ಪಿಎಚ್‌ಡಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: 70,000ರೂ. ವರೆಗೆ ಮಾಸಿಕ ಫೆಲೋಶಿಪ್, 10 ಲಕ್ಷ ರೂ. ಅನುದಾನ!

ಪಿಎಚ್‌ಡಿ ಮಾಡುವ ವಿದ್ಯಾರ್ಥಿಗಳಿಗೆ AICTE ಹೊಸ ಡಾಕ್ಟರಲ್ ಫೆಲೋಶಿಪ್ ಘೋಷಿಸಿದೆ. ಸಂಶೋಧನೆಯನ್ನು ಉದ್ಯಮ ಹಾಗೂ ನವೋದ್ಯಮಗಳೊಂದಿಗೆ ಜೋಡಿಸುವ ಈ ಯೋಜನೆಯಡಿ 245 ಕೋಟಿ ರೂ. ಬಜೆಟ್‌ನಲ್ಲಿ 150 ಫೆಲೋಶಿಪ್‌ಗಳಿವೆ. ಆಯ್ಕೆಯಾದವರಿಗೆ ಐದು ವರ್ಷಗಳ ಕಾಲ ಪ್ರತಿ ತಿಂಗಳು 60,000-70,000 ರೂ. ಆರ್ಥಿಕ ನೆರವು, 10 ಲಕ್ಷ ರೂ. ನಾವೀನ್ಯತೆ ಅನುದಾನ ಹಾಗೂ ಉದ್ಯಮದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ.

ಪಿಎಚ್‌ಡಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: 70,000ರೂ. ವರೆಗೆ ಮಾಸಿಕ ಫೆಲೋಶಿಪ್, 10 ಲಕ್ಷ ರೂ. ಅನುದಾನ!
ಪಿಎಚ್‌ಡಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ

Updated on: Sep 08, 2026 | 3:00 PM

ಪಿಎಚ್‌ಡಿ (PhD) ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಭರ್ಜರಿ ಸುದ್ದಿಯೊಂದನ್ನು ನೀಡಿದೆ. ಸಂಶೋಧನೆಯನ್ನು ನೇರವಾಗಿ ಉದ್ಯಮ ಹಾಗೂ ನವೋದ್ಯಮಗಳ (Startups) ಜೊತೆ ಜೋಡಿಸುವ ಉದ್ದೇಶದಿಂದ AICTE ಹೊಸ ಡಾಕ್ಟರಲ್ ಫೆಲೋಶಿಪ್ ಯೋಜನೆಯನ್ನು ಅನುಮೋದಿಸಿದೆ. 245 ಕೋಟಿ ರೂ. ಬಜೆಟ್ ಹೊಂದಿರುವ ಈ ಯೋಜನೆಯಡಿ ಒಟ್ಟು 150 ಪಿಎಚ್‌ಡಿ ಫೆಲೋಶಿಪ್‌ಗಳನ್ನು ಒದಗಿಸಲಾಗುತ್ತದೆ.

ಐದು ವರ್ಷಗಳವರೆಗೆ ಆರ್ಥಿಕ ನೆರವು:

ಈ ಯೋಜನೆಯಡಿ ಆಯ್ಕೆಯಾಗುವ ಸಂಶೋಧಕರಿಗೆ ಐದು ವರ್ಷಗಳ ಕಾಲ ಅತ್ಯುತ್ತಮ ಮಾಸಿಕ ಫೆಲೋಶಿಪ್ ನೀಡಲಾಗುತ್ತದೆ. ಮೊದಲ ಮೂರು ವರ್ಷಗಳ ಕಾಲ ಪ್ರತಿತಿಂಗಳು 60,000ರೂ. ಹಾಗೂ ನಂತರದ ಎರಡು ವರ್ಷಗಳ ಕಾಲ ಪ್ರತಿ ತಿಂಗಳು 70,000ರೂ. ಧನಸಹಾಯ ಸಿಗಲಿದೆ. ಇದರ ಜೊತೆಗೆ ನಿಯಮಾವಳಿಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA) ಕೂಡ ಲಭ್ಯವಿರಲಿದೆ.

10 ಲಕ್ಷ ರೂ. ವರೆಗೆ ಪ್ರತ್ಯೇಕ ನಾವೀನ್ಯತೆ ಅನುದಾನ:

ಕೇವಲ ಮಾಸಿಕ ಫೆಲೋಶಿಪ್ ಮಾತ್ರವಲ್ಲದೆ, ಸಂಶೋಧನಾ ಕಾರ್ಯಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ಧನಸಹಾಯ ನೀಡಲಾಗುತ್ತದೆ. ಮೂಲಮಾದರಿ ಅಭಿವೃದ್ಧಿ (Prototype Development), ಪರೀಕ್ಷೆ, ಕ್ಷೇತ್ರ ಪ್ರಯೋಗಗಳು ಮತ್ತು ದತ್ತಾಂಶ ಸಂಗ್ರಹಣೆಯಂತಹ ನಾವೀನ್ಯತೆ-ಸಂಬಂಧಿತ ಕೆಲಸಗಳಿಗಾಗಿ ಪ್ರತಿ ಸಂಶೋಧಕರಿಗೆ 10 ಲಕ್ಷದವರೆಗೆ ಅನುದಾನ ಸಿಗಲಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳ ಜೊತೆ ಕೆಲಸ ಮಾಡುವ ಅವಕಾಶ:

ಈ ಫೆಲೋಶಿಪ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಸಂಶೋಧಕರು ಪ್ರಮುಖ ಉದ್ಯಮಗಳು, ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಮತ್ತು ಇನ್ಕ್ಯುಬೇಟರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಬಹುದು. ಅಭ್ಯರ್ಥಿಗಳಿಗೆ 6 ರಿಂದ 12 ತಿಂಗಳವರೆಗೆ ಕೈಗಾರಿಕಾ ಅನುಭವ (Industrial Experience) ಪಡೆಯುವ ಅವಕಾಶವೂ ಇರಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ, ಮೂಲಮಾದರಿ ರಚನೆ ಹಾಗೂ ತಂತ್ರಜ್ಞಾನ ವರ್ಗಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು.

ಯಾವ ಸಂಸ್ಥೆಗಳಲ್ಲಿ ಪಿಎಚ್‌ಡಿ ಮಾಡಬಹುದು?

ಎನ್‌ಐಆರ್‌ಎಫ್ (NIRF) ಶ್ರೇಯಾಂಕದಲ್ಲಿ ಅಗ್ರ 150 ರಲ್ಲಿ ಸ್ಥಾನ ಪಡೆದಿರುವ ಕಾಲೇಜುಗಳು, ಶ್ರೇಷ್ಠತೆಯ ಸಂಸ್ಥೆಗಳು (Institutions of Eminence) ಮತ್ತು ಉತ್ತಮ ಸಂಶೋಧನಾ ಸೌಲಭ್ಯಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮದಡಿಯಲ್ಲಿ ಪಿಎಚ್‌ಡಿ ನೀಡಲು ಅರ್ಹತೆ ಹೊಂದಿರುತ್ತವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರಗಳಲ್ಲಿ ಬಹುಶಿಸ್ತೀಯ (Multidisciplinary) ಸಂಶೋಧನೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us