CET 2021: ಆಗಸ್ಟ್ 27ರಿಂದ ಸಿಇಟಿ; ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಣೆ: ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ
ಬೆಂಗಳೂರು 10, ಶಿವಮೊಗ್ಗ 1, ಕೋಲಾರ 1 ಸೇರಿದಂತೆ ಒಟ್ಟು 12 ಸೋಂಕಿತ ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ (ಆಗಸ್ಟ್ 27) ಆಗಸ್ಟ್ 30ರವರೆಗೆ ಸಿಇಟಿ (Karnataka CET 2021) ನಡೆಯಲಿದ್ದು, 530 ಕೇಂದ್ರಗಳಲ್ಲೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕೊವಿಡ್ ಸೋಂಕಿತರು, ಶಂಕಿತರಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯವುಳ್ಳವರಿಗಾಗಿ ಐಸೋಲೇಷನ್ ಸೆಂಟರ್ಗಳಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸುತ್ತೇವೆ. ಗಡಿ ಭಾಗದಲ್ಲಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲು ಸೂಚನೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಮಾಸ್ಕ್ಗಳನ್ನ ನೀಡಲಾಗುತ್ತದೆ. ಆನ್ಲೈನ್ನಲ್ಲಿಯೇ ದಾಖಲೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ಒದಗಿಸಲಾಗಿದೆ. ಪರಿಶೀಲನೆ ಕೂಡ ಆನ್ಲೈನ್ ಮೂಲಕವೇ ನಡೆಯಲಿದೆ. ಬೆಂಗಳೂರು 10, ಶಿವಮೊಗ್ಗ 1, ಕೋಲಾರ 1 ಸೇರಿದಂತೆ ಒಟ್ಟು 12 ಸೋಂಕಿತ ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಎಲ್ಲ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು. ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಸವಾಲಿನ ನಡುವೆಯೇ ಸಿಇಟಿ ನಡೆಯುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆಗಳನ್ನು ಸಚಿವರು ಪರಿಶೀಲನೆ ಮಾಡಿದರು. ಬಳಿಕ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಡಾ.ಅಶ್ವತ್ಥನಾರಾಯಣ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ನಡೆಯುತ್ತಿದ್ದು, ಕೋವಿಡ್ ಒತ್ತಡವನ್ನು ಮನಸ್ಸಿನಿಂದ ತೆಗೆದು ಹಾಕಿ ವಿದ್ಯಾರ್ಥಿಗಳು ಧೈರ್ಯ, ಸಂತೋಷದಿಂದ ಬರೆಯಬೇಕು. ಇದನ್ನು ನಾನು ‘ಸಿಇಟಿ ಪರೀಕ್ಷೋತ್ಸವʼ ಎಂದು ಕರೆಯಲು ಬಯಸುತ್ತೇನೆ ಎಂದರು. ಈ ವರ್ಷ ಎಲ್ಲರೂ ಪಿಯುಸಿ ಪಾಸ್ ಆಗಿರುವುದರಿಂದ ಪಿಯು ಅಂಕ ಪರಿಗಣಿಸದೇ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್ಯಾಂಕ್ ನೀಡುತ್ತೇವೆ ಎಂದು ಸಹ ಅವರು ಮಾಹಿತಿ ನೀಡಿದರು.
ಕೊವಿಡ್ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದ್ದು. ಸಿಇಟಿ ಅಂಕದ ಆಧಾರದ ಮೇಲೆಯೇ Rank ನಿರ್ಧಾರ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು.
ರಾಜ್ಯದಲ್ಲಿ ಒಟ್ಟು 2,01,816 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 12 ಸೋಂಕಿತ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಹಾಗೂ ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಸಿಇಟಿ ಬರೆಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲೇ ಇವೆ. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಿವೆ. ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಅಗಸ್ಟ್ 30ರಂದು ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು. ಈ ಕೇಂದ್ರಗಳಲ್ಲಿ 1682 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ಹಾಗೂ ಪ್ರತಿ ಒಂದು ಬೆಂಚಿನಲ್ಲಿ ಇಬ್ಬರು ಅಭ್ಯರ್ಥಿಗಳು ಕುಳಿತುಕೊಳ್ಳುವಂತೆ ಹಾಗೂ ಎರಡು ಬೆಂಚ್ ನಡುವೆ ಮೂರು ಅಡಿ ಅಂತರ ಕಾಪಾಡಿಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕ್ರಮ ವಹಿಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಹ್ಯಾಂಡ್ ಸ್ಯಾನಿಟೈಸರ್ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿರುವ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಬಿಬಿಎಂಪಿ ವತಿಯಿಂದ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ 100 ಮಾಸ್ಕ್ಗಳನ್ನು ಸ್ವಯಂ ಸೇವಾ ಸಂಸ್ಥೆಯಿಂದ ಪರೀಕ್ಷೆ ನಡೆಯುವ ಎರಡು ದಿನಗಳಂದು ಪರೀಕ್ಷಾ ಕೇಂದ್ರಕ್ಕೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ವಾರಾಂತ್ಯದ ಕರ್ಫ್ಯೂ ಇರುವ ಗಡಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಮತ್ತು ಪೋಷಕರು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅನುಕೂಲವಾಗಲು ಸಿಇಟಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಗಣಿಸಿ ಅವಕಾಶ ನೀಡಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಕೇರಳ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಲಾಗಿದೆ. ಉಳಿದಂತೆ ಪರೀಕ್ಷೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಸಮರ್ಪಕವಾಗಿಮಾಡಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಮಾಡಿದೆ.
ಇದನ್ನೂ ಓದಿ:
ಹಸಿವಿನಿಂದ ತತ್ತರಿಸುತ್ತಿದೆ ಅಫ್ಘಾನಿಸ್ತಾನ; ಎಲ್ಲ 34 ಪ್ರಾಂತ್ಯಗಳಲ್ಲಿ ಭೀಕರ ಬರ
ಪದವಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿ: ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾರಂಭ
(Karnataka CET 2021 Higher Education Minister Dr Ashwath Narayan says masks will be Distributed in Exam centres0
Published On - 5:10 pm, Fri, 27 August 21