ಮಂಡ್ಯ: ಕಾಡು ಹಂದಿ ಶಿಕಾರಿಗೆಂದು ಬೇರೆ ಊರಿನಿಂದ ಬಂದು ಯುವಕನಿಗೆ ಗುಂಡು ಹೊಡೆದ ಬೇಟೆಗಾರರು
ಮೈಸೂರು ಜಿಲ್ಲೆಯಿಂದ ಬೇಟೆಯಾಡಲೆಂದೇ ಬಂದಿದ್ದ 6 ಜನ ಯುವಕರು ಮೇಳಾಪುರ ಗ್ರಾಮದ ಮಾದೇಶ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇ ವೇಳೆ ಮಾದೇಶ ಗದ್ದೆಯ ಬದುವಿನಲ್ಲಿ ಹುಲ್ಲು ಕೊಯ್ಯುತ್ತಾ ಇದ್ದರು.
ಮಂಡ್ಯ: ಕಾಡುಹಂದಿ ಬೇಟೆಗೆಂದು ಹೋಗಿದ್ದ ಹವ್ಯಾಸಿ ಬೇಟೆಗಾರರು ಗದ್ದೆಯ ಬದುವಿನಲ್ಲಿದ್ದ ಯುವಕನಿಗೆ ಗುಂಡು ಹೊಡೆದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಬಂದಿದ್ದ ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ, ಮಾದೇಶ (25 ವರ್ಷ) ಎಂಬ ಯುವಕನಿಗೆ ಆತನದ್ದೇ ಗದ್ದೆಯಲ್ಲಿ ಗುಂಡು ಹೊಡೆದಿದ್ದಾರೆ. ಮಾದೇಶ ಅವರ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯಿಂದ ಬೇಟೆಯಾಡಲೆಂದೇ ಬಂದಿದ್ದ 6 ಜನ ಯುವಕರು ಮೇಳಾಪುರ ಗ್ರಾಮದ ಮಾದೇಶ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇ ವೇಳೆ ಮಾದೇಶ ಗದ್ದೆಯ ಬದುವಿನಲ್ಲಿ ಹುಲ್ಲು ಕೊಯ್ಯುತ್ತಾ ಇದ್ದರು ಎನ್ನಲಾಗಿದೆ. ಹಂದಿಗಾಗಿ ಶೋಧ ನಡೆಸುತ್ತಿದ್ದ ತಂಡ ಕಾಡುಹಂದಿಗೆಂದು ಹೊಡೆದ ಗುಂಡು ಸೀದಾ ಮಾದೇಶ ಅವರ ಹೊಟ್ಟೆಗೆ ತಗುಲಿದೆ. ಗುಂಡೇಟಿನಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮಾದೇಶ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೇಟೆಗೆಂದು ತೆರಳಿ ಈ ರೀತಿ ಬೇರೆಯವರಿಗೆ ಗುಂಡು ಹೊಡೆವ ಘಟನೆ ಪದೇ ಪದೇ ಮರುಕಳಿಸುತ್ತಿದ್ದು, ಬೇರೆ ಊರಿನವರು ಮೇಳಾಪುರಕ್ಕೆ ಬೇಟೆಗೆಂದು ಬಂದು ಈ ರೀತಿ ಅನಾಹುತ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಹಲವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಡುಪ್ರಾಣಿ ಬೇಟೆಗೆಂದು ತೆರಳಿದ್ದಾಗ ಗುಂಡು ತಗುಲಿ 24 ವರ್ಷದ ಯುವಕ ಸಾವು; ಆಸ್ಪತ್ರೆಗೆ ಸೇರಿಸಿ ಪರಾರಿಯಾದ ಸ್ನೇಹಿತರು
Shootout: ನಂಜನಗೂಡಿನಲ್ಲಿ ಶೂಟೌಟ್, ಕಾಡು ಮೊಲ ಬೇಟೆಗಾಗಿ ರಾತ್ರಿ ವೇಳೆ ಹಾರಿಸಿದ ಗುಂಡಿಗೆ ಕಾರ್ಮಿಕ ಬಲಿ
(Youth injured as hunters misfired in Mandya)