CET 2021: ವಿದ್ಯಾರ್ಥಿಗಳೇ.. ಪರೀಕ್ಷಾ ಕೇಂದ್ರಕ್ಕೆ ತೆರಳುವ ಮೊದಲು ಕಡ್ಡಾಯವಾಗಿ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ

| Updated By: Skanda

Updated on: Aug 28, 2021 | 7:12 AM

KCET 2021: ಪರೀಕ್ಷೆಗೆ ತೆರಳುವ ಮುನ್ನ ಕೊನೇಕ್ಷಣದಲ್ಲಿ ವಿದ್ಯಾರ್ಥಿಗಳು ಕೆಲ ಅಂಶಗಳನ್ನು ಕಡ್ಡಾಯವಾಗಿ ಗಮನಿಸಲೇಬೇಕಿದ್ದು, ಗೊಂದಲಗಳಿಲ್ಲದೇ ಪರೀಕ್ಷೆಗೆ ಹಾಜರಾಗಲಿ ಎಂಬ ಕಾರಣಕ್ಕಾಗಿ ಆ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

CET 2021: ವಿದ್ಯಾರ್ಥಿಗಳೇ.. ಪರೀಕ್ಷಾ ಕೇಂದ್ರಕ್ಕೆ ತೆರಳುವ ಮೊದಲು ಕಡ್ಡಾಯವಾಗಿ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಇಂದಿನಿಂದ 3 ದಿನ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:30 ರಿಂದ ಪರೀಕ್ಷೆ ಆರಂಭವಾಗಲಿದ್ದು, ಇಂದು ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ನಾಳೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪರೀಕ್ಷೆ ಆಯೋಜಿಸಲಾಗಿದ್ದು, ಆಗಸ್ಟ್​ 30ರಂದು ಹೊರನಾಡು & ಗಡಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಒಟ್ಟು 530 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದರೆ ಇನ್ನುಳಿದ ಜಿಲ್ಲೆಗಳಲ್ಲಿ 444 ಕೇಂದ್ರಗಳು ಇವೆ. ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಸಿಕೊಂಡಿದ್ದು, ಈಗಾಗಲೇ ಪರೀಕ್ಷೆ ಬರೆಯುವ 12 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನವರಾಗಿದ್ದರೆ ಶಿವಮೊಗ್ಗ ಹಾಗೂ ಕೋಲಾರದ ತಲಾ ಒಂದು ವಿದ್ಯಾರ್ಥಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕೊರೊನಾ ಸೋಂಕು, ಸೋಂಕಿನ‌ ಲಕ್ಷಣ ಇದ್ದವರಿಗೆ ಪ್ರತ್ಯೇಕ ಕೊಠಡಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಐಸೊಲೇಷನ್ ಸೆಂಟರ್ ಮೂಲಕ ಪರೀಕ್ಷೆಗೆ ಅನುವು ಮಾಡಿಕೊಡಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದ್ದು, ಒಂದು ಡೆಸ್ಕ್ ನಲ್ಲಿ ಇಬ್ಬರು ಕೂತು ಪರೀಕ್ಷೆ ಬರೆಯಬಹುದು.

ಕೊವಿಡ್ 19 ಭೀತಿ ಇನ್ನೂ ಮಾಸಿಲ್ಲದ ಕಾರಣ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸಿಇಟಿ ಪರೀಕ್ಷೆ ಮಾಡಲಾಗುತ್ತಿದೆ. ಒಟ್ಟು 530 ವೀಕ್ಷಕರು, 1060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆಪತ್ರಿಕೆ ಪಾಲಕರು, 8409 ಕೊಠಡಿ ಮೇಲ್ವಿಚಾರಕರು ಹಾಗೂ 20,415 ಅಧಿಕಾರಿ ವರ್ಗದ ಸಿಬ್ಬಂದಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಆಗಸ್ಟ್​ 30ರಂದು ಹೊರನಾಡು & ಗಡಿಭಾಗದ ವಿದ್ಯಾರ್ಥಿಗಳಿಗೆ ನಡೆಯಲಿರುವ ಪರೀಕ್ಷೆ ರಾಜ್ಯದ 6 ಸ್ಥಳಗಳಲ್ಲಿ ಅಂದರೆ ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷೆಗೆ 1682 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಉಚಿತ ಮಾಸ್ಕ್ ವಿತರಣೆ ಮಾಡಲಾಗುತ್ತದೆ. ವೀಕೆಂಡ್ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ ಸಂಚರಿಸಬಹುದಾಗಿದೆ. ಬಹುಮುಖ್ಯವಾಗಿ ಪರೀಕ್ಷೆಗೆ ತೆರಳುವ ಮುನ್ನ ಕೊನೇಕ್ಷಣದಲ್ಲಿ ವಿದ್ಯಾರ್ಥಿಗಳು ಕೆಲ ಅಂಶಗಳನ್ನು ಕಡ್ಡಾಯವಾಗಿ ಗಮನಿಸಲೇಬೇಕಿದ್ದು, ಗೊಂದಲಗಳಿಲ್ಲದೇ ಪರೀಕ್ಷೆಗೆ ಹಾಜರಾಗಲಿ ಎಂಬ ಕಾರಣಕ್ಕಾಗಿ ಆ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳು
* ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಬರೆಯಬೇಕು
* ಅಭ್ಯರ್ಥಿಗಳು ಸಿಇಟಿ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು
* ಓಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿರುವ ಕ್ರಮ ಸಂಖ್ಯೆ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು
* ಉತ್ತರಗಳನ್ನು OMR ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು
* ಪರೀಕ್ಷೆಗೆ Blue/ Black ಬಾಲ್ ಪಾಯಿಂಟ್ ಪೆನ್ ಬಳಸಬೇಕು
* ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ
* ಪರೀಕ್ಷೆಗೂ ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು
* ಪ್ರವೇಶ ಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ ಕಡ್ಡಾಯ
* ಪರೀಕ್ಷಾ ಕೊಠಡಿಯೊಳಗೆ ವಾಚ್, ಮೊಬೈಲ್ ನಿಷೇಧ
* ಅಭ್ಯರ್ಥಿಗಳು ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವಂತಿಲ್ಲ

ಇದನ್ನೂ ಓದಿ:
CET 2021: ಆಗಸ್ಟ್​ 27ರಿಂದ ಸಿಇಟಿ; ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಣೆ: ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ 

ಪದವಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿ: ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾರಂಭ

(CET 2021 Karnataka students to attend KCET Exam for 3 days from August 28th here are the important guidelines you must know)

Published On - 7:09 am, Sat, 28 August 21