ಬೆಂಗಳೂರು: ತಮ್ಮ ಮೊಬೈಲ್ ಪಾಸ್ವರ್ಡ್ ಹೇಳಲಿಲ್ಲ ಅಂತ ಅಕ್ಕ ನೇಣಿಗೆ ಶರಣು

ಮೊಬೈಲ್ ಪಾಸ್​ವರ್ಡ್​ ಬದಲಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ.

ಬೆಂಗಳೂರು: ತಮ್ಮ ಮೊಬೈಲ್ ಪಾಸ್ವರ್ಡ್ ಹೇಳಲಿಲ್ಲ ಅಂತ ಅಕ್ಕ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Nov 12, 2022 | 9:14 PM

ಇತ್ತೀಚೆಗೆ ಯುವ ಪೀಳಿಗೆಯವರು ಮೊಬೈಲ್ ಇಲ್ಲದ ಜೀವನ ನಶ್ವರ ಅನ್ನೋ ಮಟ್ಟಕ್ಕೆ ತಲುಪಿದ್ದಾರೆ. ಮೊಬೈಲ್​ ಹುಚ್ಚು ಹೆಚ್ಚಾಗಿ ಎಷ್ಟೋ ಜನರ ಬುದ್ಧಿ ಭ್ರಮಣೆಯಾಗಿದೆ, ಪ್ರಾಣ ಕಳೆದುಕೊಂಡಿದ್ದಾರೆ. ಇದೇ ರೀತಿಯಾಗಿ ಯುವತಿಯೊಬ್ಬಳು ಮೊಬೈಲ್​​ಗೀಳು ನೆತ್ತಿಗೆ ಹಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಅದೇ ರೀತಿಯಾಗಿ ಇಲ್ಲೊಬ್ಬ ಯುವತಿ ನೋಡೋಕೆ ರೂಪವಂತೆ ಓದಿನಲ್ಲು ಗುಣವಂತೆ ಬುದ್ದಿವಂತೆ ಮನೆಗೆ ಹಿರಿಮಗಳಾಗಿದ್ದ ಕಾರಣ ಪೋಷಕರು ಸಹ ಸ್ವಲ್ಪ ಹೆಚ್ಚಿನ ಫ್ರೀನೆಸ್ ಕೊಟ್ಟಿದ್ದರು. ಮನೆಯಲ್ಲಿ ಎಲ್ಲವು ಆಕೆಯ ಇಷ್ಟಕ್ಕೆ ತಕ್ಕಂತೆ ನಡೆಯುತ್ತಿತ್ತು. ಆದರೆ ಅದೇ ಪ್ರೀನೆಸ್ ಇದೀಗ ಆಕೆಯ ಜೀವಕ್ಕೆ ಕೊಳ್ಳೀಯಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ಗಾಣಿಗರಪೇಟೆಯಲ್ಲಿ ಸುಂದರ ಕುಟುಂಬ ವಾಸವಾಗಿತ್ತು. ಈ ಕುಟುಂಬದ ಹಿರಿಯ ಮಗಳು ರುಚಿತಾ. ರುಚಿತಾ ತಂದೆ ತಾಯಿ ಮತ್ತು ತಮ್ಮನ ಜೊತೆ ಸುಖ ಜೀವನ ನಡೆಸುತ್ತಿದ್ದಳು. ರುಚಿತಾ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ರಚಿತಾಗೆ ಮೊಬೈಲ್​​ ಹುಚ್ಚು ಅಧಿಕವಾಗಿದ್ದು ಪ್ರತಿನಿತ್ಯ ಕಾಲೇಜಿಗೆ ಹೋಗಿ ಬಂದ ನಂತರ ಮನೆಯಲ್ಲಿದ್ದ ಪೋನ್ ನಲ್ಲೆ ಹೆಚ್ಚು ಕಾಲ ಕಳೆಯುತ್ತಿದ್ದಳಂತೆ. ಇದನ್ನು ಗಮನಿಸುತ್ತಿದ್ದ ತಮ್ಮ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಬುದ್ದಿವಾದ ಹೇಳಿದ್ದನಂತೆ. ಎಷ್ಟು ಬುದ್ದಿವಾದ ಹೇಳಿದರೂ ರುಚಿತಾ ಮಾತ್ರ ಮೊಬೈಲ್ ಬಳಕೆ ಕಡಿಮೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ (ನ.11) ಮಧ್ಯಾಹ್ನ ರುಚಿತಾ ಕಾಲೇಜಿನಿಂದ ಮನೆಗೆ ಬರುವಷ್ಟರಲ್ಲಿ ತಮ್ಮ, ಮೊಬೈಲ್ ಪಾಸ್​ವರ್ಡ್ ಬದಲಾವಣೆ ಮಾಡಿದ್ದನಂತೆ. ಹೀಗಾಗಿ ಪಾಸ್ ವರ್ಡ್ ಹೇಳುವಂತೆ ರುಚಿತಾ ತಮ್ಮನನ್ನು ಹಲವು ಬಾರಿ ಕೇಳಿದ್ದಾಳೆ. ಆದರೆ ತಮ್ಮ ಪಾಸ್​ವರ್ಡ್​​ ಹೇಳದೆ ಸತಾಯಿಸಿದ್ದಾನೆ. ಇಷ್ಟಕ್ಕೆ ಮನನೊಂದ ರುಚಿತಾ ನೇರವಾಗಿ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.

ಇದನ್ನೂ ಓದಿ: ಮೊಬೈಲ್ ಚಾರ್ಜ್ ವಿಚಾರದಲ್ಲಿ ಜಗಳ; ದೊಣ್ಣೆ ಏಟಿಗೆ ವ್ಯಕ್ತಿ ಸಾವು

ರುಚಿತಾ ಕೋಪ ಮಾಡಿಕೊಂಡು ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದು, ಬರ್ತಾಳೆ ಬಿಡು ಅಂತ ಮನೆಯವರು ಸುಮ್ಮನಾಗಿದ್ದಾರೆ. ಆದರೆ ಕೊಠಡಿ ಒಳಗಡೆ ಹೋದವಳು ಎಷ್ಟೆ ಹೊತ್ತಾದರೂ ಹೊರಗಡೆ ಬಾರದಿದ್ದಾಗ, ಅನುಮಾನಗೊಂಡ ಕುಟುಂಬಸ್ಥರು ಕೊಠಡಿ ಒಳಗಡೆ ಹೋಗಿ ನೋಡಿದಾಗ ರುಚಿತಾ ಸೀರೆಯಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೆ ಸೀರೆಯ ನೇಣಿನ ಕುಣಿಕೆಯಲ್ಲಿದ್ದ ರುಚಿತಾಳನ್ನು ಕುಟುಂಬಸ್ಥರು ದೊಡ್ಡಬಳ್ಳಾಫುರದ ಖಾಸಗಿ ಆಸ್ವತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿರೂದಾಗಿ ವೈದ್ಯರು ಹೇಳಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ ಅಕ್ಕ ಮೊಬೈಲ್​ಗೀಳು ಬಿಡಲಿ ಅಂತ ಪೋನ್​ ಪಾಸ್ ವರ್ಡ್ ಬದಲಾಯಿಸಿದಕ್ಕೆ ಮನನೊಂದ ಅಕ್ಕ ನೇಣಿಗೆ ಶರಣಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ. ಇನ್ನೂ ಇತ್ತೀಚೆಗೆ ಶಾಲೆಗೆ ಹೋಗುವ ವಯಸ್ಸಿಗೆ ಮಕ್ಕಳ ಕೈಗೆ ಸಾಕಷ್ಟು ಜನ ಪೋಷಕರು ಹೆಚ್ಚಾಗಿ ಮೊಬೈಲ್ ನೀಡುತ್ತಿದ್ದು, ಈ ರೀತಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಮೊಬೈಲ್​ಗೀಳಿಗೆ ಬೀಳಿಸುವ ಮುನ್ನ ಎಚ್ಚೆತ್ತುಕೊಂಡರೆ ಒಳಿತು.

ವರದಿ-ನವೀನ್ ಟಿವಿ9 ದೇವನಹಳ್ಳಿ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ