ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ ವಿದ್ಯಾರ್ಥಿಗಳಿಗೆ) (NEET -UG) ಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಣೆ ಮಾಡಿದೆ. ಜುಲೈ 17ರಂದು ಪರೀಕ್ಷೆ ನಡೆಯಲಿದ್ದು, ಪರೀಕ್ಷಾರ್ಥಿಗಳು www.neet.nta.nic.in ವೆಬ್ಸೈಟ್ಗೆ ಹೋಗಿ ನೋಂದಣಿ ಮಾಡಿಕೊಳ್ಳಬಹುದು. ಹಾಗೇ, ಇನ್ನೊಂದು ಮಹತ್ವದ ವಿಷಯವೆಂದರೆ ಜೆಇಇ ಮುಖ್ಯ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಈ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ)ಯ ಎರಡು ಸೆಶನ್ಗಳನ್ನೂ ಎನ್ಟಿಎ ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಸೆಶನ್ನ್ನು ಏಪ್ರಿಲ್ 16ರಿಂದ ಶುರು ಮಾಡಿ, 21ರವರೆಗೆ ಮತ್ತು ಎರಡನೇ ಅವಧಿಯ ಪರೀಕ್ಷೆಯನ್ನು ಮೇ 24ರಿಂದ 29ರವರೆಗೆ ನಡೆಸುವುದು ಎಂದು ನಿರ್ಧರಿತವಾಗಿತ್ತು. ಅದನ್ನೀಗ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಸದ್ಯ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಯಾವುದೇ ತೊಡಕೂ ಇಲ್ಲದಂತಾಗಿದೆ. ಜೆಇಇ ಮುಖ್ಯ ಪರೀಕ್ಷೆ ಮತ್ತು ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುವ ಅವಧಿ ಒಂದೇ ಆಗಿದ್ದ ಹಿನ್ನೆಲೆಯಲ್ಲಿ ಗೊಂದಲಗಳು ಉಂಟಾಗಿ, ಈಗಾಗಲೇ ಒಮ್ಮೆ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಮಂಡಳಿ ಮುಂದೂಡಿದೆ. ಅದೂ ಕೂಡ ಅಂತಿಮವಲ್ಲ ಎಂದೂ ಹೇಳಲಾಗಿತ್ತು. ಆದರೆ ಜೆಇಇ ಪರೀಕ್ಷೆ ಜೂನ್ ತಿಂಗಳಲ್ಲಿ ನಡೆಯಲಿರುವ ಕಾರಣ, ದ್ವಿತೀಯ ಪಿಯು ಪರೀಕ್ಷೆಗೆ ಸಮಸ್ಯೆಯಿಲ್ಲ.
ಅಂದಹಾಗೇ ಎಂಬಿಬಿಎಸ್ ಮತ್ತು ಬಿಡಿಎಸ್ ಸೇರಿ ಎಲ್ಲ ರೀತಿಯ ಪದವಿಪೂರ್ವ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್-ಯುಜಿ ಪರೀಕ್ಷೆಯನ್ನು ದೇಶಾದ್ಯಂತ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗುವವರಿಗೆ ಕನಿಷ್ಠ 17 ವರ್ಷ ವಯಸ್ಸಾಗಿರಬೇಕು (ಅಂದರೆ 2005ರ ಡಿಸೆಂಬರ್ 31ರಂದು ಜನಿಸಿದವರು ಮತ್ತು ಅದಕ್ಕೂ ಪೂರ್ವದಲ್ಲಿ ಜನಿಸಿದವರು) ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಎನ್ಟಿಎ, ಅಭ್ಯರ್ಥಿಗಳ ವಯಸ್ಸಿನ ಗರಿಷ್ಠ ಮಿತಿಯನ್ನು ತಿಳಿಸಿಲ್ಲ. ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಕೊನೇ ದಿನ 2022 ರ ಮೇ 6. ಎನ್ಟಿಎ ವೆಬ್ಸೈಟ್ನಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ಉಲ್ಲೇಖಿಸಲಾಗಿದ್ದು ಅದನ್ನು ತಪ್ಪದೆ ಪಾಲಿಸಬೇಕು.
ದ್ವಿತೀಯ ಪಿಯುಸಿ ಪರೀಕ್ಷೆ ಯಾವಾಗ?
ಜೆಇಇ ಮೇನ್ 2022 ರ ಪರೀಕ್ಷೆ ನಡೆಸಲು ಎನ್ಟಿಎ ಮೊದಲು ನಿಗದಿಪಡಿಸಿದ್ದ ವೇಳಾಪಟ್ಟಿ, ಕರ್ನಾಟಕದಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿ ನೀಡಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಹುತೇಕ ಒಂದೇ ರೀತಿಯಾಗಿತ್ತು. ಅಂದರೆ ಈ ಹಿಂದೆ ಏಪ್ರಿಲ್ 16ರಿಂದ ಮೇ 6ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಹಾಗೇ, ಜೆಇಇ ಮುಖ್ಯ ಪರೀಕ್ಷೆಯ ಮೊದಲ ಸೆಶನ್ ಕೂಡ ಏಪ್ರಿಲ್ 16ರಿಂದ ಪ್ರಾರಂಭವಾಗುವುದಿತ್ತು. ಅದಕ್ಕಾಗಿಯೇ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ವೇಳಾಪಟ್ಟಿಯನ್ನು ಮಾರ್ಚ್ನಲ್ಲಿ ಪರಿಷ್ಕರಿಸಿ, ಏಪ್ರಿಲ್ 22ರಿಂದ ಮೇ 11ರವರೆಗೆ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಮಾಸ್ಕ್ ಧಾರಣೆಯಿಂದ ಹೊಸ ಸಮಸ್ಯೆ ಸೃಷ್ಟಿ; ಮಾಸ್ಕ್ ಧರಿಸಿದವರ ಮುಖದ ತುಂಬಾ ಗುಳ್ಳೆಗಳು
Published On - 11:48 am, Thu, 7 April 22