ಬಾಬಾಬುಡನ್ಗಿರಿ ದತ್ತಪೀಠಕ್ಕೆ ಅರ್ಚಕರ ನೇಮಕ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ಆದೇಶ
ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸರ್ಕಾರವು ಮುಂದೆ ಏನು ಮಾಡಬೇಕು ಎಂಬ ಕುರಿತು ಹಾಗೂ ಕ್ರಮಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಂಗಳೂರು: ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತು ಹೈಕೋರ್ಟ್‌ನಿಂದ ತೀರ್ಪು ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಸಿ.ಟಿ.ರವಿ, ವಿಧಾನ ಪರಿಷತ್‌ನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸರ್ಕಾರವು ಮುಂದೆ ಏನು ಮಾಡಬೇಕು ಎಂಬ ಕುರಿತು ಹಾಗೂ ಕ್ರಮಗಳ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮುಜಾವರ್ ನೇಮಕ ರದ್ದುಪಡಿಸಿದ್ದ ಸರ್ಕಾರ ಚಿಕ್ಕಮಗಳೂರು ತಾಲ್ಲೂಕು ಬಾಬಾಬುಡನ್ಗಿರಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದ ಪೂಜೆಗೆ ಹಿಂದಿನ ಸರ್ಕಾರ ನೇಮಿಸಿದ್ದ ಮುಜಾವರ್ಗಳ ನೇಮಕಾತಿ ರದ್ದುಪಡಿಸಿದ್ದ ಹೈಕೋರ್ಟ್ ಪೂಜಾ ವಿಧಾನದ ಬಗ್ಗೆ ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಸೆ.28ರಂದು ಸೂಚಿಸಿತ್ತು.
2018ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿದ್ದ ನೇಮಕಾತಿ ನಿರ್ಧಾರವನ್ನು ರದ್ದುಪಡಿಸಿದ್ದ ಹೈಕೋರ್ಟ್ ಪೂಜಾವಿಧಾನದ ಕುರಿತು ಹೊಸದಾಗಿ ತೀರ್ಮಾನಿಸಲು ಆದೇಶ ನೀಡಿತ್ತು. ಶ್ರೀ ಗುರು ದತ್ತಾತ್ರೇಯ ಸಂವರ್ಧನಾ ಸಮಿತಿ ಈ ಸಂಬಂಧ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿತ್ತು.
ಬಾಬಾಬುಡನ್ಗಿರಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಭಕ್ತರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಈ ಪವಿತ್ರ ಸ್ಥಳದಲ್ಲಿ ಹಿಂದೂಗಳನ್ನೇ ಪೂಜಾರಿಗಳನ್ನಾಗಿ ನೇಮಿಸಬೇಕು ಎಂದು ಬಿಜೆಪಿ ಹಿಂದಿನಿಂದ ಒತ್ತಾಯಿಸುತ್ತಿತ್ತು. ಪೀಠವನ್ನು ಮುಜರಾಯಿ ಇಲಾಖೆಯೇ ನಿರ್ವಹಿಸುತ್ತಿತ್ತು.
2014ರಲ್ಲಿ ಸುಪ್ರೀಂಕೋರ್ಟ್ ಸಹ ಮುಜರಾಯಿ ಆಯುಕ್ತರಿಗೆ ಪೂಜಾರಿ ನೇಮಕದ ಅಧಿಕಾರ ನೀಡಿತ್ತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿದ ನಂತರ ಈ ವಿಚಾರ ನಿರ್ಧರಿಸುವುದಾಗಿ ತಿಳಿಸಿತ್ತು. ಆದರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರವು ಪೂಜಾರಿಗಳ ನೇಮಕಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬಿಜೆಪಿ ಆರೋಪಿಸಿತ್ತು.
(Karnataka Government Constitutes Cabinet Sub Committee to Examine possibilities of High Court Judgement on Dattapeeta shrine)
ಇದನ್ನೂ ಓದಿ: ಬಾಬಾಬುಡನ್ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್ಕುಮಾರ್
ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ
Published On - 7:29 pm, Tue, 5 October 21