ಹಿಜಾಬ್ಗಾಗಿ ಪಿಯು ಪ್ರಾಯೋಗಿಕ ಪರೀಕ್ಷೆ ಬಹಿಷ್ಕರಿಸಿದವರಿಗೆ ಆತಂಕ: ಕನಿಷ್ಠ ಅಂಕಗಳಿಕೆ ಕಷ್ಟ
ಪ್ರಾಕ್ಟಿಕಲ್ಸ್ಗೆ ಹಾಜರಾಗದೆ ಕೇವಲ ಥಿಯರಿ ಪರೀಕ್ಷೆ ಮಾತ್ರ ಬರೆದರೆ ಸಿಇಟಿಗೆ ಅರ್ಹತೆ ಪಡೆಯುವಷ್ಟು ಅಂಕ ಗಳಿಸುವುದು ಕಷ್ಟವಾಗುತ್ತದೆ.
ಬೆಂಗಳೂರು: ಹಿಜಾಬ್ (Hijab Row) ಧರಿಸಲು ಅವಕಾಶಬೇಕೆಂದು ಪಿಯುಸಿ ಪ್ರಾಯೋಗಿಕ ಪರೀಕ್ಷೆ (PUC Practicles) ಬಹಿಷ್ಕರಿಸಿದವರಿಗೆ ಆತಂಕ ಆರಂಭವಾಗಿವೆ. ಥಿಯರಿಯಲ್ಲಿ ಕನಿಷ್ಠ ಅಂಕ ಗಳಿಸಲು ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ 35 ಅಂಕ ಬೇಕು. ಒಟ್ಟು 100 ಅಂಕಗಳಲ್ಲಿ 70 ಅಂಕ ಥಿಯರಿಗೆ ಹಾಗೂ 30 ಅಂಕ ಪ್ರಾಕ್ಟಿಕಲ್ಸ್ಗೆ ನಿಗದಿಪಡಿಸಲಾಗಿದೆ. ಕನಿಷ್ಠ 45 ಅಂಕ ಗಳಿಸಿದ್ದರೆ ಮಾತ್ರ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಪ್ರಾಕ್ಟಿಕಲ್ಸ್ಗೆ ಹಾಜರಾಗದೆ ಕೇವಲ ಥಿಯರಿ ಪರೀಕ್ಷೆ ಮಾತ್ರ ಬರೆದರೆ ಇಷ್ಟು ಅಂಕ ಗಳಿಸುವುದು ಕಷ್ಟವಾಗುತ್ತದೆ.
ಕಳೆದ ಮಾರ್ಚ್ 21ರಂದು ಭೌತಶಾಸ್ತ್ರ (ಫಿಸಿಕ್ಸ್), ರಸಾಯನಶಾಸ್ತ್ರ (ಕೆಮಿಸ್ಟ್ರಿ), ಜೀವಶಾಸ್ತ್ರ (ಬಯಾಲಜಿ), ಮನಶಾಸ್ತ್ರ (ಸೈಕಾಲಜಿ), ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪರೀಕ್ಷೆಗಳು ನಡೆದಿದ್ದವು. ಪ್ರಾಯೋಗಿಕ ಪರೀಕ್ಷೆಗಳಿಗೆ ಒಟ್ಟು 6,35,675 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 6,20,846 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರೆ, ಸುಮಾರು 14,833 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷೆ ತಪ್ಪಿಸಿಕೊಂಡವರಿಗೆ ಹಲವು ಸಮಸ್ಯೆ
ಕಾರಣ ಯಾವುದೇ ಇದ್ದರೂ ಪ್ರಾಯೋಗಿಕ ಪರೀಕ್ಷೆಗಳಿಗೆ ಗೈರು ಹಾಜರಾದವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಗೈರಾದವರಿಗೆ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಕೇವಲ ಅಂತಿಮ ಪರೀಕ್ಷೆ ಬರೆಯಲು ಮಾತ್ರ ಅವಕಾಶ ಸಿಗುತ್ತದೆ. ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು 35 ಅಂಕ ಹಾಗೂ ಸಿಇಟಿ ಪರೀಕ್ಷೆ ಬರೆಯಲು 70 ಅಂಕಕ್ಕೆ ಕನಿಷ್ಠ 45 ಅಂಕ ಪಡೆದಿರಲೇಬೇಕು.
ಹಿಜಾಬ್ ಧರಿಸಲು ಅವಕಾಶ ಬೇಕು ಎಂದು ಆಗ್ರಹಿಸಿ ಪ್ರಾಕ್ಟಿಕ್ಸ್ಗೆ ಗೈರಾದವರು ಅಂತಿಮ ಪರೀಕ್ಷೆಯಿಂದಲೂ ದೂರ ಉಳಿಯಲಿದ್ದಾರಾ ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಆದರೆ ಕೆಲ ವಿದ್ಯಾರ್ಥಿಗಳಾದರೂ ಪರಿಸ್ಥಿತಿ ಅರ್ಥ ಮಾಡಿಕೊಂಡು, ಭವಿಷ್ಯವೇ ಮುಖ್ಯ ಎಂದು ಭಾವಿಸಿ ಪರೀಕ್ಷೆಗೆ ಹಾಜರಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ನೋ ಎಂಟ್ರಿ; ಶಿಕ್ಷಣ ಸಚಿವ ಬಿಸಿ ನಾಗೇಶ್
ಇದನ್ನೂ ಓದಿ: ಹಿಜಾಬ್ಗಾಗಿ ವರ್ಷದ ಶಿಕ್ಷಣವನ್ನೆ ಬಲಿಕೊಟ್ಟ ಮುಸ್ಕಾನ್; ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಬಳಿಕ ಕಾಲೇಜಿನತ್ತ ಮುಖವೇ ಹಾಕಿಲ್ಲ
Published On - 8:44 am, Fri, 8 April 22