School Days : ಬಹಳಾ ಒಳ್ಳೇವ್ ನಮ್ ಆ ಸ್ಕೂಲ್​ಗಳು!

| Updated By: ಶ್ರೀದೇವಿ ಕಳಸದ

Updated on: Apr 27, 2022 | 12:06 PM

Children : ಈಗಿನಂತೆ ಯಾವ ಮನೆಗಳಲ್ಲೂ ದ್ವಿಚಕ್ರ ವಾಹನಗಳಾಗಲಿ, ಸೈಕಲ್ಲಾಗಲೀ ಆಗ ಇರುತ್ತಿರಲಿಲ್ಲ. ಸೈಕಲ್ಲೇ 'ಲಕ್ಷುರಿ' ಯಾಗಿದ್ದ ಕಾಲ ಅದು. ಜನಜೀವನ ಸರಳವಾಗಿ, ಸಹಜವಾಗಿ ಇತ್ತು. ಮಕ್ಕಳನ್ನು ಶಾಲೆಗೆ ಕಳಿಸುವ ಇಂದಿನ ಯಾವ ಧಾವಂತದ ಕುರುಹೂ ಆಗ ಇರುತ್ತಿರಲಿಲ್ಲ.

School Days : ಬಹಳಾ ಒಳ್ಳೇವ್ ನಮ್ ಆ ಸ್ಕೂಲ್​ಗಳು!
ಸೌಜನ್ಯ : ಅಂತರ್ಜಾಲ
Follow us on

Schood Days : ಎಪ್ಪತ್ತರ ದಶಕದ ಶಾಲೆಗಳು ಓದು- ವಿದ್ಯೆಯ ಜೊತೆಗೆ ಬದುಕಿನ ಸೂಕ್ಷ್ಮಗಳನ್ನು ಮಕ್ಕಳ ಅರಿವಿಲ್ಲದೇ ಪರಿಚಯಿಸುತ್ತಾ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದವು. ನಾಲ್ಕು ದಶಕಗಳ ನಂತರ ಇಂದಿನ ಶಾಲೆಗಳು ಅತ್ತ ಓದೂ ಸರಿಯಾಗಿ ಇಲ್ಲದ, ಇತ್ತ ಬದುಕಿನ ಸೂಕ್ಷ್ಮಗಳನ್ನು ಕಲಿಸಿದ ಗೊಂದಲಗಳ ಗೂಡಾಗುತ್ತಿವೆಯೇ ಎಂಬ ಆತಂಕ ಕಾಡುತ್ತಿದೆ. ಸದ್ಯದ ಶೈಕ್ಷಣಿಕ ವಾತಾವರಣದಲ್ಲಿ ಈ ಮಾತು ಅತಿರೇಕ ಅನ್ನಿಸಲಾರದು. 70ರ ದಶಕದಲ್ಲಿ ಸರ್ಕಾರಿ ಶಾಲೆಗಳು ಮಾತ್ರ ಇದ್ದವು. ಶಹರಗಳಲ್ಲಿ ಅಲ್ಲೊಂದು ಇಲ್ಲೊಂದು ಖಾಸಗಿ ಶಾಲೆ ಇದ್ದರೂ ಸರ್ಕಾರಿ ಶಾಲೆಗಳದ್ದೇ ಏಕಸ್ವಾಮ್ಯ. ಚಿಕ್ಕಪಟ್ಟಣಗಳು, ತಾಲೂಕುಗಳು, ಹಳ್ಳಿಗಳಲ್ಲಂತೂ ಶಾಲೆಗಳೆಂದರೆ ಸರ್ಕಾರಿ ಶಾಲೆಗಳು ಮಾತ್ರ. ಅಂಥ ಶಾಲೆಯಲ್ಲಿ ಓದಿದ ನನಗೆ ಶಾಲಾ ದಿನಗಳ ಮೆಲುಕು ಬಹಳ ಆಪ್ಯಾಯಮಾನ.
ನೂತನ ದೋಶೆಟ್ಟಿ, ಲೇಖಕಿ

ಅಲ್ಲಿ ನಮಗೆ ವಿದ್ಯಾಭ್ಯಾಸದ ಜೊತೆಗೆ ನೈತಿಕ ಶಿಕ್ಷಣ, ಕಸೂತಿ ಮೊದಲಾದ ಕುಶಲ ಕಲೆ, ಅಡುಗೆ, ಸ್ವಚ್ಛತೆ ಮೊದಲಾದ ದಿನನಿತ್ಯದ ಅಗತ್ಯತೆ, ದಿನಪತ್ರಿಕೆಗಳ ಓದು, ಸ್ವತಃ ಬರಹಗಾರರನ್ನು ತಯಾರು ಮಾಡುವ ಶಾಲಾ ಪತ್ರಿಕೆಗಳ. ಆಯಾ ದಿನದ ಸಂಪಾದಕತ್ವ, ಆಟೋಟ, ವ್ಯಾಯಾಮ, ಮಾತು- ಹಾಡು ಮುಂತಾದ ಅನೇಕ ಚಟುವಟಿಕೆಗಳ ಮೂಲಕ ನಮ್ಮ ಮುಂದೆ ತೆರೆದುಕೊಳ್ಳಲು ಸಿದ್ಧವಾಗಿದ್ದ ದೊಡ್ಡ ಬದುಕನ್ನು ಅರಿಯಲು ಆರಂಭಿಕ ಹಂತದ ತರಬೇತಿಯನ್ನು ನೀಡಲಾಗುತ್ತಿತ್ತು. ಇಷ್ಟೇ ಅಲ್ಲದೆ ಶಾಲೆಗೆ ಮಕ್ಕಳ ಮಂತ್ರಿಮಂಡಲವೂ ಇರುತ್ತಿತ್ತು. ಅದರಲ್ಲಿ ಪ್ರಧಾನಿ ಮಂತ್ರಿಯಿಂದ ಬೇರೆ ಬೇರೆ ವಿಭಾಗಗಳು ಮಂತ್ರಿಗಳು ಇರುತ್ತಿದ್ದರು. ಈ ಮಂತ್ರಿಮಂಡಲದ ಚಟುವಟಿಕೆಗಳು ಆಡಳಿತದ ಮೂಲಮಂತ್ರವನ್ನು ನಮಗೆ ಕಲಿಸುತ್ತಿದ್ದವು.

ಬೆಳಗಿನ 8 ಗಂಟೆಗೆ ಆರಂಭವಾಗುತ್ತಿದ್ದ ನಮ್ಮ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲೆಗೆ ನಾವು ನಡೆದೇ ಹೋಗುತ್ತಿದ್ದುದು. ಈಗಿನಂತೆ ಯಾವ ಮನೆಗಳಲ್ಲೂ ದ್ವಿಚಕ್ರ ವಾಹನಗಳಾಗಲಿ, ಸೈಕಲ್ಲಾಗಲೀ ಆಗ ಇರುತ್ತಿರಲಿಲ್ಲ. ಸೈಕಲ್ಲೇ ‘ಲಕ್ಷುರಿ’ ಯಾಗಿದ್ದ ಕಾಲ ಅದು. ಜನಜೀವನ ಸರಳವಾಗಿ , ಸಹಜವಾಗಿ ಇತ್ತು. ಮಕ್ಕಳನ್ನು ಶಾಲೆಗೆ ಕಳಿಸುವ ಇಂದಿನ ಯಾವ ಧಾವಂತದ ಕುರುಹೂ ಆಗ ಇರುತ್ತಿರಲಿಲ್ಲ. ನಾವು ಶಾಲೆಗೆ ಹೋಗುವ ಮೊದಲು ನಮಗೆ ನಿಗದಿಯಾಗಿದ್ದ ಕೆಲವು ಮನೆಗೆಲಸಗಳನ್ನು ಮಾಡಿ ಹೊರಡುತ್ತಿದ್ದೆವು. ಆ ಕೆಲಸಗಳಲ್ಲಿ ಬಾಗಿಲು ಸಾರಿಸಿ ರಂಗೋಲಿ ಹಾಕುವುದು, ಮನೆಯ ಅಂಗಳ, ಒಳಮನೆ ಕಸ ಗುಡಿಸುವುದು, ದೇವರಮನೆಯ ಸ್ವಚ್ಛತೆ, ರಂಗೋಲಿ, ಪೂಜೆಗೆ ಹೂ ಕೊಯ್ಯುವುದು, ಗಂಧ ತೇಯುವುದು, ಪೂಜೆ ಮಾಡುವುದು ಮೊದಲಾದ ಅನೇಕ ಚಿಕ್ಕ ದೊಡ್ಡ ಕೆಲಸಗಳನ್ನು ನಮ್ಮ ವಯಸ್ಸಿಗೆ ಅನುಗುಣವಾಗಿ ನಮಗೆ ಹಂಚಲಾಗುತ್ತಿತ್ತು.

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020;ಓದಿನಂಗಳ‘ದಲ್ಲಿ ಲೇಖಕಿ ನೂತನ ದೋಶೆಟ್ಟಿ

ಮನೆಗೆಲಸದವರು ಆಗ ಇರುತ್ತಿರಲಿಲ್ಲ. ಸ್ಥಿತಿವಂತರ ಮನೆಗಳಲ್ಲಿ ಮಾತ್ರ ಸ್ವಚ್ಛತೆ, ಮೊದಲಾದ ಹೊರ ಕೆಲಸಗಳಿಗೆ ಕೆಲಸದವರು ಬರುತ್ತಿದ್ದರು. ಮನೆಯಲ್ಲಿ ಇಬ್ಬರು ಮಕ್ಕಳಿಂದ 5 ಮಕ್ಕಳವರೆಗೂ ಇರುವುದು ಆಗ ಸಾಮಾನ್ಯ. ಎಲ್ಲರೂ ತಮ್ಮ ತಮ್ಮ ಪಾಲಿನ ಕೆಲಸಗಳನ್ನು ಮಾಡಿ ತಮ್ಮ ವೈಯುಕ್ತಿಕ ಕೆಲಸಗಳಾದ ಸ್ನಾನ, ಶೌಚ, ಸಮವಸ್ತ್ರ ಧರಿಸುವುದು, ತಲೆ ಬಾಚಿಕೊಳ್ಳುವುದು ಮೊದಲಾದವನ್ನು ತಾವೇ ಮಾಡಿಕೊಂಡು ಸರಿಯಾದ ಸಮಯಕ್ಕೆ ಶಾಲೆಗೆ ಹೊರಡುವುದು ನಿತ್ಯದ ವರ್ತಮಾನವಾಗಿತ್ತು. ಸಮೀಪದ ಹಳ್ಳಿಯಿಂದ ಪಟ್ಟಣಕ್ಕೆ ಶಾಲೆಗೆ ಬರುವ ಮಕ್ಕಳು ನಾಲ್ಕಾರು ಕಿ. ಮೀ. ನಡೆದೇ ಬರುತ್ತಿದ್ದರು. ಬರುವ ಮೊದಲು ಮನೆಯ ಆಕಳು- ಎಮ್ಮೆಯ ಹಾಲು ಮಾರಿ, ಮನೆಯಲ್ಲಿ ಬೆಳೆದು ದಂಡೆ ಕಟ್ಟಿದ ವರ್ತನೆಯ ಹೂ ಮಾರಿ, ತಿಂಡಿ ಡಬ್ಬಿ ಕಟ್ಟಿಕೊಂಡು ಶಾಲೆಗೆ ಬರುತ್ತಿದ್ದರು.

ಇಷ್ಟು ಕೆಲಸಗಳು ಅಚ್ಚುಕಟ್ಟಾಗಿ ಪ್ರತಿ ಮನೆಯಲ್ಲಿ ನಡೆಯುತ್ತಿದ್ದುದು ಆ ಮನೆಗಳ ಹಿರಿಯರು ಮಕ್ಕಳಿಗೆ ನೀಡುತ್ತಿದ್ದ ತರಬೇತಿಯಿಂದ. ಹೀಗೆ ಮನೆಯಿಂದ ಮೊದಲ್ಗೊಂಡ ಈ ತರಬೇತಿ ಶಾಲೆಯಲ್ಲಿ ವಿಸ್ತರಿಸುತ್ತಿತ್ತು. ಅಂದು ತರಬೇತಿ ಎಂಬ ಪದದ ಬಳಕೆಯೂ ಇರಲಿಲ್ಲ ಏಕೆಂದರೆ ಆ ಎಲ್ಲ ಕೆಲಸಗಳೂ ಮನೆಯ ಹಿರಿಯರು , ಶಾಲೆಯ ಶಿಕ್ಷಕರು ಮಕ್ಕಳನ್ನು ಒಳಗೊಳಿಸಿಕೊಂಡು ತಾವೂ ಭಾಗಿಯಾಗಿ ತಮ್ಮ ದೇಖರೇಖೆಯಲ್ಲಿ ಮಾಡಿಸುತ್ತಿದ್ದ ಕೆಲಸಗಳು, ನೀಡುತ್ತಿದ್ದ ಜವಾಬ್ದಾರಿಗಳು. ಅವುಗಳನ್ನು ನಾವು ಎಲ್ಲಾ ಮಕ್ಕಳೂ ಯಾವುದೇ ತಕರಾರಿಲ್ಲದೇ ಮಾಡುತ್ತಿದ್ದದ್ದು ನನಗೆ ಚೆನ್ನಾಗಿ ನೆನಪಿದೆ. ಇದು ನನ್ನ ಎಲ್ಲ ಸ್ನೇಹಿತರ, ಬಳಗದವರ ಮನೆಯಲ್ಲೂ ಇದ್ದ ಪರಿಸ್ಥಿತಿ.

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು’