ಸಮಾಜ ಎಷ್ಟೇ ಮುಂದುವರೆಯಲಿ, ಆದರೆ ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಸದಾ ಸಿದ್ದವಾಗಿರಬೇಕು. ಏಕೆಂದರೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹದೊಂದು ಸಮಾಜದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಎಂಬುದಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳೇ ನಮ್ಮ ಕಣ್ಮುಂದೆ ಇದೆ. ಅದರಲ್ಲೂ ಒಂಟಿಯಾಗಿ ಓಡಾಡವುದು ಇಂದಿಗೂ ಕೂಡ ಸವಾಲೇ ಸರಿ. ಸ್ವಲ್ಪ ಎಚ್ಚರ ತಪ್ಪಿದ್ದರೂ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಹೀಗಾಗಿ ಆತ್ಮರಕ್ಷಣೆಗಾಗಿ ಸದಾ ಸಿದ್ದವಾಗಿರಬೇಕು ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಈ ವಿಡಿಯೋದಲ್ಲಿ ಯುವತಿಯೊಬ್ಬಳಿಗೆ ಆರು ಮಂದಿ ಯುವಕರು ಕಿರುಕುಳ ನೀಡುತ್ತಿರುವುದು ಕಾಣಬಹುದು. ಆರಂಭದಲ್ಲಿ ಭಯಗೊಂಡರೂ ಆ ಬಳಿಕ ಯುವತಿ ಆರು ಮಂದಿಯನ್ನು ಮಟ್ಟಹಾಕಿದ್ದು ಶ್ಲಾಘನೀಯ.
ಒಬ್ಬಂಟಿಯಾಗಿ ಹೋಗುತ್ತಿದ್ದ ಈ ಯುವತಿಯನ್ನು ಯುವಕರ ಗುಂಪೊಂದು ಹಿಂಬಾಲಿಸಿದ್ದು, ಈ ವೇಳೆ ತನ್ನ ಸಮರಕಲೆಯನ್ನು ಪ್ರದರ್ಶಿಸುವ ಮೂಲಕ ಯುವತಿ ಸ್ವಯಂ ರಕ್ಷಣೆ ಪಡೆದುಕೊಂಡಿದ್ದಾಳೆ. ಅದರಲ್ಲೂ 6 ಮಂದಿಯನ್ನು ಫ್ಲೈಯಿಂಗ್ ಕಿಕ್ ಮೂಲಕ ಹೊಡೆದುರುಳಿಸಿದ್ದು ವಿಶೇಷ. ಅಂದರೆ ಯುವತಿಯು ಅತ್ಯುತ್ತಮ ಸಮರ ಕಲೆಯನ್ನು ಕರಗತ ಮಾಡಿಕೊಂಡಿರುವುದು ಸ್ಪಷ್ಟ. ಈ ಮೂಲಕ ಪುಂಡರ ಗ್ಯಾಂಗ್ನಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಯಾವ ದೇಶದ್ದು ಎಂಬುದು ಸ್ಪಷ್ಟವಾಗಿಲ್ಲ. ಇದಾಗ್ಯೂ ಯುವತಿಯ ಸಾಹಸಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಆನ್ಲೈನ್ನಲ್ಲಿ ಮಹಿಳೆಯೊಬ್ಬರು ಹಂಚಿಕೊಂಡಿರುವ ಈ ವಿಡಿಯೋ 3.5 ಮಿಲಿಯನ್ ವೀಕ್ಷಣೆಗಳನ್ನು ಮತ್ತು 48.6K ಲೈಕ್ಗಳನ್ನು ಪಡೆದುಕೊಂಡಿದೆ.
Don’t mess with the girl! Hiyaaaaaaaaaaaaaa! ??pic.twitter.com/xZt3rhpiuq
— Figen (@TheFigen) June 11, 2022
ಅಷ್ಟೇ ಅಲ್ಲದೆ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕರು ಕಾಮೆಂಟಿಸಿದ್ದಾರೆ. ಮಹಿಳೆಯರು ಸ್ವಯಂ ರಕ್ಷಣೆಗಾಗಿ ಸಮರ ಕಲೆಗಳನ್ನು ಕಲಿಯಲು ಮುಂದಾಗಬೇಕು. ಈ ಮೂಲಕ ಪುಂಡರ ಹಾವಳಿಯನ್ನು ತಡೆಯಬಹುದು ಎಂಬುದಕ್ಕೆ ಇದುವೇ ನಿದರ್ಶನ ಎಂದು ಮಹಿಳೆಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಬೀದಿ ಕಾಮುಕರನ್ನು ತಡೆಯಲು ಸ್ವರಕ್ಷಣೆಗಿಂತ ಅತ್ಯುತ್ತಮ ಆಯುಧ ಮತ್ತೊಂದಿಲ್ಲ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಆರು ಮಂದಿಯ ವಿರುದ್ದ ಹೋರಾಡುವಂತಹ ಮನೋಭಾವ ಮೂಡಲು ಆಕೆಗೆ ಗೊತ್ತಿದ್ದ ಸಮರಕಲೆಯೇ ಕಾರಣ. ಹೀಗಾಗಿ ಮಹಿಳೆಯರು ಆತ್ಮರಕ್ಷಣೆಗಾಗಿ ಕರಾಟೆ, ಕುಂಗ್ಫು ಮಾದರಿಯ ಕಲೆಗಳನ್ನು ಅಭ್ಯಾಸ ಮಾಡುವುದು ಶಾಲೆಯಿಂದಲೇ ಶುರುವಾಗಬೇಕು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಏಕಾಂಗಿಯಾಗಿ ಬೀದಿ ಕಾಮುಕರನ್ನು ಮಟ್ಟ ಹಾಕಿದ ಈ ಯುವತಿ ಅನೇಕರಿಗೆ ಸಮರಕಲೆ ಕಲಿಯಲು ಸ್ಪೂರ್ತಿಯಾಗಲಿ ಎಂದು ಆಶಿಸೋಣ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.