Inspiring Story: 65 ನೇ ವಯಸ್ಸಿನಲ್ಲಿ ಮೊಮ್ಮಗನೊಂದಿಗೆ 10 ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ ಅಜ್ಜಿ

65 ವರ್ಷದ ಪ್ರಭಾವತಿ ತಮ್ಮ ಮೊಮ್ಮಗನೊಂದಿಗೆ 10 ನೇ ತರಗತಿಯ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಓದುವ ವಯಸ್ಸಿನಲ್ಲೇ ಮದುವೆ, ಮಕ್ಕಳು ಮತ್ತು ಮನೆ ಕೆಲಸಗಳಿಂದಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದರು. ಆದರೆ ಮೊಮ್ಮಗನ ಪ್ರೇರಣೆಯಿಂದ ಮತ್ತೆ ಓದಲು ಪ್ರಾರಂಭಿಸಿ, ಇದೀಗ ಶೇಕಡಾ 52 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಓದಲು ವಯಸ್ಸಿನ ಮಿತಿ ಇಲ್ಲ ಎಂದು ಸಾಬೀತುಪಡಿಸಿದ್ದಾರೆ.

Inspiring Story: 65 ನೇ ವಯಸ್ಸಿನಲ್ಲಿ ಮೊಮ್ಮಗನೊಂದಿಗೆ 10 ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆದ ಅಜ್ಜಿ
Inspiring Story

Updated on: May 15, 2025 | 3:13 PM

50 ವರ್ಷ ಕಳೆಯುತ್ತಿದ್ದಂತೆ ಜೀವನವೇ ಮುಗಿಯಿತು ಎಂದು ಅಂದುಕೊಳ್ಳುವವರ ಮಧ್ಯೆ ಇಲ್ಲೊಬ್ಬರು ವಯಸ್ಸಿನ ಮಿತಿಯನ್ನು ದಾಟಿ ಹೊಸ ಸಾಧನೆಗೈದಿದ್ದಾರೆ. ತನ್ನ 65ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರು ಮೊಮ್ಮಗನೊಂದಿಗೆ 10 ನೇ ತರಗತಿ ಪರೀಕ್ಷೆ ಬರೆದು ಪಾಸ್​ ಆಗಿದ್ದಾರೆ. ಈ ಮೂಲಕ ಓದಲು ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಮುಂಬೈನ ಪ್ರಭಾವತಿ(65) ಎಂಬ ಮಹಿಳೆ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 52 ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾವತಿ ‘ನಾನು ಮತ್ತು ನನ್ನ ಮೊಮ್ಮಗ ಇಬ್ಬರೂ 10 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ ಎಂದು ನನಗೆ ಸಂತೋಷವಾಗಿದೆ. ನಾನು ಪರೀಕ್ಷೆ ಬರೆಯಲು ಹೋದಾಗ, ಅಲ್ಲಿದ್ದ ಎಲ್ಲರೂ ತುಂಬಾ ಸಂತೋಷಪಟ್ಟರು. ಎಲ್ಲರೂ ನನ್ನನ್ನು ಗೌರವಿಸುತ್ತಿದ್ದರು. ನನ್ನ ಶಿಕ್ಷಕರು ತುಂಬಾ ಒಳ್ಳೆಯವರಾಗಿದ್ದರು. ನನ್ನ ಕುಟುಂಬದಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ.’ ಎಂದು ಹೇಳಿದ್ದಾರೆ.

ಪರೀಕ್ಷೆಯಲ್ಲಿ ಪಡೆದ  ಅಂಕ ಎಷ್ಟು?

ಅಜ್ಜಿ ಶೇಕಡಾ 52 ಅಂಕಗಳನ್ನು ಪಡೆದರೆ, ಮೊಮ್ಮಗ ಸೋಹಂ ಜಾಧವ್ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 82 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾನೆ. ಅಜ್ಜಿ ಮರಾಠಿ ಮಾಧ್ಯಮದಲ್ಲಿ ಪರೀಕ್ಷೆ ಬರೆದರೆ,ಮೊಮ್ಮಗ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತೀರ್ಣನಾಗಿದ್ದಾನೆ.

ಇದನ್ನೂ ಓದಿ: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್

ಅಜ್ಜಿಯ ಹಲವು ವರ್ಷಗಳ ಕನಸು:

ಮಾಧ್ಯಮ ವರದಿಗಳ ಪ್ರಕಾರ, ಅಜ್ಜಿ ಹೇಳುವಂತೆ ತನಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಯಿತು ಮತ್ತು ನಂತರ ಮಕ್ಕಳು ಮತ್ತು ಮನೆಯ ಜವಾಬ್ದಾರಿಗಳು ತುಂಬಾ ಹೊರೆಯಾಗಿದ್ದರಿಂದ ಬಯಸಿದ್ದರೂ ಸಹ ಓದಲು ಸಾಧ್ಯವಾಗಲಿಲ್ಲ, ಆದರೆ ನನ್ನ ಮೊಮ್ಮಗ ಹಗಲಿರುಳು ಓದುತ್ತಿರುವುದನ್ನು ನೋಡಿದಾಗ, ಮತ್ತೆ ಓದುವ ಬಯಕೆ ಜಾಗೃತವಾಯಿತು. ಇದನ್ನು ನಾನು ಕುಟುಂಬದಲ್ಲಿ ಹೇಳಿದಾಗ ಎಲ್ಲರು ನನ್ನ ನಿರ್ಧಾರವನ್ನು ಗೌರವಿಸಿಪೂರ್ಣ ಹೃದಯದಿಂದ ಬೆಂಬಲಿಸಿದರು.

ಮನೆಕೆಲಸ ಮತ್ತು ಇತರ ಜವಾಬ್ದಾರಿಗಳಿಂದಾಗಿ ಓದಲು ಬಹಳ ಕಡಿಮೆ ಸಮಯ ಸಿಗುತ್ತಿತ್ತು, ಆದರೆ ಸಮಯ ಸಿಕ್ಕಾಗಲೆಲ್ಲಾ ಶ್ರದ್ಧೆಯಿಂದ ಓದುತ್ತಿದ್ದೆ. ಇದರ ಪರಿಣಾಮ ಇಂದು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ