ಬಾಬಾಬುಡನ್ಗಿರಿ ಹೆಸರಿಗೆ ಪ್ರಾಣೇಶ್ ಆಕ್ಷೇಪ
ಕರ್ನಾಟಕದ 4, 6 ಮತ್ತು 9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇರುವ ಸ್ಥಳವನ್ನು ಬಾಬಾಬುಡನ್ಗಿರಿ ಎಂದು ಕರೆದಿರುವುದಕ್ಕೆ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಪ್ರಾಣೇಶ್, ‘ಈ ಪ್ರದೇಶವನ್ನು ಸರ್ಕಾರಿ ದಾಖಲೆಗಳ ಪ್ರಕಾರ ನಮೂದಾಗಿರುವಂತೆ ‘ಇನಾಮ್ ದತ್ತಾತ್ರೇಯ ಪೀಠ’ (ದತ್ತಪೀಠ) ಎಂದೇ ಪಠ್ಯಪುಸ್ತಕಗಳಲ್ಲಿಯೂ ನಮೂದಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಚಿಕ್ಕಮಗಳೂರು ಜಿಲ್ಲೆಯ ಇನಾಮ್ ದತ್ತಾತ್ರೇಯ ಪೀಠವನ್ನು ಚಂದ್ರದ್ರೋಣ ಪರ್ವತ ಹಾಗೂ ಬಾಬಾಬುಡನ್ಗಿರಿ ಎಂದು ಕರೆಯುವುದು ವಿಶೇಷವೇ ಸರಿ. ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ದತ್ತಪೀಠವವನ್ನು ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಮತ್ತು ಇತರೆ ಸರ್ಕಾರಿ ದಾಖಲಾತಿಯ ಪ್ರಕಾರ ಸಾವಿರಾರು ವರ್ಷಗಳಿಂದ ಇನಾಮ್ ದತ್ತಾತ್ರೇಯ ಪೀಠ ಎಂದೇ ಕರೆಯಲಾಗುತ್ತದೆ. ಆದರೆ ನಮ್ಮ ಸಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳಲ್ಲಿ ಇನಾಮ್ ದತ್ತಾತ್ರೇಯ ಪೀಠ (ದತ್ತಪೀಠ) ಎಂದು ನಮೂದಿಸದೇ ಬಾಬಾಬುಡನ್ಗಿರಿ ಎಂದು ನಮೂದಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅಪೂರ್ಣ ಮಾಹಿತಿ ನೀಡಿದಂತೆ ಆಗುತ್ತದೆ. ವಿದ್ಯಾರ್ಥಿಗಳು ಹಾಗೂ ಮುಂದಿನ ಪೀಳಿಗೆಯು ಮೂಲ ಹೆಸರನ್ನು ಹೊರತುಪಡಿಸಿ, ಬಾಬಾಬುಡನ್ಗಿರಿ ಎಂದೇ ರೂಢಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದತ್ತಪೀಠ ಎಂಬ ಪವಿತ್ರ ಸ್ಥಳದ ವೈಶಿಷ್ಟ್ಯವನ್ನು ಕಾಪಾಡಿಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್ಗಿರಿ ಹೆಸರಿನ ಜೊತೆಯಲ್ಲಿಯೇಇನಾಮ್ ದತ್ತಾತ್ರೇಯ ಪೀಠ (ದತ್ತಪೀಠ) ಎಂದೂ ನಮೂದಿಸಿ, ಪಠ್ಯಪುಸ್ತಕಗಳಲ್ಲಿ ತಿದ್ದುಪಡಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶಿಸಬೇಕು ಎಂದು ಅವರು ಕೋರಿದ್ದಾರೆ.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಬರೆದಿರುವ ಪತ್ರ
ಹೆಸರಿನ ವಿವಾದ
ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರು. ಆ ಸ್ಥಳವನ್ನು ಇನಾಂ ದತ್ತಾತ್ರೇಯ ಪೀಠ, (ಐಡಿ ಪೀಠ) ಎಂದೂ ಹೆಸರಿಸುತ್ತಾರೆ. ಆದರೆ ಕೆಲವೆಡೆ ‘ಬಾಬಾಬುಡನ್ಗಿರಿ’ ಎಂದೂ ಇನ್ನೂ ಕೆಲವೆಡೆ ದತ್ತಪೀಠ ಎಂದೂ ಕರೆಯುತ್ತಿದ್ದಾರೆ. ಈ ಹೆಸರಿನ ವಿಚಾರ ಸಣ್ಣದಲ್ಲ. ಯಾವ ಹೆಸರಿನಿಂದ ಕರೆಯಬೇಕು ಎಂಬ ಬಗ್ಗೆ ಹಿಂದೂ-ಮುಸ್ಲಿಂ ಧರ್ಮದ ಅನುಯಾಯಿಗಳ ನಡುವೆ ಹಲವು ದಶಕಗಳಿಂದಲೂ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಹಿಂದೂ-ಮುಸ್ಲಿಂ ಭಾವೈಕ್ಯತಾ ಕೇಂದ್ರವಾಗಿರುವ ಈ ಸ್ಥಳದ ಉಮೇದುವಾರಿಕೆ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಲೇ ಇದ್ದಾರೆ. ಸದ್ಯ ಈ ವಿವಾದ ನ್ಯಾಯಾಲಯದಲ್ಲಿದ್ದು ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಮಧ್ಯೆ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಬಾಬಾಬುಡನ್ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್ಕುಮಾರ್
ಇದನ್ನೂ ಓದಿ: ಬಾಬಾಬುಡನ್ಗಿರಿ ದತ್ತಪೀಠಕ್ಕೆ ಅರ್ಚಕರ ನೇಮಕ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ಆದೇಶ