SSLC exams: ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಬೇಕಿದ್ದರೆ ಶೇ 35 ಅಂಕ ಗಳಿಸಲೇಬೇಕು

|

Updated on: Feb 21, 2025 | 12:21 PM

ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ 2025ರಲ್ಲಿ ಉತ್ತೀರ್ಣರಾಗಲು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆಯುವುದು ಕಡ್ಡಾಯ. ಕಳೆದ ವರ್ಷದಿಂದ ಭಿನ್ನವಾಗಿ ಈ ವರ್ಷ ಯಾವುದೇ ಗ್ರೇಸ್ ಮಾರ್ಕ್ಸ್ ನೀಡಲಾಗುವುದಿಲ್ಲ. ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

SSLC exams: ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಬೇಕಿದ್ದರೆ ಶೇ 35 ಅಂಕ ಗಳಿಸಲೇಬೇಕು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 21: ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದರೆ ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಕೋವಿಡ್ ಪೂರ್ವದ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಕಳೆದ ವರ್ಷ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಬಡ್ತಿ ಪಡೆಯಲು ಸಹಾಯ ಮಾಡುವುದಕ್ಕಾಗಿ ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 25 ಕ್ಕೆ ಇಳಿಕೆ ಮಾಡಿತ್ತು ಮತ್ತು ಗ್ರೇಸ್ ಮಾರ್ಕ್​​ಗಳನ್ನು ನೀಡಿತ್ತು.

‘‘ವೆಬ್‌ಕಾಸ್ಟಿಂಗ್‌ನಂತಹ ಹೊಸ ಕ್ರಮಗಳನ್ನು ಪರಿಚಯಿಸಿದ್ದರಿಂದ ಕಳೆದ ವರ್ಷ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಪಾಸಿಂಗ್ ಅಂಕವನ್ನು  ಶೇಕಡಾ 25 ಕ್ಕೆ ಇಳಿಕೆ ಮಾಡಬೇಕಾಗಿ ಬಂದಿತ್ತು. ಆ ವ್ಯವಸ್ಥೆ ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ ಮತ್ತು ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ’’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ತಿಳಿಸಿದ್ದಾರೆ.

ಗ್ರೇಸ್ ಮಾರ್ಕ್ ಇಲ್ಲ: ಮಧು ಬಂಗಾರಪ್ಪ

ಈ ವರ್ಷ ಯಾವುದೇ ಗ್ರೇಸ್ ಅಂಕಗಳು ಇರುವುದಿಲ್ಲ ಮತ್ತು ಪಾಸಿಂಗ್ ಅಂಕಗಳನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 21 ರಿಂದ ಪರೀಕ್ಷೆ ಆರಂಭವಾಗಲಿದ್ದು, ಏಪ್ರಿಲ್ 4 ರವರೆಗೆ ನಡೆಯಲಿದೆ. ರಾಜ್ಯಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಬಾಲಕರು ಮತ್ತು 4,34,884 ಬಾಲಕಿಯರು ಸೇರಿದಂತೆ ಒಟ್ಟು 8,96,447 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮಾರ್ಚ್ 1 ರಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ 7,14,862 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 3,35,468 ಹುಡುಗರು, 3,78,389 ಹುಡುಗಿಯರು ಮತ್ತು ಐದು ಟ್ರಾನ್ಸ್​ಜೆಂಡರ್‌ಗಳು ಸೇರಿದ್ದಾರೆ. ರಾಜ್ಯಾದ್ಯಂತ 5,050 ಪಿಯು ಕಾಲೇಜುಗಳಿಂದ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆ ಬರೆಯುವವರ ಸಂಖ್ಯೆ ವಿಜ್ಞಾನ ವಿಭಾಗದಲ್ಲೇ ಹೆಚ್ಚು

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 2,91,959 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ವಾಣಿಜ್ಯ ವಿಭಾಗದಲ್ಲಿ 2,29,308 ಮತ್ತು ಕಲಾ ವಿಭಾಗದಲ್ಲಿ 1,92,595 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಹೆಚ್ಚಳ

‘‘ಹಿಂದಿನ ವರ್ಷಕ್ಕೆ ಹೋಲಿಸಿದರೆ, ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಎರಡಕ್ಕೂ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 15,238 ಮಂದಿ ಹೆಚ್ಚಾಗಿದ್ದರೆ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆಯಲ್ಲಿ 26,479 ಹೆಚ್ಚಳವಾಗಿದೆ’’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪರೀಕ್ಷೆ ಬರೆಯುವ ಎಸ್ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ

ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಕುರಿತು ಮಾತನಾಡಿದ ಸಚಿವರು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿದ್ದು, ದುಷ್ಕೃತ್ಯಗಳನ್ನು ತಡೆಗಟ್ಟಲು ಸಾಕಷ್ಟು ಪೊಲೀಸ್ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ