ಕಾಡುಪ್ರಾಣಿ ಬೇಟೆಗೆಂದು ತೆರಳಿದ್ದಾಗ ಗುಂಡು ತಗುಲಿ 24 ವರ್ಷದ ಯುವಕ ಸಾವು; ಆಸ್ಪತ್ರೆಗೆ ಸೇರಿಸಿ ಪರಾರಿಯಾದ ಸ್ನೇಹಿತರು
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಲ್ಲಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದ್ದು, ಜತೆಯಲ್ಲಿ ತೆರಳಿದ್ದ ಸ್ನೇಹಿತರು ಗಾಯಗೊಂಡ ಮಧು ಅವರನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾರೆ. ಇದೀಗ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಅರಣ್ಯಕ್ಕೆ ಬೇಟೆಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಸಂದೇಹ ಶುರುವಾಗಿದೆ.
ಹಾಸನ: ಸ್ನೇಹಿತರ ಜತೆ ಕಾಡುಪ್ರಾಣಿ ಬೇಟೆಗೆಂದು ಹೋದಾಗ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಕಲ್ಲಹಳ್ಳಿ ಅರಣ್ಯ ಪ್ರದೇಶಕ್ಕೆ ನಿನ್ನೆ (ಜುಲೈ 4) ಸಂಜೆ ಬೇಟೆಗೆ ತೆರಳಿದ್ದ ಮಧು ಮೃತ ದುರ್ದೈವಿ. 24 ವರ್ಷದ ಮಧು ಕುಶಾವರ ಗ್ರಾಮದವರಾಗಿದ್ದು, ನಿನ್ನೆ ಬೇಟೆಗೆಂದು ತೆರಳಿದ್ದಾಗ ಅನಾಹುತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಮಧು ಅವರಿಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತಾದರೂ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಲ್ಲಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದ್ದು, ಜತೆಯಲ್ಲಿ ತೆರಳಿದ್ದ ಸ್ನೇಹಿತರು ಗಾಯಗೊಂಡ ಮಧು ಅವರನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾರೆ. ಇದೀಗ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಅರಣ್ಯಕ್ಕೆ ಬೇಟೆಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಸಂದೇಹ ಶುರುವಾಗಿದೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪದೇಪದೇ ಮರುಕಳಿಸುತ್ತಿರುವ ದುರಂತ ಕಾಡುಪ್ರಾಣಿಗಳ ಬೇಟೆಗೆಂದು ತೆರಳಿದಾಗ ಗುಂಡೇಟು ತಿಂದು ಸಾವನಪ್ಪುವ ಘಟನೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಮರುಕಳಿಸುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಹಾಗೂ ಕೋಲಾರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಕಾಡು ಮೊಲ ಬೇಟೆಗಾಗಿ ಹಾರಿದ ಗುಂಡಿಗೆ ಕಾರ್ಮಿಕ ಬಲಿಯಾಗಿದ್ದರು. ಕಾರ್ಯ ಗ್ರಾಮದ ಬಳಿ ದುರ್ಘಟನೆ ನಡೆದಿದ್ದು, ಕೇರಳ ಮೂಲದ ಕಾರ್ಮಿಕ ಪ್ರಸನ್ನನ್ ಮೃತಪಟ್ಟಿದ್ದರು. ಕಾಡು ಮೊಲದ ಬೇಟೆಗಾಗಿ ಗುಂಡು ಹಾರಿಸಿ ಕಾರ್ಮಿಕನ ಬಲಿ ಪಡೆದ ಆರೋಪಿ ನಿಶಾದ್ ಸಹ ಕೇರಳ ಮೂಲದವನೇ ಆಗಿದ್ದ. ರಾತ್ರಿ 8.30ರಲ್ಲಿ ಕಾಡುಮೊಲ ಬೇಟೆಯಾಡಲು ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದ ನಿಶಾದ್ ಗುರಿ ತಪ್ಪಿ ಪ್ರಸನ್ನನ್ ಕಾಲಿಗೆ ಗುಂಡು ಹೊಡೆದಿದ್ದಾನೆ. ಕೂಡಲೇ ಪ್ರಸನ್ನನ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಜೂನ್ 14ರಂದು ನಾಲ್ವರು ಸ್ನೇಹಿತರು ಬೇಟೆಗೆಂದು ಹೋಗಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದ ಬಳಿ ಗುಂಡು ತಗುಲಿ ಶಂಕರ್ ಎಂಬುವವರು ಸಾವನ್ನಪ್ಪಿದ್ದರು. ರಾತ್ರಿ ವೇಳೆ ನಾಲ್ವರು ಸ್ನೇಹಿತರಾದ ಕೋದಂಡಪ್ಪ, ಶ್ರೀನಿವಾಸ, ಚೌಡಪ್ಪ ಮತ್ತು ಶಂಕರ್ ಬೇಟೆಗೆಂದು ತೆರಳಿದ್ದಾಗ ಈ ಘಟನೆ ನಡೆದಿತ್ತು. ಲೈಸೆನ್ಸ್ ಹೊಂದಿದ್ದ ಕೋದಂಡಪ್ಪ ಗನ್ನಿಂದ ಮಿಸ್ ಫೈರ್ ಆದ ಗುಂಡು ನೇರವಾಗಿ ಶಂಕರ್ ಹಣೆಗೆ ಬಿದ್ದಿತ್ತು. ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ: ಕಾಡು ಪ್ರಾಣಿಗಳ ಬೇಟೆಯಾಡುದ್ರೆ ತಕ್ಕ ಶಿಕ್ಷೆಯಾಗುತ್ತೆ.. ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಎಚ್ಚರಿಕೆ
ಹಾರು ಬೆಕ್ಕನ್ನು ಬೇಟೆಯಾಡುವಾಗ ಮರದಿಂದ ಮರಕ್ಕೆ ಹಾರಿದ ಚಿರತೆ; ವಿದ್ಯುತ್ ತಂತಿ ತಗುಲಿ ಚಿರತೆ-ಬೆಕ್ಕು ಎರಡೂ ಸಾವು