ಜೊತೆಗೆ ಕುಳಿತು ಕುಡಿದು ಚಿತ್ರಾನ್ನ ತಿಂದು ತೇಗಿ ಸ್ನೇಹಿತನನ್ನೇ ಸುಟ್ಟು ಹಾಕಿ ಡ್ರಾಮಾ ಮಾಡಿದ

ಅದು ಬೆಳಿಗ್ಗೆ 11 ರಿಂದ 12ರ ಸಮಯ ಬಿಸಿಲು ನೆತ್ತಿಗೇರುತ್ತಾ ಇತ್ತು. ಮಟ ಮಟ ಮಧ್ಯಾಹ್ನ ಹಾಡು ಹಗಲೇ ಅದೊಬ್ಬ ವ್ಯಕ್ತಿ ಮನೆಯಿಂದ ಹೊರ ಬಂದು ಚೀರಾಡಿದ್ದ. ನನ್ನ ಸ್ನೇಹಿತ ಬೆಂಕಿ ಹಚ್ಚಿಕೊಂಡು ಸತ್ತ .ನನ್ನ ಸ್ನೇಹಿತ ಹೋದ ಹಣವೂ ಹೋಯ್ತು ಎಂದು ಕೂಗಾಡಿದ್ದ. ಏನಾಯ್ತು ಎಂದು ಅಕ್ಕಪಕ್ಕದ ಜನ ಮನೆಯ ಒಳ ಹೊಕ್ಕು ನೋಡಿದರೆ ಅದೊಬ್ಬ ವ್ಯಕ್ತಿ ದೇಹ ಸುಟ್ಟು ಕರಕಲಾಗಿತ್ತು. ಅಷ್ಟಕ್ಕೂ ಆಗಿದ್ದೇನು?

ಜೊತೆಗೆ ಕುಳಿತು ಕುಡಿದು ಚಿತ್ರಾನ್ನ ತಿಂದು ತೇಗಿ ಸ್ನೇಹಿತನನ್ನೇ ಸುಟ್ಟು ಹಾಕಿ ಡ್ರಾಮಾ ಮಾಡಿದ
ಮಹಾನಿಂಗ(ಕೊಲೆಗಾರ), ಬಸಪ್ಪ(ಹತ್ಯೆಯಾದವ)
Edited By:

Updated on: Feb 06, 2025 | 7:45 PM

ಬಾಗಲಕೋಟೆ, (ಫೆಬ್ರವರಿ 06): ಹಣದ ವಿಚಾರಕ್ಕೆ ಸ್ನೇಹಿತ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಸ್ನೇಹಿತನೇ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ‌‌ ಮಾಡಿದ್ದಾನೆ. 32 ವರ್ಷದ ಬಸಪ್ಪ ತಳವಾರ ಎಂಬುವನನ್ನು ಸ್ನೇಹಿತ 37 ವರ್ಷದ ಮಹಾನಿಂಗ ಬಿದರಿ ಕೊಲೆ ಮಾಡಿದ್ದಾನೆ. ಬಸಪ್ಪ ತಳವಾರ ಮಹಾನಿಂಗನಿಗೆ ಎರಡುವರೆ ಲಕ್ಷ ಹಣ ಕೊಡಬೇಕಾಗಿತ್ತಂತೆ. ಪದೆ ಪದೆ ಕೇಳಿದರೂ ವಾಪಸ್ ಕೊಟ್ಟಿರಲಿಲ್ಲವಂತೆ. ಈ ವಿಚಾರಕ್ಕೆಇಬ್ಬರ ನಡುವೆ ಗಲಾಟೆಯಾಗಿದ್ದು. ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ‌.

ಮಹಾನಿಂಗ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ‌ಮಾಡಿ ತಾನೆ ಹೈಡ್ರಾಮಾ ಮಾಡಿದ್ದ.ನನ್ನ ಸ್ನೇಹಿತನೂ ಹೋದ ‌ನನ್ನ ಹಣವೂ ಹೋಯ್ತು ಎಂದು ಹೆದ್ದಾರಿ ಮೇಲೆ‌ನಿಂತು ಕೂಗಾಡಿ ಚೀರಾಡಿ ಮೊಸಳೆ ‌ಕಣ್ಣೀರು ಸುರಿಸಿದ್ದ. ನಂತರ ಜನ‌ ಜಮಾಯಿಸಿದ್ದನ್ನು ನೋಡಿ ಓಡಿ ಹೋಗಿ ತಾನೇ ಜಮಖಂಡಿ ಗ್ರಾಮೀಣ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ: ತನಿಖೆಯಲ್ಲಿ ಗಂಡನ ಕಹಾನಿ ಬಟಾಬಯಲು

ಕೊಲೆಗೆ ಕಾರಣವೇನು?

ಇಬ್ಬರು ನಾಲ್ಕು ವರ್ಷದಿಂದ ಸ್ನೇಹಿತರು. ಬಸಪ್ಪ ತಳವಾರ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜನವಾಡ ಗ್ರಾಮದ‌ ನಿವಾಸಿ. ಕೊಲೆ ಮಾಡಿದ ಮಹಾನಿಂಗ ಬಾಗಲಕೋಟೆ ಜಿಲ್ಲೆ ತೇರದಾಳ ತಾಲ್ಲೂಕಿನ ಹನಗಂಡಿ ಗ್ರಾಮದ ನಿವಾಸಿ. ಹಿಂದೆ ಮೈಸೂರಲ್ಲಿ‌ ಇಬ್ಬರು ಕೂಲಿ ಕೆಲಸಕ್ಕಿದ್ದರು. ಹದಿನಾಲ್ಕು ದಿನದ ಹಿಂದೆ ಮಹಾನಿಂಗ ಕುಂಬಾರಹಳ್ಳಕ್ಕೆ ಬಂದು ಬಾಡಿಗೆ ಮನೆ ಹಿಡಿದಿದ್ದ‌.ಪೆಬ್ರುವರಿ 2ರಂದು ಬಸಪ್ಪ ಕೂಡ ಕುಂಬಾರಹಳ್ಳಕ್ಕೆ ಬಂದಿದ್ದ. ಅದೇ ಮನೆಯಲ್ಲಿದ್ದ. ನಂತರ ಮೂರನೇ ತಾರೀಖು ಮಧ್ಯಾಹ್ನ ಮದ್ಯಸೇವನೆ ಮಾಡಿ ಮನೆಯಲ್ಲಿ ಹಣದ ವಿಚಾರಕ್ಕೆ ಜಗಳವಾಡಿದ್ದರು. ನಂತರ ಕುಡಿದ‌ ಮತ್ತಲ್ಲಿ ಬಸಪ್ಪ ಮಲಗಿದ್ದ. ಆಗ ಚಿತ್ರಾನ್ನ ತಿಂದು ತೇಗಿದ‌ ಮಹಾನಿಂಗ, ಬೈಕ್ ನಲ್ಲಿದ್ದ ಎರಡು ಬಾಟಲ್ ಪೆಟ್ರೋಲ್ ತಂದು  ಬಸಪ್ಪನ ಮೇಲೆ  ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ .ನನ್ನ ಸ್ನೇಹಿತನೂ ಹೋದ ‌ನನ್ನ ಹಣವೂ ಹೋಯ್ತು ಎಂದು ಹೆದ್ದಾರಿ ಮೇಲೆ‌ನಿಂತು ಡ್ರಾಮಾ ಮಾಡಿದ್ದ.

ಮಹಾನಿಂಗ ತಾನು ಕೂಲಿ ‌ಮಾಡಿ ಗಳಿಸಿದ ಹಣವನ್ನು ಬಸಪ್ಪನ ಕೈಗೆ ಕೊಡುತ್ತಿದ್ದ. ಅದು ಎರಡುವರೆ ಲಕ್ಷ ಆಗಿತ್ತು. ಆ ಹಣ ವಾಪಸ್ ಕೊಡಲು ನಿರಾಕರಿಸಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಇನ್ನು ಮಹಾನಿಂಗನಿಗೆ ಮದುವೆಯಾಗಿ ಪತ್ನಿ ಗರ್ಭಿಣಿಯಾಗಿದ್ದಾಳೆ. ಬಸಪ್ಪ ತಳವಾರ ಮದುವೆಯಾಗಿಲ್ಲ.ಆದರೆ ಮನೆ ಹಿರಿ ಮಗನಾಗಿದ್ದು ಕುಟುಂಬದ ಜವಾಬ್ದಾರಿ ಆತನ ಮೇಲಿತ್ತು.ಅಂತವನ‌ ಕೊಲೆ ಮಾಡಿದ್ದಕ್ಕೆ ಕುಟುಂಬಸ್ಥರು ಆಕ್ರೋಶಗೊಂಡಿದ್ದು,ಮಹಾನಿಂಗನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:10 pm, Thu, 6 February 25