಕರ ತನ್ನನ್ನೂ ಮದ್ವೆಯಾಗುವಂತೆ ಒತ್ತಾಯಿಸಿದ್ದಾನೆ. ಆದ್ರೆ, ಮಹಿಳೆ ನಿರಾಕರಿಸಿದ್ದಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾನೆ.
ಬೆಂಗಳೂರು, (ಡಿಸೆಂಬರ್ 12): ಗಂಡನನ್ನು ಬಿಟ್ಟು ತನ್ನೊಂದಿಗೆ ಬರದಿದಕ್ಕೆ ಕೋಪಗೊಂಡ ಪ್ರಿಯಕರ ಮಹಿಳೆಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಲ್ಲೂರ ಹಳ್ಳಿಯಲ್ಲಿ ನಡೆದಿದೆ. ಮೊವುಹಾ ಮಂಡಲ್ (26) ಹತ್ಯೆಯಾದ ವಿವಾಹಿತೆ. ಮಿಥುನ್ ಮಂಡಲ್ (40) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಗಂಡನನ್ನ ತೊರೆದು ತನ್ನೊಂದಿಗೆ ಬರದಿದಕ್ಕೆ ಸಿಟ್ಟಿನಿಂದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಿಥುನ್ ಮಂಡಲ್ ಹಾಗೂ ಮೊವುಹಾ ಮಂಡಲ್ ಇಬ್ಬರೂ ಪಶ್ಚಿಮ ಬಂಗಾಳ ಮೂಲದವವರಾಗಿದ್ದು, ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಮಿಥುನ್ ಹೌಸ್ ಕೀಪಿಂಗ್ ಮಾಡುತ್ತಿದ್ದರೆ, ಮೋವುಹಾ ಸಹ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಹೀಗೆ ಒಬ್ಬರಿಗೊಬ್ಬರು ಪರಿಚಯವಾಗಿ ಪ್ರೀತಿಗೆ ತಿರುಗಿದೆ. ಬಳಿಕ ಗಂಡನನ್ನು ತೊರೆದುಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮೊವುಹಾ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಸಹ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಬಾಮೈದ, ಅತ್ತೆಯನ್ನು ಬಂಧಿಸಿದ ಬೆಂಗಳೂರು ಪೊಲೀಸ್
ಘಟನೆ ವಿವರ
2017ರಲ್ಲಿ ಮದುವೆಯಾಗಿದ್ದ ಮೊವುಹಾ ಮಂಡಲ್ ಮತ್ತು ಹರಿಪಾದ ಮಂಡಲ್ 2021ರಲ್ಲಿ ಕೆಲಸಕ್ಕೆಂದು ದಂಪತಿ ಬೆಂಗಳೂರಿಗೆ ಬಂದಿದ್ದರು. ಮೊವುಹಾ, ಕಾಲೇಜಿನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕಿದ್ದಳು. ಅದೇ ಕಾಲೇಜಿನಲ್ಲಿ ಮಿಥುನ್ ಸಹ ಹೌಸ್ ಕೀಪಿಂಗ್ ಸೂಪರ್ ವೈಸರ್ ಆಗಿದ್ದ. ಹೀಗಾಗಿ ಮಿಥುನ್ಗೆ ಮೋವುಹಾ ಮಂಡಲ್ ನ ಪರಿಚಯವಾಗಿದೆ. ನಂತರ ಮೋವುಹಾ ಮಂಡಲ್ ಗೆ ತನ್ನನ್ನ ಪ್ರೀತಿಸುವಂತೆ ಕೇಳಿಕೊಂಡಿದ್ದ. ಆದ್ರೆ, ತನಗೆ ಮದುವೆಯಾಗಿದೆ ಎಂದು ಮೋವುಹಾ ಹೇಳಿದ್ದಳು. ಆದರೂ ಸಹ ಗಂಡನನ್ನ ತೊರೆದು ತನ್ನ ಜೊತೆ ಇರುವಂತೆ ಮಿಥುನ್ ಒತ್ತಾಯಿಸಿದ್ದಾನೆ. ಆದ್ರೆ, ಮೋವುಹಾ ಮಂಡಲ್ ಒತ್ತಡಕ್ಕೆ ಮಣಿಯದೆ ಗಂಡನನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.
ಈ ವಿಚಾರ ಕಾಲೇಜು ಆಡಳಿ ಮಂಡಳಿಗೆ ಗೊತ್ತಾಗಿ ಮಿಥುನ್ ನನ್ನ ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ಮೊವುಹಾ ಸಹ ಕೆಲಸ ಬಿಟ್ಟಿದ್ದಳು. ಆದರೂ ಸಹ ಮಿಥುನ್, ಮೊವುಹಾಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಬಳಿಕ ಪ್ರೀತಿಸಿದ್ದ ವಿವಾಹಿತೆಯನ್ನ ಒಲಿಸಿಕೊಳ್ಳಲು ವಿಫಲವಾಗಿ ಆಕೆ ಮೇಲೆ ಹಗೆತನ ಸಾಧಿಸಿದ್ದ ಮಿಥುನ್, ಆಕೆಯನ್ನ ಸಾಯಿಸುವ ಸಂಚು ರೂಪಿಸಿದ್ದ.
ಅದರಂತೆ ಬುಧವಾರ(ಡಿಸೆಂಬರ್ 11) ರಾತ್ರಿ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಹಿಂದಿನ ಗೇಟ್ ರಸ್ತೆ ಮನೆ ಬಳಿ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ವೈಟ್ ಫೀಲ್ಡ್ ಠಾಣೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪೊಲೀಸರ ಬಂಧನದ ಭೀತಿಯಿಂದಾಗಿ ಆರೋಪಿ ಮಿಥುನ್ ಇಂದು(ಡಿಸೆಂಬರ್ 12) ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 12 December 24