ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು‘

Woman Railway Porter : ಬುರ್ಖಾ ತೊಟ್ಟು ಈ ಕೆಲಸ ಹೇಗೆ ಮಾಡಬಲ್ಲರು? "ಬ್ಯಾಡ ಬುಡಮ್ಮ" ಎಂದರು ಸಹೋದ್ಯೋಗಿಗಳು. ರಿಜ್ವಾನಾಗೆ ಯಾರಿಂದಲೂ ವಿರೋಧ ಎದುರಾಗಲಿಲ್ಲ. ಮೈಸೂರಿನ ಗುಣವೇ ಅಂತಹುದೇನೋ! ಇದು ಕರ್ನಾಟಕದ ಮೊಟ್ಟಮೊದಲ ರೈಲ್ವೇ ಸಹಾಯಕಿಯ ಕಥೆ.

ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು‘
ಡಾ. ಗಿರಿಜಾ ಶಾಸ್ತ್ರಿ ಮತ್ತು ರೈಲ್ವೆ ಪೋರ್ಟರ್ ರಿಜ್ವಾನಾ ಬಾನು
Follow us
ಶ್ರೀದೇವಿ ಕಳಸದ
|

Updated on: Apr 27, 2022 | 9:32 AM

ನಿಮ್ಮ ಟೈಮ್​ಲೈನ್ : “ನಾರೀ ಶಕ್ತಿಯ ಬಗ್ಗೆ ಕೇಳಿದ್ದೆ ಆದರೆ ಈಗ ಅದನ್ನು ಪ್ರತ್ಯಕ್ಷವಾಗಿ ನೋಡುತ್ತಿರುವೆ” ಹೀಗೆ ಹೇಳಿದವರು ದೂರದರ್ಶನದ ಸೋನಿ ವಾಹಿನಿಯಲ್ಲಿ ( ಹಿಂದಿ) ಬರುವ ಇಂಡಿಯನ್ ಐಡಲ್ ಕಾರ್ಯಕ್ರಮದ ನಿರ್ವಾಹಕ ಪ್ರಸಿದ್ಧ ಹಾಡುಗಾರ ಆದಿತ್ಯ ನಾರಾಯಣ್. ಝಗಮಗಿಸುವ ವೈಭವೋಪೇತ ಇಂಡಿಯನ್ ಐಡಲ್ ವೇದಿಕೆಯ ಮೇಲೆ ಮೈಸೂರಿನ ರಿಜ್ವಾನಾ ಬಾನು ನಿಂತಿದ್ದಾರೆ. ಅವರನ್ನು ತೋರಿಸಿ ಆದಿತ್ಯ ನಾರಾಯಣ್ ಹೇಳಿದ ಮಾತಿದು. ಅಷ್ಟೇ ಅಲ್ಲದೇ ತಮ್ಮ‌ಆ ದಿನದ ಸಂಭಾವನೆ ಒಂದೂವರೆ ಲಕ್ಷ ರೂಪಾಯಿಗಳನ್ನೂ ಆ ನಾರೀ ಶಕ್ತಿಗೇ ಸಮರ್ಪಿಸಿದ್ದಾರೆ! ಇಂಡಿಯನ್ ಐಡಲ್ ವೇದಿಕೆ ಹತ್ತಿದ ರಿಜ್ವಾನಾ ಬಾನು ಬೆಳ್ಳಿ ಪರದೆಯ ಮೇಲಿನ ಗಿಲೀಟು ಪ್ರಪಂಚದ ತಾರೆಯಲ್ಲ. ಬದಲಾಗಿ‌ ನಿಜ‌ಜೀವನದ ಹೊಳೆವ ತಾರೆ! ನಲವತ್ತರ ವಯಸ್ಸಿನ ಆಕೆ ಸಾಗಿಬಂದ ದಾರಿ ಒಂದು ರೋಚಕ ಕತೆಯೇ ಆಗಿದೆ. ಸಾಧಾರಣ ಚೂಡಿದಾರದ ಮೇಲೆ ರೈಲ್ವೇ ಸಹಾಯಕರು ತೊಡುವ ಕೆಂಪು ಅಂಗಿಯೊಂದನ್ನು ತೊಟ್ಟುಕೊಂಡು, ರಿಜ್ವಾನಾ ಬಾನು ಮೈಸೂರಿನ ರೈಲ್ವೇ ಪಾರ್ಸಲ್ ಆಫೀಸಿನ ಹೊರ ಆವರಣದಲ್ಲಿ‌ ನನ್ನ ಮುಂದೆ ಕುಳಿತಿದ್ದರು. ಡಾ. ಗಿರಿಜಾ ಶಾಸ್ತ್ರಿ (Dr. Girija Shastri)

ಮಹಿಳೆಯರ ಮೇಲೆ ಪಿತೃಪ್ರಧಾನ ಸಮಾಜ ಹೇರಲಾಗಿರುವ ಎಲ್ಲಾ ರೀತಿಯ‌ ಸಾಮಾಜಿಕ, ಧಾರ್ಮಿಕ ನಿಷೇಧಗಳನ್ನು ಮೀರಿದ ಪ್ರತೀಕವಾಗಿ ಅವರು ನನಗೆ ಕಂಡರು. ಆ ದಿಟ್ಟ ನಿಲುವು ಅವರ ಉಡುಪಿನ ಮೂಲಕ ಎದ್ದು ಕಾಣುತ್ತಿತ್ತು. ಕರ್ನಾಟಕದಲ್ಲಿ ಈಗಷ್ಟೇ ರಣರಂಪಮಾಡಿ ಗುಲ್ಲೆಬ್ಬಿಸಿದ ಹಿಜಾಬ್ ಸುದ್ದಿಯ ಹಿನ್ನೆಲೆಯಲ್ಲಿ ರಿಜ್ವಾನಾ ಅವರ ‘ಮುಚ್ವು‌ಮರೆಯಿಲ್ಲದ’ ಮುಖ ಬಹಳ ಮಹತ್ವದ ಸಂಗತಿಯಾಗಿ ನನಗೆ ಕಂಡಿತು. ಅವರ ಕೆದರಿದ ಕೂದಲು ಅವರ ದುಡಿಮೆಯ ಸ್ವರೂಪವನ್ನು ಸಾರುತ್ತಿತ್ತು. ದುಡಿಮೆಗೆ ಮಾತ್ರ ಇರುವ ತಾಕತ್ತು ಇದು, ಎಲ್ಲಾ ರೀತಿಯ ಬಂಧನಗಳನ್ನೂ ಕಿತ್ತೆಸೆಯುವ ಸಾಮರ್ಥ್ಯ, ಆತ್ಮವಿಶ್ವಾಸ ದುಡಿಮೆಗೆ ಮಾತ್ರ ಇರುವುದು. ರಿಜ್ವಾನಾ ಬಾನು ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಏಕೈಕ ಮಹಿಳಾ ಭಾರಜೀವಿ. (Porter#16). ಜೈಪುರದ ಮಂಜುದೇವಿಯನ್ನು ಭಾರತದ ಮೊಟ್ಟಮೊದಲ ಮಹಿಳಾ ಪೋರ್ಟರ್ ಎಂದು ಗುರುತಿಸಲಾಗುತ್ತದೆ. ಆದರೆ ಕರ್ನಾಟಕದ ಮೊಟ್ಟ ಮೊದಲ ರೈಲ್ವೇ ಸಹಾಯಕಿಯೆಂದರೆ ರಿಜ್ವಾನಾ ಬಾನು ಬಾಡ್ಜ್ ನಂ 16.

ಬಡಕುಟುಂಬದಿಂದ ಬಂದ ನಾಲ್ಕು ಮಕ್ಕಳ ತಾಯಿಯಾದ ರಿಜ್ವಾನಾ ಇಂಡಿಯನ್ ಐಡಲ್ ನಂತಹ ವೈಭವೋಪೇತ ವೇದಿಕೆ ಏರಿದ್ದು ಒಂದು ಪವಾಡವೇ ಸರಿ. ಅದಕ್ಕಿಂತ ದೊಡ್ಡ ಪವಾಡವೆಂದರೆ ಅರವತ್ತು ಮಂದಿ ಪುರುಷ ಭಾರಜೀವಿಗಳ (ಪೋರ್ಟರ್ ) ಮಧ್ಯೆ ರಿಜ್ವಾನಾ ಏಕೈಕ ಮಹಿಳಾ ಭಾರಜೀವಿ ಆಗಿ ಕೆಲಸ ನಿಭಾಯಿಸುತ್ತಿರುವುದು. ಮನೆಮಂದಿಯೆಲ್ಲಾ ಪ್ರಯಾಣ ಹೊರಟಾಗ ಭಾರದ ಸಾಮಾನುಗಳನ್ನು ಹೊರುವುದು ಸಾಮಾನ್ಯವಾಗಿ ಪುರುಷ ಸದಸ್ಯರು. ಆದರೆ ರಿಜ್ವಾನಾಳ ಬದುಕಿನಲ್ಲಿ ಅದಕ್ಕೆ‌ ವ್ಯತಿರಿಕ್ತವಾದ ಸಂದರ್ಭವೊಂದು ಕಾದು ಕುಳಿತಿತ್ತು. ಮೈಸೂರು ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಪೋರ್ಟರ್ #26 ಆಗಿ ಕೆಲಸಮಾಡುತ್ತಿದ್ದ ಗಂಡ ಜಾವೇದ್ ಪಾಶಾ 2010ರಲ್ಲಿ ತೀರಿಕೊಂಡಾಗ, ರಿಜ್ವಾನಾ 12 ರಿಂದ 9 ವರುಷದೊಳಗಿನ ನಾಲ್ಕು ಚಿಕ್ಕಮಕ್ಕಳ ತಾಯಿ, ಮನೆಯೊಳಗೆ ಬುರ್ಖಾದ ಮುಸುಕಿನಲ್ಲಿದ್ದವರು, ಉದರಂಭರಣಕ್ಕಾಗಿ ಮನೆಯ ಹೊರಗೆ ಕಾಲಿಡ ಬೇಕಾಯಿತು. ರೈಲ್ವೇ ನಿಲ್ದಾಣಕ್ಕೆ ಬಂದು ಅಧಿಕಾರಿಗಳ ಮುಂದೆ ಗಂಡನ ಕೆಲಸ ತನಗೆ ಕೊಡಬೇಕೆಂದು ಕೇಳಿಕೊಂಡರು. ದೈಹಿಕ ಬಲವಿಲ್ಲದ ಕಾರಣಕ್ಕಾಗಿಯೇ ‘ಹೆಣ್ಣು ಅಬಲೆ’ ಸಾಮಾನು‌ ಹೊರುವುದು ಬಲವಂತನಾದ ಪುರುಷನ ಕೆಲಸ. ಹೆಂಗಸು ಕೋಮಲೆ ಅವಳು ಸಾಮಾನು ಹೊರುವುದೇ? ವ್ಯವಸ್ಥೆ ‌ಇವಳಿಗೆ ಕೆಲಸ ಕೊಡಲು ಹಿಂದೇಟು ಹಾಕಿತು.

‘‘ರೈಲ್ವೇ ಟೇಸನ್​ಗೆ ಒಬ್ಳೇ ಬಂದಾಗ ಯಾರೂ ಇರ್ನಿಲ್ಲ. ಆಗ ಮೇಸ್ತ್ರಿ ಸಿಕ್ಕಿದ್ರು. ನಿಮ್ಮೋರು… ಇಲ್ಲೇನು ಮಾಡ್ತೀ? ಯಾಕಮ್ಮಾ ಅಂತಾ ಕೇಳಿ ಡಿ. ಆರ್. ಎಮ್ ತಾಕೆ ಕರ್ಕೊಂಡ್ ಓದ್ರು . ನಿಮ್ಮ ಕಾಲಿಗೆ ಬೀಳ್ತೀನಿ ಕೆಲಸ ಕೊಡಿ. ಚಿಕ್ಕ‌ಮಕ್ಳು ಸಾಯಾ ತರೋ ಆಗ್ಬಿಟ್ಟ್ ಐತೆ ಪರಿಸ್ಥಿತಿ. ನಾನು ಈ‌ ಕೆಲ್ಸ ಮಾಡೇ ಮಾಡ್ತೀನಿ” ಎಂದು ಬೇಡಿಕೊಂಡರು. ನಾಲ್ಕು ಮಕ್ಕಳು ಮತ್ತು ತಾಯಿತಂದೆಯರ ಬದುಕು ಇವರನ್ನೇ ಅವಲಂಬಿಸಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಮೇಸ್ತ್ರಿ ಜಾಲೇಂದ್ರ ಇವರ ಸಹಾಯಕ್ಕೆ ಬಂದರು. ಅಧಿಕಾರಿಗಳ ಮನವೊಲಿಸಿ ಕೆಲಸ ಕೊಡಿಸಿದರು. ಗಂಡನ ಬ್ಯಾಡ್ಜ್ ನಂಬರ್ 16ನ್ನೇ ಇವರಿಗೆ ಕೊಡಲಾಯಿತು. ಇವರ ಮೇಲೆ ಪುರುಷರ ಕೆಟ್ಟ ಕಣ್ಣು ಬೀಳದಂತೆ ರಕ್ಷಣೆ ಕೊಟ್ಟರು ಮೇಸ್ತ್ರಿ. ಎಲ್ಲಾರನ್ನು ಗುಂಪುಗೂಡಿಸಿ ‘ಇವ್ಳು ನಿಮ್ಮ ತಂಗೀತರ ಎಲ್ಲಾರೂ ಚೆನ್ನಾಗಿ ನೋಡ್ಕೋಬೇಕು ಎಂದು ಹೇಳಿದರು’ ಆ‌ ಮೇಸ್ತ್ರಿಯನ್ನು ಮಾತು ಮಾತಿಗೆ ‘ನಿಮ್ಮೋರು ನಿಮ್ಮೋರು’ ಎಂದು ರಿಜ್ವಾನಾ ಹೇಳುತ್ತಿದ್ದರೂ ಆಪತ್ತಿಗೆ ಆದ ಆ ನೆಂಟನ ಉಪಕಾರಸ್ಮರಣೆ ಮಾಡುವುದರ ಮೂಲಕ ಅವರು ‘ನಮ್ಮೋರು ನಮ್ಮೋರು’ ಎಂದೇ ಹೇಳಿದಂತಿತ್ತು. “ಧೈರ್ಯ ಮಾತ್ರಾ ಕಳ್ಕೋಬಾರದು. ಬದ್ಕಕ್ಕೇ ಆಗಲ್ಲ” ಎನ್ನುವ ರಿಜ್ವಾನಾಗೆ ಇಂದಿಗೂ ಧೈರ್ಯ ನೀಡುತ್ತಿರುವವರು ಹಿಂದೂ ಮೇಸ್ತ್ರಿಯೇ ಆಗಿದ್ದಾರೆ! ಅವರು ಇಂದಿಗೂ ಅವರಿಗೆ ಬೆಂಗಾವಲಾಗಿ ಇದ್ದಾರೆ.

ಇದನ್ನೂ ಓದಿ : Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ತಮ್ಮ ಪುರುಷ ಸಹೋದ್ಯೋಗಿಗಳ ಬಗ್ಗೆ ರಿಜ್ವಾನಾ ಅವರಿಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ಹಾಗೆ ಯಾರ ಬಗ್ಗೆಯೂ ಆಕೆಗೆ ಆಕ್ಷೇಪವಿಲ್ಲ. “ಕುಡದ್ರೂ ಇರೋಗಂಟ ಚೆನ್ನಾಗ್ ನೋಡ್ತಿದ್ರು ” ಎಂದು ಹೇಳುವ ರಿಜ್ವಾನಾಗೆ ಕುಡಿದು ಸತ್ತ ಗಂಡನ ಮೇಲೂ ಮುನಿಸಿಲ್ಲ… ಬಂಧುಗಳ ಬಗ್ಗೆಯೂ ಕಹಿಯಿಲ್ಲ “ಈಗ ಯಾರು ನೋಡ್ತಾರೆ?ಅವರವರ ಫ್ಯಾಮಿಲಿಗೇ ನೋಡದ್ರೆ ಸಾಕಾಗೈತೆ” ಎಂದಷ್ಟೇ ಹೇಳುತ್ತಾರೆ.

ಭಾರಜೀವಿಯಾಗಿ ಆಗಿ ಇವರ ಸಾಮರ್ಥ್ಯವೆಂದರೆ ಎರಡೂ ಹೆಗಲಿಗೆ ಬ್ಯಾಗುಗಳು‌ ಮತ್ತು ತಲೆಯ ಮೇಲೆ ಎರಡು ಸೂಟ್ಕೇಸ್​ಗಳು! ಅದೂ ಲಿಫ್ಟ್ ಮತ್ತು ಎಸ್ಕಲೇಟರ್​ಗಳು ಇಲ್ಲದ ಸಮಯದಲ್ಲಿ. ಸಾಮಾನುಗಳನ್ನು ಹೊತ್ತು ಮೆಟ್ಟಿಲುಗಳನ್ನು ಏರಿ ಇಳಿದರು! ಹೆಚ್ಚು ಸಾಮಾನುಗಳಿದ್ದರೆ ಸಹ ಹೊರೆಯಾಳುಗಳ ಜೊತೆಗೆ (ಪೋರ್ಟರ್ ) ತಮ್ಮ ಭಾರ ಹಂಚಿಕೊಳುತ್ತಾರೆ. ದೊಡ್ಡ ದೊಡ್ಡ ಟ್ರ್ಯಾಲಿಗಳನ್ನೂ‌ ಎಳೆದಿದ್ದಾರೆ. ಇನ್ನು‌ ಬುರ್ಖಾ ತೊಟ್ಟು ಈ ಕೆಲಸಗಳನ್ನು ಹೇಗೆ ಮಾಡಬಲ್ಲರು? “ಬ್ಯಾಡ ಬುಡಮ್ಮ” ಎಂದರು ಸರಳವಾಗಿ ಸಹೋದ್ಯೋಗಿಗಳು. ಹಾಗೆ ಬುರ್ಖಾ ಇಲ್ಲದೆ ಹೊರ ಬಂದ ರಿಜ್ವಾನಾಗೆ ಯಾರಿಂದಲೂ ಅಂತಹ ವಿರೋಧವೇನೂ ಎದುರಾಗಲಿಲ್ಲ. ಮೈಸೂರಿನ ಗುಣವೇ ಅಂತಹುದೇನೋ!

ಪೀಚು ಶರೀರದ ರಿಜ್ವಾನ ಭಾರಜೀವಿಯ ತಮ್ಮ ಕೆಲಸವನ್ನು ನಿಭಾಯಿಸುತ್ತಿರುವುದು ದೇಹ ಬಲದಿಂದಲ್ಲ, ಬದಲಾಗಿ ಆತ್ಮಬಲದಿಂದಲೇ. ಆದಿತ್ಯ ನಾರಾಯಣ್ ಗುರುತಿಸಿದ ನಾರೀ ಶಕ್ತಿ‌ ಎಂದರೆ ಇದೇ! ರಿಜ್ವಾನಾಳ ಈ ಕರ್ಮಯೋಗವೆಂದರೆ ಗಂಡಿನ ಮಾಂಸಲ ಬಲದ ಗರ್ವಕ್ಕೆ ಕೊಡುವ ಒಂದು ಗಧಾಘಾತ! ಗಂಡು ಜವಾಬ್ದಾರಿಯಿಂದ ನುಣುಚಿ ಕೊಂಡಾಗಲೆಲ್ಲಾ, ಏನಕೇನ ಪ್ರಕಾರೇಣ ಹೆಣ್ಣು ಅದನ್ನು ಹೊರುತ್ತಾಳೆ. ಹೆಣ್ಣೆಂದರೆ ಹೊರುವ, ಹೆರುವ ಮತ್ತು ಹೋರುವುದರ ಪ್ರತೀಕವೇ. ಇದು ನಮ್ಮ ಸಂಸ್ಕೃತಿಯಲ್ಲಿ ಅಪವ್ಯಾಖ್ಯಾನಕ್ಕೆ ಒಳಗಾದ ಪರಿಯನ್ನು ಹೇಳಿ ಹೇಳೀ ಸಾಕಾಗಿದೆ.

ರಿಜ್ವಾನಾ ಅದರ ಪ್ರತಿರೂಪವಾಗಿ‌ ನನ್ನ ಮುಂದೆ ಕುಳಿತಿದ್ದರು. ತನ್ನ ಕ್ಷಮತೆಗಿಂತ ಹೆಚ್ಚಾದ ಭಾರ ಹೇರಿದರೆ ಎಂತಹ ಸದೃಢ ದೇಹ ಮನಸ್ಸುಗಳೂ ದಣಿಯುತ್ತವೆ. ದೇಹದ ದಣಿವನ್ನು ನಿವಾರಿಸಿಕೊಳ್ಳಲು ದಿನಾ ನೋವಿನ ಗುಳಿಗೆಗಳನ್ನು ನುಂಗುತ್ತಿದ್ದರಂತೆ ರಿಜ್ವಾನಾ. ಆಗ ಅವರಿಗೆ‌ ಸಿಕ್ಕ ವೈದ್ಯೆಯೊಬ್ಬರು ಇದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದರಂತೆ. ಕೆಲವು ಪ್ರಯಾಣಿಕರು ಹೆಚ್ಚಾಗಿಯೇ ಕೂಲಿ ಅಥವಾ ಭಕ್ಷೀಸು ಕೊಡುವುದನ್ನೂ, ಕೆಲವೊಮ್ಮೆ ಭಾರಹೊರಲು ಅವರೇ ಸಹಾಯಕ್ಕೆ ಮುಂದೆಬರುವುದನ್ನೂ ಬಹಳ ನಮ್ರತೆಯಿಂದ ಹೇಳಿಕೊಳ್ಳುತ್ತಾರೆ. ಎಷ್ಟೋ ಜನ ಪ್ರಯಾಣಿಕರು ಈ ದುರ್ಬಲ ದೇಹದ ಮಹಿಳೆ ಸಾಮಾನು ಹೊರಬಹುದೇ ಎಂದು ಅನುಮಾನಪಟ್ಟಿದ್ದೂ ಇದೆ. ಕೆಲವರು ಅನುಕಂಪ ತೋರಿಸಿದ್ದೂ ಇದೆ. ಆದರೆ ಯಾರೂ ಈಕೆಯ ಮೈ ಮುಟ್ಟುವ ಸಾಹಸ ಮಾಡಿಲ್ಲ ಎನ್ನುವುದು ಬಹಳ ಸಮಾಧಾನಕರ ಸಂಗತಿ. ಪ್ರಾರಂಭದ ದಿನಗಳಲ್ಲಿ ಪುರುಷರ ಮಧ್ಯೆ ಏಕೈಕ ಮಹಿಳೆ ಕೆಲಸ ಮಾಡಲು ಶುರುಮಾಡಿದಾಗ ಅನೇಕ ರೀತಿಯ ಮುಜುಗರಗಳನ್ನು ಅನುಭವಿಸಿದ್ದುದೂ ಇದೆ. ಮುಸುಕಿನೊಳಗಿದ್ದ ಮಹಿಳೆ ಇದ್ದಕ್ಕಿದ್ದಂತೆ ಬೀದಿಗೆ ಇಳಿಯಬೇಕಾದಾಗ ಕೆಲವರು ಆಕ್ಷೇಪಿಸಿದ್ದುದೂ ಇದೆ. ‘‘ಗಂಡನ ಮನೆಯವ್ರು ಮೈದುನ ಎಲ್ಲಾ ಅವ್ರೇ ಆದ್ರೆ ಅವರೇನು ನನ್ನ ಮಕ್ಕಳನ್ನು ಸಾಕ್ತಾರಾ… ಯಾರಿಂದಲೂ ನಯಾ ಪೈಸೇ ಸಾಯ ಆಗಲಿಲ್ ಸಾಯಬೇಕು ಎನಿಸುತ್ತಿತ್ತು ಆದರೆ ಮಕ್ಕಳನ್ನು ಏನುಮಾಡೋದು’’ ಎನ್ನುತ್ತಾರೆ ರಿಜ್ವಾನ.

First Railway Porter of Karnataka Rizwana Banu by Girija Shastri

ಕೆಲಸದಲ್ಲಿ ನಿರತ ರಿಜ್ವಾನಾ

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ

ರೈಲ್ವೇ ಪ್ಲಾಟ್​ಫಾರಮ್ಮುಗಳ ಮೇಲೆ ಹೀಗೇ ಮೈಕೈ ತುಂಬಾ ಸಾಮಾನುಗಳನ್ನು ಹೊತ್ತುಕೊಂಡು ಪುರುಷ ಸಹಾಯಕರ ಮಧ್ಯೆ ನಿರ್ಭಿಡೆಯಿಂದ ಸಾಗುತ್ತಿರುವ ರಿಜ್ವಾನಾ ಮುಂಬಯಿ ರೈಲಿನಿಂದ ಇಳಿದ ಒಬ್ಬ ಮಹಿಳೆಯ ಕಣ್ಣಿಗೆ ಬಿದ್ದರು. ಅವರು ಮೇಸ್ತ್ರಿಗೆ ಫೋನ್ ಮಾಡಿ “ಅವರಿಗೆ ಬೇರೆ ಕೆಲಸ ಇಲ್ಲವಾ? ಯಾಕೆ? ಏನು ಎತ್ತ ವಿಚಾರಿಸಿ ” ಈ ಅಪರೂಪದ ಮಹಿಳೆಯನ್ನು ಮುಂಬಯಿಗೆ ಕರೆಸಿಕೊಂಡು ಇಂಡಿಯನ್ ಐಡಲ್ ವೇದಿಕೆಗೆ ಪರಿಚಯಿಸಿದರು. ಅವರ ಸಂಘರ್ಷದ ಬದುಕಿನ VT ( ವೀಡಿಯೋ ಟೇಪ್) ತಯಾರಿಸಿ ಪರದೆಯ ಮೇಲೆ ಜಗತ್ತಿಗೆ ತೋರಿಸಿದರು‌. ಮೈಸೂರೆಂಬ ಸಣ್ಣ ಶಹರದ ಆಚೆ ನೋಡದ ರಿಜ್ವಾನ ಮುಂಬಯಿಗೆ ಮೊದಲ ಸಲ ಫ್ಲೈಟ್ ಹತ್ತುವಾಗ ಮತ್ತು ಭವ್ಯ ವೇದಿಕೆಯ ಮೇಲೆ‌ನಿಂತಾಗ ಉಂಟಾದ ಭಯ ತಲ್ಲಣಗಳನ್ನು ಆರ್ದ್ರವಾಗಿ ಹಂಚಿಕೊಳ್ಳುವ ರಿಜ್ವಾನ ,

“ಅಲ್ಲಿದ್ದವ್ರೆಲ್ಲಾ ಚೆನ್ನಾಗಿದ್ರು ( well dressed) ನಾನೊಬ್ಬಳೇ ವೀಕಾಗಿದ್ದು… ಭಯ ಅಲ್ವಾ? ಆಗ ನಂಗೆ ಅಳ ಬಂದ್ಬಿಡ್ತು ಆಮೇಲೆ. ನಿಜ ಏಳ್ಕೋಳಾಕೆ ಯಾಕೆ ಎದರ್ಕೋಬೇಕು ಅವರು ಬಂದು‌ ನಮ್ಮ ಮನೇನಲ್ಲಾ ನೋಡ್ಕಂಡು ಓಗೋವ್ರೆ” ಎಂದು ಆ ಕ್ಷಣದಲ್ಲಿ ಧೈರ್ಯವನ್ನು ಒಗ್ಗೂಡಿಸಿಕೊಂಡದ್ದರ ಬಗ್ಗೆ ಹೇಳುತ್ತಾರೆ.

ಆಗ ಸುದ್ದಿಯಾದ ರಿಜ್ವಾನಾರನ್ನು ಕೆಲವು ಸ್ಥಳೀಯ ಪತ್ರಿಕೆಗಳು ಸಂದರ್ಶನ ಮಾಡಿದವು. ಮಹಿಳಾ ಸಂಘದವರು ಕ್ಯಾಮರಾ ಹಿಡಿದುಕೊಂಡು ಬಂದರು. ಸನ್ಮಾನಗಳು ನಡೆದಿವೆ. ಆದರೂ ರಿಜ್ವಾನಾರ ಕೂಲಿಯ ಬದುಕೇನೂ ಬದಲಾಗಿಲ್ಲ. ” ಕಸ ಗುಡಿಸೋ ಖಾಯಂ ನೌಕರಿಯನ್ನಾರ ಕೊಟ್ಟರೆ ” ಎನ್ನುವ ಆಸೆ ಇದೆ ಇವರಿಗೆ. ಇಂಡಿಯನ್ ಐಡಲ್ ಕಣ್ಣಿಗೆ ಬಿದ್ದ ಇವರ ಅನನ್ಯ ಶಕ್ತಿಯನ್ನು ಗುರುತಿಸಿ ಸರಕಾರ ಒಂದು ಖಾಯಂ ಉದ್ಯೋಗವನ್ನು ಈಕೆಗೆ ನೀಡಬಹದು. ಪ್ರಭಾವೀ ವ್ಯಕ್ತಿಗಳು ಏನಾದರೂ ಸಹಾಯ ಮಾಡಬಹುದು. ಆದರೆ “ಬಡವರ ಬಿನ್ನಪವವಿನ್ನಾರು ಆಲಿಪರು?” ರೈಲ್ವೇ ಪ್ಲಾಟ್​ಫಾರಂನ ಮೇಲೆ ಯಥಾಪ್ರಕಾರ ಮೂಟೆಗಳನ್ನು ಹೊತ್ತು ಸಾಗುವ ಕೆಲಸ ಮಾತ್ರ ತಪ್ಪಿಲ್ಲ ರಿಜ್ವಾನಾರಿಗೆ.

ಕಳ್ಳತನ ಮಾಡಿದರೆ ಅವಮಾನ ಪಡಬೇಕು. ಸ್ವಾಲಂಬನೆಯ ಬದುಕಿಗೆ ಯಾವ ಕೆಲಸವಾದರೇನು ಎನ್ನುವ ರಿಜ್ವಾನಾ ದುಡಿಮೆಯ ಹಿರಿಮೆಯನ್ನು ಸಾರುತ್ತಾರೆ. ಅದಕ್ಕೆ ಬೇಕಾದ ಧಾರ್ಷ್ಟ್ಯವನ್ನು ಬೆಳೆಸಿಕೊಂಡಿದ್ದಾರೆ. ವಾರಕ್ಕೆ ಏಳು ದಿವಸಗಳೂ ಕೆಲಸ ಮಾಡುವ ರಿಜ್ವಾನಾಗೆ ಕಾಯಕವೇ ಕೈಲಾಸ! ಬಿಡುವೆಂಬುದೇ ಇಲ್ಲ. “ಮುಟ್ಟಿನ ದಿನಗಳಲ್ಲಿ ಬಾಳ ಕಷ್ಟ ಆಗತೈತೆ ಆದ್ರೆ ಏನ್ ಮಾಡೋದು ?” ಎನ್ನುತ್ತಾರೆ. ದಿನವೊಂದರ ಅತಿ ಹೆಚ್ಚಿನ ಸಂಪಾದನೆಯೆಂದರೆ ರೂ. 400-500. ಅದೇ ಗಂಡಸರು ದಿನವೊಂದಕ್ಕೆ ಸಾವಿರ ರೂಪಾಯಿಗಳನ್ನು ದುಡಿಯುತ್ತಿದ್ದರು. ಕೊರೋನಾದ ಕಾಲದಲ್ಲಿ ಅದಕ್ಕೂ ತತ್ವಾರವಾಗಿದೆ. ಅದೂ ಅಲ್ಲದೇ ಈಗ ಲಿಫ್ಟ್ ಮತ್ತು ಎಸ್ಕಲೇಟರುಗಳು ಬಂದಿರುವುದರಿಂದಲೂ ಅವರ ಗಳಿಕೆ ಕಮ್ಮಿಯಾಗಿದೆ.ಈಗ ಅವರನ್ನು ಪಾರ್ಸೆಲ್ ಆಫೀಸಿಗೆ ಹಾಕಿರುವುದರಿಂದ ಸಂಪಾದನೆಯೂ ಕಡಿಮೆಯಾಗಿದೆ. ರಂಜಾನ್ ಉಪವಾಸದಲ್ಲಿರುವ ರಿಜ್ವಾನ ಹನಿ ನೀರನ್ನೂ ಬಾಯಿಗೆ ಬಿಡುವ ಹಾಗಿಲ್ಲ. ಆದರೂ ಭಾರ ಎಳೆಯುವ ಕೆಲಸವನ್ನಂತೂ ತಪ್ಪಿಸುವುದಿಲ್ಲ. ವಸ್ತುಗಳ ಭಾರ ಹೊರುವಾಗ ಭಾವನೆಗಳ ಭಾರಕ್ಕೆಲ್ಲಿ ಜಾಗ?

ಇದನ್ನೂ ಓದಿ : ನಿಮ್ಮ ಟೈಮ್​ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?

ರಿಜ್ವಾನಾಗೆ ಮದುವೆಯಾದಾಗ ಹದಿನಾರುವರುಷ. ಈಗ ನಲವತ್ತು ವರುಷಕ್ಕೇ ಅವರು ಎರಡು‌ ಮಕ್ಕಳ ಅಜ್ಜಿಯಾಗಿದ್ದಾರೆ. ಚಿಕ್ಕ ವಯಸ್ಸಿಗೇ ಮದುವೆಯೆಂಬ ವ್ಯೂಹಕ್ಕೆ ಸಿಕ್ಕಿ ಪಡಿಪಾಟಲಿಗೆ ಗುರಿಯಾಗುತ್ತಿದ್ದ ಹಿಂದಿನ ಯಾವ ಹೆಣ್ಣುಮಕ್ಕಳ ಸ್ಥಿತಿಗಿಂತಲೂ ಇವರದು ಇಂದು ಬೇರೆಯಾಗಿಲ್ಲ. ಸಾಲಕ್ಕೆ ಹೆದರೋದಿಲ್ಲ ರಿಜ್ವಾನಾ. ಸಾಲಾ ಸೋಲ ಮಾಡಿ ಇಂದು ಮಕ್ಕಳ ಮದುವೆ ಮಾಡಿದ್ದಾರೆ. ದುಡಿದು ತೀರಿಸಬಲ್ಲೆನೆಂಬ ಅದಮ್ಯ ವಿಶ್ವಾಸವಿದೆ.

“ಯಾವ ಕಾರಣಕ್ಕೂ ಭಿಕ್ಷೆ ಬೇಡಿ ಹೊಟ್ಟೆ ಹೊರೆಯಬಾರದು, ಕೂಲಿ ನಾಲಿನಾರೂ ಮಾಡಿ ಬದುಕಬೇಕು” ಎನ್ನುವ ಅದಮ್ಯ ಸ್ವಾಭಿಮಾನ! ಇದೇ ಈಗಿನ ಹುಡುಗಿಯರಿಗೆ ಅವರು ಕೊಡುವ ಸಂದೇಶ. ಇಂದು ಪಟ್ಟ ಭದ್ರ ಹಿತಾಸಕ್ತಿಗಳು ನಮ್ಮ ಕಾಲೇಜು ಹುಡುಗಿಯರ ತಲೆ ತಿಕ್ಕಿ ಅವರನ್ನು ರಾಜಕೀಯದ ದಾಳಗಳನ್ನಾಗಿ ಮಾಡಿಕೊಂಡು ಆಡಿಸುತ್ತಿವೆ. ಅದಕ್ಕೆ ಬಲಿಯಾದ ಅಮಾಯಕ ಹುಡುಗಿಯರು ಶಾಲಾ ಕಾಲೇಜುಗಳ ಹೊರಗೆ ನಿಂತು ಸಾವಿರ ನಖರಾ ಮಾಡುತ್ತಿದ್ದಾರೆ! ಆದರೆ ಹಾಗೆ ನಖರಾ ಮಾಡಲು ಅನ್ ಪಡ್ ರಿಜ್ವಾನಾಗೆ ಪುರುಸೊತ್ತೆಲ್ಲಿದೆ? ನಾಳಿನ ಅನ್ನ ಬೇಯ ಬೇಕಲ್ಲ? ಅನಿವಾರ್ಯವೇ ಅನ್ವೇಷಣೆಗಳ ತಾಯಿ! ಅಂತಹ ಅನಿವಾರ್ಯ ನಮ್ಮ ಬದುಕಿನಲ್ಲಿ ಉದ್ಭವಾಗದಿದ್ದರೆ ನಮ್ಮ ಎಲ್ಲಾ ರೀತಿಯ ಸ್ತ್ರೀಪರ ಹೋರಾಟಗಳೂ ಪೊಳ್ಳಾದವುಗಳೇ ಆಗಿರುತ್ತವೆ. ಕೇವಲ ಕಾಲಹರಣವೇ ಆಗಿರುತ್ತವೆ! ಅವಕ್ಕೆ ನಿಜವಾದ ನಾರೀ ಶಕ್ತಿಯ ಪರಿಚಯವಾಗುವುದೇ ಇಲ್ಲ.

ಮನಸ್ಸು ದಣಿದಾಗ ‘ಆ ದೇವ್ರು ಇದ್ದಾನೆ’ ಎಂದು ರಿಜ್ವಾನಾ ಎರಡೂ ಕೈ ಎತ್ತಿ ಮೇಲೆ ತೋರಿಸುತ್ತಾರೆ. ಬಾಳನ್ನು ಗೆದ್ದ, ಶಾಂತ, ಸಹಜ ಕಾಂತಿ; ಪ್ರಾಮಾಣಿಕತೆ; ಮತ್ತು ನಗೆ ಆ ತರುಣಿಯ ಮುಖದ ಮೇಲೆ ಹೊಡೆದು ಕಾಣುತ್ತದೆ. “ಜೀವನವೇ ಒಂದು ರೈಲು ಪ್ರಯಾಣ, ನಾವೆಲ್ಲ ಮುಸಾಫ಼ಿರ್ ಯಾ ಯಾತ್ರಿಕರು ಮಾತ್ರ” ಎಂಬ ಮಹಾತತ್ತ್ವವನ್ನು ಆಕೆ ಇಷ್ಟು ಬೇಗನೆ ಅರಗಿಸಿಕೊಂಡಿರುವುದನ್ನು, ಮೌನವಾಗಿ ತನಗೇ ಗೊತ್ತಿಲ್ಲದೆ ಅದನ್ನು ಸಾರುತ್ತಿರುವ ರಿಜ್ವಾನ ಒಬ್ಬ ತತ್ವಪದಕಾರಳ ಹಾಗೆಯೇ ಕಾಣುತ್ತಾರೆ.

ರಿಜ್ವಾನಾ ಎನ್ನುವುದಕ್ಕೆ‌ಅರಬ್ಬಿ ಭಾಷೆಯಲ್ಲಿ ಸ್ವರ್ಗದ ಬಾಗಿಲು ಎಂಬ ಅರ್ಥವಿದೆಯಂತೆ. ಮಹಿಳೆಯರ ಪಾಲಿನ ಸ್ವರ್ಗದ ಬಾಗಿಲನ್ನು ತೆರೆಯಲು ರಿಜ್ವಾನಾ ಅವರ ಕಥೆ ಒಂದು ಮಾದರಿಯಾಗಲಿ, ನಾರೀಶಕ್ತಿ ಜಿಂದಾಬಾದ್!

*

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ