ಅಡ್ಡದಾರಿ ಹಿಡಿದಿದ್ದ ಪತ್ನಿ ಇಡೀ ಸಂಸಾರದ ನೌಕೆಯ ದಿಕ್ಕು ತಪ್ಪಿಸಿದಳು. ತುತ್ತಿನ ಚೀಲ ತುಂಬಿಸಿಕೊಳ್ಳಲು ಪತಿ ದೂರದ ಊರಿಗೆ ಹೋಗಿದ್ದ ವೇಳೆ ಪತ್ನಿ ತಪ್ಪು ದಾರಿ ಹಿಡಿದಳು. ಕೊನೆಗೆ ತನ್ನ ಕಳ್ಳಾಟಕ್ಕೆ ಅಡ್ಡಿಪಡಿಸಿದ ಅಂತ ಪತ್ನಿ ಎಸಿಗೆ ಬಿಟ್ಟಳು ಹೇಯ ಕೃತ್ಯವನ್ನು.
ಅದು ಅಕ್ಟೋಬರ್ 6 ನೇ ತಾರಿಕು. ಜನ ದಸರಾ ಹಬ್ಬದ ಸಡಗರದಲ್ಲಿ ಖುಷಿಯಾಗಿ ಓಡಾಡಿಕೊಂಡು ಬನ್ನಿ ಮುಡಿದು ಸಂಭ್ರಮಿಸುತ್ತಿದ್ದರು. ಅದರಂತೆ ರಾಯಚೂರು (Raichuru) ಜಿಲ್ಲೆ ಸಿರವಾರ (Sirivar) ತಾಲ್ಲೂಕಿನ ಮಲ್ಲಟ ಅನ್ನೋ ಗ್ರಾಮದ ನಿವಾಸಿ ಬಸವರಾಜ್ ಎಂಬ ವ್ಯಕ್ತಿ ಕೂಡ ರಾತ್ರಿಯೆಲ್ಲಾ ಓಡಾಡಿ ಬನ್ನಿ ಕೊಟ್ಟು ಹಬ್ಬದ ಆಚರಣೆ ಮಾಡಿದ್ದನು. ರಾತ್ರಿ ಎಂದಿನಂತೆ ಆತ ಮನೆಯೊಳಗೆ ಮಲಗಿದ್ದನು. ಉಳಿದ ಆತನ ಪತ್ನಿ ಸಮೇತ ಕುಟುಂಬಸ್ಥರೆಲ್ಲ ಮನೆ ಹೊರಗಡೆ ಕಟ್ಟೆ ಮೇಲೆ ಮಲಗಿದ್ದರು. ಅಷ್ಟೇ ಬೆಳಿಗ್ಗೆ ಎದ್ದು ನೋಡಿದರೆ ಮಲಗಿದ್ದ ಜಾಗದಲ್ಲೇ ಒದ್ದಾಡಿ ಪ್ರಾಣಬಿಟ್ಟಿದ್ದ ಬಸವರಾಜ್ನ ಕತ್ತು ಸೀಳಲಾಗಿತ್ತು. ಬಸವರಾಜ್ ರಕ್ತದ ಮೊಡವಿನಲ್ಲಿ ಹೆಣವಾಗಿ ಬಿದ್ದಿದ್ದನು ಕಂಡು ಇಡೀ ಕುಟುಂಬ ಅವಕ್ಕಾಗಿತ್ತು.
ಘಟನೆ ನಡೆದ ಬಳಿಕ ಮೃತನ ಪತ್ನಿ ಲಕ್ಷ್ಮೀ ತಾಯಿ ಮಾತ್ರ ಅದೊಂದು ಕಥೆ ಕಟ್ಟಿದ್ದಳು. ಅಳಿಯ ಬಸವರಾಜನೇ ತನ್ನ ಕತ್ತು ಕುಯ್ದುಕೊಂಡು ಸತ್ತು ಹೋಗಿದ್ದಾನೆ ಅಂತ ಹೇಳಿಕೆ ನೀಡಿದ್ದರು. ಆದರೆ ಈ ಭೀಕರ ಹತ್ಯೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಇಷ್ಟೆಲ್ಲಾ ದುರಂತ ನಡೆದ್ರೂ ಮೃತ ಬಸವರಾಜ್ ಕುಟುಂಬಸ್ಥರಿಗೆ ಏನಾಯ್ತು ಅನ್ನೋದರ ಅರಿವೇ ಇರಲಿಲ್ಲ. ಮಗನ ಸ್ಥಿತಿ ಕಂಡು ಮೃತನ ತಾಯಿ ಯಲ್ಲಮ್ಮ ಹಾಗೂ ಕುಟುಂಬಸ್ಥರ ಆಕ್ರಂದನ ಹೇಳತೀರದು.
ಘಟನೆ ಸಂಬಂಧ ಸಿರವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ತನಿಖೆ ವೇಳೆ ಮೃತ ಬಸವರಾಜ್ ಪತ್ನಿ ಲಕ್ಷ್ಮೀ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಯಾಕಂದರೇ ಆಕೆ ಮೇಲೆ ಅನೈತ್ತಿಕ ಸಂಬಂಧದ ಆರೋಪವಿತ್ತು. ಆ ಬಗ್ಗೆ ಮೊದಮೊದಲು ಮಾಹಿತಿ ಕಲೆ ಹಾಕಿದಾಗ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನು ಕೂಡ ಆ ಗ್ರಾಮದವನಾಗಿರಲಿಲ್ಲ. ಇದರಿಂದ ಪೊಲೀಸರಿಗೆ ಸ್ವಲ್ಪ ಹಿನ್ನಡೆಯಾಗಿದ್ದರೂ, ಖಾಕಿ ಮಾತ್ರ ಇಷ್ಟಕ್ಕೆ ಬಿಡಲಿಲ್ಲ.
ಪೊಲೀಸರು ಪತ್ನಿಯ ಮೊಬೈಲ್ ಕಾಲ್ ಡಿಟೇಲ್ಸ್, ನೆಟ್ವರ್ಕ್ ಲೊಕೇಶ್ಗಳನ್ನೆಲ್ಲಾ ಪಡೆದಾಗ ಅಸಲಿ ಸತ್ಯ ಬಯಲಾಗಿತ್ತು. ಮೃತ ಬಸವರಾಜ್ ಹಾಗೂ ಪತ್ನಿ ಲಕ್ಷ್ಮೀ ಈ ಹಿಂದೆ ಮೂರ್ನಾಲ್ಕು ವರ್ಷಗಳ ಕಾಲ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಲಕ್ಷ್ಮೀ ಪರ ಪುರಷನೊಂದಿಗೆ ಅನೈತಿಕ ಸಂಬಂಧವಿತ್ತಂತೆ. ಈ ವಿಚಾರ ಬಸವರಾಜ್ಗೆ ಗೊತ್ತಾಗಿ ದೊಡ್ಡ ರಂಪಾಟವೇ ನಡೆದುಹೋಗಿತ್ತು. ಇದೆ ಕಾರಣಕ್ಕೆ ಆತ ಬೆಂಗಳೂರು ಬಿಟ್ಟು ಹುಟ್ಟೂರು ಮಲ್ಲಟವನ್ನ ಸೇರಿದ್ದನು. ಸ್ವ ಗ್ರಾಮಕ್ಕೆ ಬಂದ ಮೇಲೆಯೂ ಪತ್ನಿಯ ಕಳ್ಳಾಟ ನಿಂತಿರಲಿಲ್ಲ. ಆಕೆ ಫೋನ್ ಆ ವ್ಯಕ್ತಿ ಜೊತೆ ಗಂಟೆಗಟ್ಟಲೇ ಮಾತಾಡೋದನ್ನ ಶುರು ಮಾಡಿಕೊಂಡಿದ್ದಳು.
ಬಸವರಾಜ್ ಮದ್ಯವ್ಯಸನಿಯಾಗಿದ್ದು, ಕುಡಿದು ಬಂದು ಪತ್ನಿಗೆ ಕಿರುಕುಳ ಕೊಡುತ್ತಿದ್ದನಂತೆ. ಇದೇ ವಿಚಾರವಾಗಿ ಅಕ್ಟೋಬರ್ 6 ರಂದು ಪತ್ನಿ ಲಕ್ಷ್ಮೀ ಜೊತೆ ಕಿರಿಕ್ ಆಗಿತ್ತು. ಆಗ ಬಸವರಾಜ್ ಪತ್ನಿಯ ಮೊಬೈಲ್ ಕಸಿದುಕೊಂಡು ಹೋಗಿ ಮಾರಾಟ ಮಾಡಿ, ಅದೇ ದುಡ್ಡಲ್ಲಿ ಕುಡಿದು ಬಂದಿದ್ದನು. ಇದರಿಂದ ಕೆರಳಿ ಕೆಂಡವಾಗಿದ್ದ ಪತ್ನಿ ತನ್ನ ಅನೈತ್ತಿಕ ಸಂಬಂಧಕ್ಕೆ ಪತಿ ಅಡ್ಡಿಪಡಿಸಿ ಎಲ್ಲವನ್ನು ಹಾಳು ಮಾಡಿದ ಎಂದು ಚಾಕುವಿನಿಂದ ಮಲಗಿದ್ದ ಬಸವರಾಜ್ನ ಕತ್ತು ಸೀಳಿ ಕೊಲೆ ಮಾಡಿದ್ದಳು. ಸದ್ಯ ಸಿರವಾರ ಪೊಲೀಸರು ಆಕೆಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ತಾಯಿಯ ಅನಾಚಾರಕ್ಕೆ ತಂದೆ ಉಸಿರು ಚೆಲ್ಲಿದರೇ, ಮಾಡಿದ ತಪ್ಪಿಗೆ ತಾಯಿ ಜೈಲು ಸೇರಿದ್ದಾಳೆ. ಮಕ್ಕಳಿಬ್ಬರು ಅಕ್ಷರಶಃ ಅನಾಥರಾಗಿದ್ದಾರೆ.
ವರದಿ-ಭೀಮೇಶ್ ಪೂಜಾರ್, ಟಿವಿ9 ರಾಯಚೂರು
Published On - 4:18 pm, Sat, 5 November 22