ಬೆಂಗಳೂರು, ಜುಲೈ 30: ಗಾಂಜಾ ಕೊಂಡುಕೊಳ್ಳಲು ಮೊಬೈಲ್ (Mobile) ಕದಿಯುತ್ತಿದ್ದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು (Whitefield Police) ಬಂಧಿಸಿದ್ದಾರೆ. ಬಿಹಾರ ಮೂಲದ ಅಬ್ದುಲ್ ರಜಾಕ್ (22) ಬಂಧಿತ ಆರೋಪಿ. ಬಂಧಿತ ಆರೋಪಿ ಅಬ್ದುಲ್ ರಜಾಕ್ನಿಂದ 32 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಬ್ದುಲ್ ರಜಾಕ್ ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದನು. ಅಬ್ದುಲ್ ರಜಾಕ್ (Abdul Razak) ಚಿಕ್ಕವಯಸ್ಸಿನಿಂದಲೇ ಕಳ್ಳತನಕ್ಕೆ ಇಳಿದಿದ್ದನು.
ಕಳೆದ ಎರಡು ವರ್ಷಗಳಿಂದ ನಗರದ ಪಿಜಿ, ಕಾರು ಪಾರ್ಕಿಂಗ್, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದನು. ಕದ್ದ ಮೊಬೈಲ್ಗಳನ್ನು ಬಡವರಿಗೆ 2 ರಿಂದ 3 ಸಾವಿರ ರೂ.ಗೆ ಮಾರುತ್ತಿದ್ದನು. ಬಂದ ಹಣದಲ್ಲಿ ಗಾಂಜಾ ಖರೀದಿ ಮಾಡುತ್ತಿದ್ದನು. ಈತನ ಕೃತ್ಯದ ಬಗ್ಗೆ ವೈಟ್ಫೀಲ್ಡ್ ಪೊಲೀಸ ಖಚಿತ ಮಾಹಿತಿ ಪಡೆದುಕೊಂಡಿದ್ದರು. ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಅಬ್ದುಲ್ ರಜಾಕ್ ನಿವಾಸದ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮನೆ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೋಯೆಬ್ ಪಾಷಾ ಅಲಿಯಾಸ್ ತುರುಕಾ ಬಾಬು ಬಂಧಿತ ಆರೋಪಿ. ಆರೋಪಿ ಶೋಯೆಬ್ ಪಾಷಾ ಐದು ಮನೆಗಳಲ್ಲಿ ದರೋಡೆ ಮಾಡಿದ್ದಾನೆ. ಬಂಧಿತನಿಂದ 101 ಗ್ರಾಂ ತೂಕದ ಚಿನ್ನಾಭರಣ, ಒಂದು ಬೈಕ್, ಎರಡು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಅರೆಸ್ಟ್, ಸಹೋದರ, ಪ್ರಿಯತಮನಿಗಾಗಿ ಹುಡುಕಾಟ
ಆರೋಪಿ ಶೋಯೆಬ್ ಪಾಷಾ ಹಾಸನದಿಂದ ತುಮಕೂರುವರೆಗೆ ರೈಲಿನಲ್ಲಿ ಬರುತ್ತಿದ್ದನು. ತುಮಕೂರು ರೈಲು ನಿಲ್ದಾಣದಲ್ಲಿ ಟಿವಿಎಸ್ ಅಪಾಚೆ ಬೈಕ್ ಹತ್ತಿ ನೆಲಮಂಗಲಕ್ಕೆ ಬರುತ್ತಿದ್ದನು. ಲಾಡ್ಜ್ವೊಂದರಲ್ಲಿ ರೂಮ್ ಮಾಡಿಕೊಂಡು ಇರುತ್ತಿದ್ದನು. ಬಳಿಕ ಎರಡು ದಿನ ಬೀಗ ಹಾಕಿದ ಮನೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದನು. ತಾನು ಟಾರ್ಗೆಟ್ ಮಾಡಿದ್ದ ಮನೆಗಳಿಗೆ ರಾತ್ರಿ ವೇಳೆ ತೆರಳಿ, ಬೀಗ ಒಡೆದು ಒಳ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದನು.
ನಂತರ ಲಾಡ್ಜ್ಗೆ ವಾಪಸ್ ಆಗಿ, ಒಂದು ದಿನ ಅಲ್ಲೇ ಉಳಿದುಕೊಳ್ಳುತ್ತಿದ್ದನು. ಬಳಿಕ ಬೈಕ್ನಲ್ಲಿ ತುಮಕೂರಿಗೆ ಹೋಗುತ್ತಿದ್ದನು. ತುಮಕೂರು ರೈಲು ನಿಲ್ದಾಣದಲ್ಲಿ ಬೈಕ್ ಪಾರ್ಕ್ ಮಾಡಿ ರೈಲು ಹತ್ತಿ ಹಾಸನಕ್ಕೆ ಹೋಗುತ್ತಿದ್ದನು. ಪ್ರತಿಬಾರಿ ಕಳ್ಳತನಕ್ಕೆ ಇಳಿದಾಗ ಇದೇ ರೀತಿ ಮಾಡುತ್ತಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ