Meet Kafi: ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿಗೆ ಇಂದು PUCಯಲ್ಲಿ ಶೇ.95.6 ಅಂಕ
ಚಂಡೀಗಢದ ಕಾಫಿ ಎಂಬ ವಿದ್ಯಾರ್ಥಿನಿ ತನ್ನ ಮೂರನೇ ವಯಸ್ಸಿನಲ್ಲಿ ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡಿದ್ದರೂ ಕೂಡ ಛಲ ಬಿಡದೇ ಓದಿ ಇದೀಗ ಸಿಬಿಎಸ್‌ಇ 12ನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಶೇ. 95.6 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ. ಆಡಿಯೋ ಪುಸ್ತಕಗಳು ಮತ್ತು ಯೂಟ್ಯೂಬ್ ನನ್ನ ಕಲಿಕೆಗೆ ಸಹಾಯಕವಾಗಿದೆ ಎಂದು ಕಾಫಿ ಹೇಳಿದ್ದಾಳೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದು ಐಎಎಸ್ ಅಧಿಕಾರಿಯಾಗುವುದು ಆಕೆಯ ಕನಸು.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಈ ಬಾರಿ ಶೇ. 88.39 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮಧ್ಯೆ ಚಂಡೀಗಢದ ವಿದ್ಯಾರ್ಥಿನಿ ಕಾಫಿ( Kafi) ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ತನ್ನ ಮೂರನೇ ವಯಸ್ಸಿನಲ್ಲಿ ಆಸಿಡ್ ದಾಳಿಗೆ ಒಳಗಾದ ಕಾಪಿ, ದೃಷ್ಟಿ ಕಳೆದುಕೊಂಡಿದ್ದರೂ ಕೂಡ 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 95.6 ಅಂಕಗಳನ್ನು ಗಳಿಸುವ ಮೂಲಕ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಕಾಲೇಜಿನಲ್ಲಿ ಅಗ್ರಸ್ಥಾನ ಪಡೆದಿದ್ದಾಳೆ. ಈ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಎರಡು ವರ್ಷಗಳ ಹಿಂದೆಯೂ ಕೂಡ ಅಂದರೆ 10 ನೇ ತರಗತಿಯಲ್ಲಿಯೂ ಸಹ ಕಾಫಿ ಶೇ. 95.2 ಅಂಕ ಗಳಿಸುವ ಮೂಲಕ ತನ್ನ ಸಂಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು.
ವರದಿಗಳ ಪ್ರಕಾರ, ತನ್ನ ಮೂರನೇ ವಯಸ್ಸಿನಲ್ಲಿ ನೆರೆಮನೆಯಿಂದಲೇ ಆಸಿಡ್ ದಾಳಿಗೆ ಒಳಗಾಗಿದ್ದ ಕಾಫಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಳು. ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಈಕೆ 2016 ರಲ್ಲಿ ಎಂಟನೇ ವಯಸ್ಸಿನಲ್ಲಿ ಶಾಲೆಗೆ ಸೇರಿದಳು. ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಈಕೆಯನ್ನು 2018 ರಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್‌ನಲ್ಲಿ ನೇರವಾಗಿ 6 ನೇ ತರಗತಿಗೆ ಸೇರಿಸಲಾಯಿತು.
ಇದನ್ನೂ ಓದಿ: ಕಸದ ಬುಟ್ಟಿಯಲ್ಲಿ ಸಿಕ್ಕಿದ್ದ ಅಂಧ ಮಗು ಇಂದು ಅಸಿಸ್ಟಂಟ್ ಕಲೆಕ್ಟರ್
ತನ್ನ 12 ನೇ ತರಗತಿಯ ಪರೀಕ್ಷೆಗಳಿಗೆ, ಕಾಫಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡರಿಂದ ಮೂರು ಗಂಟೆಗಳ ಕಾಲ ಆಡಿಯೋ ಪುಸ್ತಕಗಳು ಮತ್ತು ಯೂಟ್ಯೂಬ್ ಅನ್ನು ಅವಲಂಬಿಸಿ ಅಧ್ಯಯನ ಮಾಡುತ್ತಿದ್ದಳು. ದೆಹಲಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದು ನಂತರ ಐಎಎಸ್ ಅಧಿಕಾರಿಯಾಗುವುದು ಕಾಫಿಯ ಕನಸು. ಈಗಾಗಲೇ ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೂ ಹಾಜರಾಗಿದ್ದು, ಶೀಘ್ರದಲ್ಲೇ ಪ್ರವೇಶ ಪಡೆಯುವ ಭರವಸೆಯಲ್ಲಿದ್ದಾರೆ ಕಾಫಿ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 14 May 25




