Karnataka 2nd PUC Results: ಜಯನಗರದ ವಿಜಯ ಪಿಯು ಕಾಲೇಜಿನ ಅವಳಿ ವಿದ್ಯಾರ್ಥಿಗಳು ಒಂದೇ ಅಂಕ ಗಳಿಸಿದ್ದಾರೆ
ಜಯನಗರದ ವಿಜಯ ಪಿಯು ಕಾಲೇಜಿನ ಸರ್ವೇಶ್ ಎನ್.ಎನ್ ಮತ್ತು ಸಂತೋಷ್ ಎನ್.ಎನ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಂದೇ ಅಂಕಗಳನ್ನು ಗಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ 2023 ರ ಫಲಿತಾಂಶ (Karnataka 2nd PUC Results) ನಿನ್ನೆ (April 21) ಪ್ರಕಟವಾಗಿದೆ. ಫಲಿತಾಂಶ ಪ್ರಕಟಣೆಗಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಟಾಪರ್ಗಳ ಹೆಸರನ್ನು ಘೋಷಿಸಲಾಗಿತ್ತು. ಇದೀಗ ಬೆಂಗಳೂರಿನ ಜಯನಗರದ (Jayanagar) ವಿಜಯ ಪಿಯು ಕಾಲೇಜಿನ ಸರ್ವೇಶ್ ಎನ್‌ಎನ್ (Sarvesh NN) (ಕೆಂಪು ಬಣ್ಣದ ಬಟ್ಟೆ ಧರಿಸಿರುವ ವಿದ್ಯಾರ್ಥಿ) ಮತ್ತು ಸಂತೋಷ್ ಎನ್‌ಎನ್ (Santhosh NN) ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಂದೇ ಅಂಕಗಳನ್ನು ಗಳಿಸಿದ್ದಾರೆ. ಈ ಒಂದು ಅಪರೂಪದ ಘಟನೆಯ ಕುರಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವೈಯಕ್ತಿಕ ವಿಷಯಗಳಲ್ಲಿ ಅವರ ಅಂಕಗಳು ವಿಭಿನ್ನವಾಗಿದ್ದರೂ ಇಬ್ಬರೂ 600 ರಲ್ಲಿ 566 ಗಳಿಸಿದ್ದಾರೆ.
“ಫಲಿತಾಂಶಗಳಿಂದ ನಮಗೆ ಆಶ್ಚರ್ಯವಾಯಿತು. ನಾವಿಬ್ಬರು ಓದುತ್ತಿರುವುದರಲ್ಲಿ ಐದು ವಿಷಯಗಳು ವಿಭಿನ್ನವಾಗಿವೆ. ನಾವು ಕೆಲವೊಮ್ಮೆ ಒಟ್ಟಿಗೆ ಅಧ್ಯಯನ ಮಾಡುತ್ತೇವೆ ಮತ್ತು ಅನುಮಾನಗಳನ್ನು ಸ್ಪಷ್ಟಪಡಿಸುತ್ತೇವೆ. ಆದರೆ, ನಾವು ಒಂದೇ ರೀತಿಯ ಅಂಕಗಳನ್ನು ನಿರೀಕ್ಷಿಸಿರಲಿಲ್ಲ” ಎಂದು ಸರ್ವೇಶ್ ಹೇಳಿದರು. ಕ್ರಿಕೆಟ್, ಸಂಗೀತ ಮತ್ತು ಚಲನಚಿತ್ರಗಳಲ್ಲಿ ಅವರಿಬ್ಬರಿಗಿರುವ ಆಸಕ್ತಿಯನ್ನು ಹೊರತುಪಡಿಸಿದರೆ ಅವರಲ್ಲಿ ಹೆಚ್ಚು ಸಾಮ್ಯತೆ ಇಲ್ಲ ಎಂದು ಸರ್ವೇಶ್ ಹೇಳಿದರು.
“ನಾನು ಬೆಳಿಗ್ಗೆ ಓದುತ್ತೇನೆ, ಸಂತೋಷ್ ರಾತ್ರಿ ಓದುತ್ತಾನೆ, ಶಾಲೆಯಲ್ಲಿ ನಾವು ಒಟ್ಟಿಗೆ ಇದ್ದೇವೆ, ಆದರೆ ನಮ್ಮ ಎಸ್‌ಎಸ್‌ಎಲ್‌ಸಿ ಅಂಕಗಳು ತುಂಬಾ ವಿಭಿನ್ನವಾಗಿವೆ” ಎಂದು ಸರ್ವೇಶ್ ಹೇಳಿದರು. ಈ ಅವಳಿ ಜೋಡಿ ಮುಂದಿನ ದಿನಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಕಾಂ ಅನ್ನು ಆಯ್ಕೆ ಮಾಡಲು ಯೋಚಿಸಿದ್ದಾರೆ.
ಇದನ್ನೂ ಓದಿ: ಮರುಮೌಲ್ಯಮಾಪನಕ್ಕೆ ಮೇ 3 ರಿಂದ ಅರ್ಜಿ ಸಲ್ಲಿಸಲು ಅವಕಾಶ
ದ್ವಿತೀಯ ಪಿಯುಸಿ ಫಲಿತಾಂಶದ ಪ್ರಕಾರ ಕಲಾ ವಿಭಾಗದಲ್ಲಿ ಜಯನಗರ NMKRV ಕಾಲೇಜು ವಿದ್ಯಾರ್ಥಿನಿ ಥಬಸುಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೌಶಿಕ್ 600ಕ್ಕೆ 596 ಅಂಕಗಳನ್ನು ಗಳಿಸಿ ಮೊದಲನೇ ಸ್ಥಾನದಲ್ಲಿದ್ದಾರೆ.