ಶಾಲೆಗಳಲ್ಲಿ Meditation ಕಲಿಕೆ: ಟೀಕೆಗಳ ನಡುವೆ ಮಕ್ಕಳಿಗೆ ಧ್ಯಾನ ಕಲಿಸಲು ರೆಡಿಯಾಗುತ್ತಿರುವ ಶಿಕ್ಷಣ ಇಲಾಖೆ
ರಾಜ್ಯದಲ್ಲಿ ಶಿಕ್ಷಣ ಇಲಾಖೆ ಜಾರಿಗೆ ಮಾಡಲು ನಿರ್ಧರಿಸುತ್ತಿರುವ ಒಂದೊಂದು ವಿಷಯಗಳು ಕೂಡ ವಿವಾದ ಪಡೆದುಕೊಳ್ಳುತ್ತಿವೆ. ಮಕ್ಕಳಿಗೆ ಧ್ಯಾನ ಕಲಿಕೆಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಶತಾಯ ಗತಾಯ ಮಕ್ಕಳಿಗೆ ಧ್ಯಾನ ಕಲಿಸಲು ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ.
ಬೆಂಗಳೂರು: ಶಿಕ್ಷಣ ಇಲಾಖೆಯು (Karnataka Education Department) ಒಂದಲ್ಲಾ ಒಂದು ರೀತಿಯಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತಿದ್ದು, ಹಿಜಾಬ್ (Hijab), ಭಗವದ್ಗೀತೆ (Bhagavadgita), ನಂತರ ಇದೀಗ ಧ್ಯಾನ (Meditation)ದ ವಿಚಾರವಾಗಿ ವಿವಾದ (Controversy) ಎದ್ದಿದೆ. ವಿರೋಧ ಪಕ್ಷಗಳು ಹಾಗೂ ಕೆಲವೊಂದು ಮುಸ್ಲಿಂ ಮುಖಂಡರ ಟೀಕೆಗಳ ನಡುವೆಯೂ ಶಿಕ್ಷಣ ಇಲಾಖೆ ತಾನು ಜಾರಿಗೊಳಿಸಲು ಯೋಚಿಸುತ್ತಿರುವ ಧ್ಯಾನ ಪಾಠಕ್ಕೆ ಶತಾಯ ಗತಾಯ ಸಜ್ಜಾಗುತ್ತಿದೆ. ಯಾವುದೇ ಟೀಕೆಗಳಿಗೂ ಜಗ್ಗದೆ ಶಾಲಾ ಮಕ್ಕಳಿಗೆ ಧ್ಯಾನ ಕಲಿಸಿಕೊಡಲು ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದು, ಮುಂದಿನ ತಿಂಗಳಿನಿಂದಲೇ ಧ್ಯಾನ ಪಾಠ ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ತಾನು ಚಿಂತನೆ ನಡೆಸಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಕಲಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಪತಂಜಲಿ ಮತ್ತು ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗೂರೂಜಿ ಮೊರೆ ಹೋಗಲು ಯೋಜಿಸಿದೆ. ರವಿಶಂಕರ್ ಗೂರೂಜಿ ಸೇರಿದಂತೆ ಪತಂಜಲಿ ಯೋಗ ಪರಿಣತರ ಸಲಹೆ ಪಡೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಮಕ್ಕಳಿಗೆ ಯಾವ ರೀತಿಯ ಧ್ಯಾನ ಹೇಳಿಕೊಡಬೇಕು? ಎಷ್ಟು ಹೊತ್ತು ಧ್ಯಾನ ಮಾಡಿಸಬೇಕು ಎಂಬುದರ ಬಗ್ಗೆ ಸಲಹೆ ಪಡೆಯಲು ನಿರ್ಧಾರ ಮಾಡಿಕೊಂಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳು ಮುಂದಿನ ವಾರದಿಂದ ನಡೆಸಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: ಫೇಲಾದ ಹಳೇ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಸುವರ್ಣವಕಾಶ ನೀಡಿದ ಬೆಂಗಳೂರು ವಿವಿ
ಏನಿದು ಧ್ಯಾನ ವಿವಾದ?
ಕರ್ನಾಟಕದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಡ್ಡಾಯವಾಗಿ ಧ್ಯಾನದ ಅಭ್ಯಾಸ ಮಾಡಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಸೂಚಿಸಿದ್ದರು. ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ (Meditation) ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ಸಚಿವ ಸುತ್ತೋಲೆಯಲ್ಲಿ ತಿಳಿಸಿದ್ದರು. ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಈಗಾಗಲೇ ಧ್ಯಾನವನ್ನು ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೋರಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 18 November 22