SSLC ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಪರೀಕ್ಷಾ ಶುಲ್ಕ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

2025-26ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ (SSLC Exam) ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣದಲ್ಲಿ www.kseab.karnataka.gov.in ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದ್ರೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ (SSLC Exam Fee) ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದೆ. ಹಾಗಾದ್ರೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರೆ ಎಷ್ಟಾಗಿದೆ ಎನ್ನುವ ವಿವರ ಇಲ್ಲಿದೆ.

SSLC ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಪರೀಕ್ಷಾ ಶುಲ್ಕ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?
Kseab
Edited By:

Updated on: Oct 06, 2025 | 7:40 PM

ಬೆಂಗಳೂರು,(ಅಕ್ಟೋಬರ್ 06): ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ (SSLC Exam Fee) ಹೆಚ್ಚಳ ಮಾಡಿ ರಾಜ್ಯ ಸರ್ಕಾರ (Karnataka Government)  ಶಾಕ್‌ ಕೊಟ್ಟಿದೆ. ಹೌದು.. ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು 5% ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ (Karnataka School Examination and Assessment Board) ಆದೇಶ ಹೊರಡಿಸಿದೆ. ಪ್ರಥಮ ಬಾರಿಗೆ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 676 ರೂ.ನಿಂದ 710 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇ.5 ರಷ್ಟು ಸೇರಿಸಿ ಶುಲ್ಕ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಶುಲ್ಕ ಹೀಗಿದೆ

  • ಪ್ರಥಮ ಬಾರಿ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ – 676 ರೂ. ನಿಂದ 710 ರೂ.ಗೆ ಹೆಚ್ಚಳ.
  • ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236 ರೂ. ನಿಂದ 248 ರೂ.ಗೆ ಹೆಚ್ಚಳ.
  • ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ – 69 ರೂ. ನಿಂದ 72 ರೂ.ಗೆ ಹೆಚ್ಚಳ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿದೆ ವಿವರ

ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ

  • ಒಂದು ವಿಷಯಕ್ಕೆ- 427 ರೂ ನಿಂದ 448 ರೂಗೆ ಹೆಚ್ಚಳ.
  •  ಎರಡು ವಿಷಯಕ್ಕೆ -532 ರೂನಿಂದ 559 ರೂಗೆ ಹೆಚ್ಚಳ.
  •  ಮೂರು ಮತ್ತು ಮೂರಕ್ಕಿಂತ ಜಾಸ್ತಿ ವಿಷಯಗಳು – 716 ರೂ. ನಿಂದ 752 ರೂ.ಗೆ ಹೆಚ್ಚಳ.

ಪೋಷಕರಿಗೆ ಪರೀಕ್ಷಾ ಶುಲ್ಕ ಹೊರೆ

2025-26ನೇ ಸಾಲಿನ SSLC ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ಶೇ.5 ರಷ್ಟು ಶುಲ್ಕ ಹೆಚ್ಚಳ ಮಾಡಿದೆ. ಅಂದರೆ 676 ರೂಪಾಯಿ ಇದ್ದ SSLC ಪರೀಕ್ಷಾ ಶುಲ್ಕವನ್ನು ಇದೀಗ 710 ರೂ.ಗೆ ಹೆಚ್ಚಿಸಿಲಾಗಿದೆ. ಇದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಸಮಾಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ, ಮತ್ತು ಇತರ ಸಂಬಂಧಿತ ಆಡಳಿತಾತ್ಮಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದ್ರೆ, ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಪರೀಕ್ಷಾ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ