NLSIU: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಯಾವ ಯಾವ ಕೋರ್ಸ್​ಗಳಿವೆ, ಪ್ರವೇಶ ಹೇಗೆ, ಶುಲ್ಕ ಎಷ್ಟು?

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಪ್ರಮುಖ ಪದವಿಪೂರ್ವ ಕೋರ್ಸ್, BALL.B (Hons), ಜೊತೆಗೆ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ, LL.M, PhD ಮತ್ತು ಆನ್‌ಲೈನ್ ಮತ್ತು ಹೈಬ್ರಿಡ್ ಆಯ್ಕೆಯನ್ನು ಒಳಗೊಂಡಿದೆ. NLSIU ಪ್ರವೇಶದ ಅರ್ಹತೆ ಮತ್ತು ಅಭ್ಯರ್ಥಿಯ CLAT ಪರೀಕ್ಷೆಯ ಸ್ಕೋರ್ ಅನ್ನು ಆಧರಿಸಿದೆ.

NLSIU: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಯಾವ ಯಾವ ಕೋರ್ಸ್​ಗಳಿವೆ, ಪ್ರವೇಶ ಹೇಗೆ, ಶುಲ್ಕ ಎಷ್ಟು?
NLSIU BANGALORE
Follow us
Vinay Bhat
|

Updated on:Apr 30, 2024 | 5:50 PM

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲೇ ಸಾಕಷ್ಟು ಕಾನೂನು ವಿದ್ಯಾಲಯಗಳಿವೆ. ಆದರೆ, ಇವುಗಳಲ್ಲಿ ಕೆಂಗೇರಿ ಜ್ಞಾನಾಭಾರತಿ ಕ್ಯಾಂಪಸ್ ಬಳಿ ಇರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ವಿಶೇಷವಾದೂದು. NLSIU 1986 ರಲ್ಲಿ ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯವಾಗಿದೆ. 1988 ರಲ್ಲಿ ಮೊದಲ ಬ್ಯಾಚ್‌ನ ಪ್ರಾರಂಭದೊಂದಿಗೆ ಪದವಿಪೂರ್ವ ಮಟ್ಟದಲ್ಲಿ ಐದು ವರ್ಷಗಳ ಸಮಗ್ರ ಕಾನೂನು ಪದವಿಯನ್ನು ಪರಿಚಯಿಸಿದ ದೇಶದ ಮೊದಲ ಸಂಸ್ಥೆಗಳಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಒಂದು. ಕಳೆದ 36 ವರ್ಷಗಳಿಂದ, ವಿಶ್ವವಿದ್ಯಾನಿಲಯವು ದೇಶದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಪ್ರಮುಖ ಪದವಿಪೂರ್ವ ಕೋರ್ಸ್, BALL.B (Hons), ಜೊತೆಗೆ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ, LL.M, PhD ಮತ್ತು ಆನ್‌ಲೈನ್ ಮತ್ತು ಹೈಬ್ರಿಡ್ ಆಯ್ಕೆಯನ್ನು ಒಳಗೊಂಡಿದೆ. NLSIU ಪ್ರವೇಶದ ಅರ್ಹತೆ ವಿದ್ಯಾರ್ಥಿಯ CLAT ಪರೀಕ್ಷೆಯ ಸ್ಕೋರ್ ಅನ್ನು ಆಧರಿಸಿದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಕೋರ್ಸ್​ಗಳು ಯಾವುವು?

3 ವರ್ಷಗಳ LL.B.

1988 ರಲ್ಲಿ, NLSIU ಭಾರತದ ಮೊದಲ 5-ವರ್ಷದ ಸಮಗ್ರ ಬಿಎ ಎಲ್ಎಲ್​ಬಿ (Hons.) ಕೋರ್ಸ್ ಅನ್ನು ಪ್ರಾರಂಭಿಸಿತು. ಆ ಕಾಲಕ್ಕೆ ಇದು ಮುಖ್ಯವಾದ ಕೋರ್ಸ್ ಆಗಿತ್ತು. ಭಾರತದಲ್ಲಿನ ಕಾನೂನು ಶಿಕ್ಷಣವನ್ನು ಅರ್ಥ ಮಾಡಿಸುವಲ್ಲಿ ಈ ಕೋರ್ಸ್ ಮಹತ್ವದ ಪಾತ್ರವಹಿಸುತ್ತಿದೆ. ಈ ಪ್ರಯೋಗದ ಮೂರು ದಶಕಗಳ ನಂತರ, NLSIU 2022 ರಲ್ಲಿ 3-ವರ್ಷದ LL.B ಕೋರ್ಸ್ ಪ್ರಾರಂಭಿಸಿತು, ಇದು 21 ನೇ ಶತಮಾನದ ಕಾನೂನು ಶಿಕ್ಷಣವನ್ನು ಮರುರೂಪಿಸುತ್ತಿದೆ.

3-ವರ್ಷದ LL.B ಸ್ನಾತಕೋತ್ತರ ವೃತ್ತಿಪರ ಪದವಿಯ ಕೋರ್ಸ್ ಆಗಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ. 45 ಕ್ಕಿಂತ ಅಧಿಕ ಅಂಕ ಪಡೆದ ಮತ್ತು ಎಲ್ಲಾ ವಿಭಾಗಗಳ ಪದವೀಧರರಿಗೆ ಮುಕ್ತವಾಗಿದೆ. ಇದು ಕಾನೂನು ಅಭ್ಯಾಸದ ಪ್ರವೇಶಕ್ಕಾಗಿ ಅರ್ಹತಾ ಪದವಿಯಾಗಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ. NLSIU ನ ಪಠ್ಯಕ್ರಮ ಮತ್ತು ಶಿಕ್ಷಣ ವಿಧಾನಕ್ಕೆ ಅನುಗುಣವಾಗಿ ಕಾನೂನಿನ ಪಾಠವನ್ನು ಕಲಿಸಲಾಗುತ್ತದೆ. ಮುಖ್ಯವಾಗಿ ಈ ಶತಮಾನದ ಸವಾಲುಗಳನ್ನು ಎದುರಿಸುವ ವಕೀಲರನ್ನು ತಯಾರಿಸಲು ಈ ಕೋರ್ಸ್ ಅನ್ನು ಜಾರಿಗೆ ತರಲಾಗಿದೆ.

3-ವರ್ಷದ LL.B ಕೋರ್ಸ್​ಗೆ ಸೇರಲು ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಶೇ. 45 ಕ್ಕಿಂತ ಅಧಿಕ ಅಂಕ ಪಡೆದಿರಬೇಕು. ಈ ಕೋರ್ಸ್​ಗೆ ಪ್ರವೇಶವು ಅಖಿಲ ಭಾರತ ಲಿಖಿತ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆ (NLSAT-LL.B) ಮೂಲಕ ಇರುತ್ತದೆ.

NLSAT-LL.B ಭಾಗ A ಮತ್ತು B ಎಂಬ ಎರಡು ಭಾಗಗಳನ್ನು ಒಳಗೊಂಡಿರುವ ಒಂದು ಪ್ರಶ್ನೆ ಪತ್ರಿಕೆಯನ್ನು ಹೊಂದಿರುತ್ತದೆ. ಎಲ್ಲಾ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ಎರಡೂ ಭಾಗಗಳನ್ನು ಪೂರ್ಣಗೊಳಿಸಬೇಕು. ಪರೀಕ್ಷೆಯು 150 ನಿಮಿಷಗಳವರೆಗೆ ಇರುತ್ತದೆ. ಭಾಗ A ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು ಗರಿಷ್ಠ 75 ಅಂಕಗಳು ಇರತಕ್ಕದ್ದು. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು NLSIU ವೆಬ್​ಸೈಟ್​ನಲ್ಲಿ ಫಾರ್ಮ್ ಇರುತ್ತದೆ. ಶೈಕ್ಷಣಿಕ ವರ್ಷವು ಸಾಮಾನ್ಯವಾಗಿ ಜೂನ್ ಅಥವಾ ಜುಲೈ​ನಲ್ಲಿ ಪ್ರಾರಂಭವಾಗುತ್ತದೆ.

ಪದವಿಯನ್ನು ಪೂರ್ಣಗೊಳಿಸಿದ ದಾಖಲೆಯನ್ನು ಪ್ರತಿವರ್ಷ ಡಿಸೆಂಬರ್​ನಲ್ಲಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಬೇಕಾದ ಅರ್ಜಿ ನಮೂನೆಗಳು ಡಿಸೆಂಬರ್​ನಿಂದ ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ. ಅಂತಿಮ ದಾಖಲಾತಿ ಪಟ್ಟಿಯನ್ನು ಮೇ 2024 ರಲ್ಲಿ ಪ್ರಕಟಿಸಲಾಗುತ್ತದೆ. ದಾಖಲಾತಿಗಳ ಮೂಲ ಪರಿಶೀಲನೆ ಮತ್ತು ಶುಲ್ಕವನ್ನು ಪಾವತಿಸಿದ ನಂತರವೇ ವಿದ್ಯಾರ್ಥಿಯ ಪ್ರವೇಶವು ಅಂತಿಮವಾಗಿರುತ್ತದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಏನು ನಿಯಮ:

2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೂರು ವಾರಗಳ ಹಿಂದೆ (ಏ. 10) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿತ್ತು. ಈ ವರ್ಷ ತೇರ್ಗಡೆಯಾದ ವಿದ್ಯಾರ್ಥಿಗಳು ಮುಂದಿನ ವರ್ಷ (2025) ಆರಂಭವಾಗುವ ತರಗತಿಗೆ ಅರ್ಜಿಸಲ್ಲಿಸಬಹುದು. ಈ ವಿದ್ಯಾರ್ಥಿಗಳು ಶೇ. 45 ಕ್ಕಿಂತ ಅಧಿಕ ಅಂಕವನ್ನು ಪಡೆದಿರಬೇಕು ಎಂಬ ನಿಯಮವಿದೆ. ಜೊತೆಗೆ ಇವರು ಅಖಿಲ ಭಾರತ ಲಿಖಿತ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ (NLSAT-LLB) ತೇರ್ಗಡೆಯಾಗಬೇಕು. ಪರೀಕ್ಷಾ ದಿನಾಂಕವನ್ನು NLSIU ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಡಿಸೆಂಬರ್​ನಿಂದ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಕರ್ನಾಟಕ ವಿದ್ಯಾರ್ಥಿಗಳಿಗೆ ನಿಯಮ:

3-ವರ್ಷದ LLB ಕೋರ್ಸ್​ಗೆ ಸೇರಲು ಕರ್ನಾಟಕ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 10 ವರ್ಷಗಳಿಗಿಂತ ಅಧಿಕ ಸಮಯ ಅಧ್ಯಯನ ಮಾಡಿರಬೇಕು. ಇವರನ್ನು ‘ಕರ್ನಾಟಕ ವಿದ್ಯಾರ್ಥಿಗಳು’ ಎಂದು ಪರಿಗಣಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳು ನೀಡಿದ ಅಧ್ಯಯನ ಪ್ರಮಾಣಪತ್ರಗಳನ್ನು ಮತ್ತು ಪ್ರವೇಶದ ಸಮಯದಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ಕರ್ನಾಟಕದ ವಿದ್ಯಾರ್ಥಿಗಳಿಗೆಂದು ಶೇ. 25 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದೆ.

ಅಂತರಾಷ್ಟ್ರೀಯ ವಿದ್ಯಾರ್ಥಿಗಳು NLSAT – “ಅಂತರಾಷ್ಟ್ರೀಯ ವಿದ್ಯಾರ್ಥಿ” ವರ್ಗದ ಅಡಿಯಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ದಿನಾಂಕವನ್ನು NLSIU ವೆಬ್​ಸೈಟ್​ನಲ್ಲಿ ತಿಳಿಸಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವವರು ಭಾರತದ ಹೊರಗಿನ ಶಾಲೆ/ಕಾಲೇಜು/ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಹತ್ತು ವರ್ಷಗಳ ಶಿಕ್ಷಣವನ್ನು ಪೂರ್ಣಗೊಳಿಸರಬೇಕು.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- 5-ವರ್ಷ ಬಿಎ., ಎಲ್.ಎಲ್.ಬಿ.

ಐದು ವರ್ಷಗಳ ಪದವಿಪೂರ್ವ BA LL.B (Hons.) ಕೋರ್ಸ್ NLSIU ನ ಪ್ರಮುಖ ಪದವಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಕಾನೂನು-ಅಲ್ಲದ ವಿಷಯಗಳ ಕುರಿತು ತರಬೇತಿ ನೀಡಲಾತ್ತದೆ. ಬಿಎ, ಎಲ್‌ಎಲ್‌ಬಿಗೆ ಪ್ರವೇಶ ಎನ್‌ಎಲ್‌ಯುಗಳ ಒಕ್ಕೂಟದಿಂದ ನಿರ್ವಹಿಸಲ್ಪಡುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಮೂಲಕ ಮೌಲ್ಯಮಾಪನ ಮಾಡಲಾದ ಅರ್ಹತೆಯ ಆಧಾರದ ಮೇಲೆ ಇರುತ್ತದೆ. ಇದಕ್ಕೆ ಸೇರಲು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ ನಲವತ್ತೈದು ಶೇಕಡಾ (45%) ಅಂಕಗಳನ್ನು ಹೊಂದಿರಬೇಕು. ತರಗತಿಗಳು ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 1 ರಂದು ಪ್ರಾರಂಭವಾಗುತ್ತವೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಸಾರ್ವಜನಿಕ ನೀತಿಯ ಸ್ನಾತಕೋತ್ತರ

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ನೀತಿಯ ಸ್ನಾತಕೋತ್ತರ (Master’s Programme in Public Policy) ಕೋರ್ಸ್ ಇದೆ. ನೀತಿ, ಸಾಮಾಜಿಕ ವಿಜ್ಞಾನಗಳು ಮತ್ತು ಕಾನೂನಿನ ನಡುವಿನ ಇಂಟರ್ಫೇಸ್ ಅನ್ನು ಕೇಂದ್ರೀಕರಿಸುವ ಎರಡು ವರ್ಷಗಳ ಕೋರ್ಸ್ ಇದಾಗಿದೆ. 2014 ರಲ್ಲಿ ಪ್ರಾರಂಭವಾದ ಈ ಕೋರ್ಸ್ ಸಾಮಾಜಿಕ ಸಮಸ್ಯೆಗಳಿಗೆ ಸಾರ್ವಜನಿಕ ನೀತಿಗಳನ್ನು ರಚಿಸುವುದು, ನೀತಿಗಳನ್ನು ಭಾಷಾಂತರಿಸಲು ಮತ್ತು ಮೌಲ್ಯಮಾಪನ ಮಾಡುವ ಕುರಿತು ಸಮಗ್ರ ತರಬೇತಿಯನ್ನು ನೀಡಲಾಗುತ್ತದೆ.

ಇದಕ್ಕೆ ಸೇರಲು ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಿದ್ಯಾರ್ಥಿಯು ಶೇ. 45 ಕ್ಕಿಂತ ಅಧಿಕ ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಈ ವರ್ಷ MPPಗೆ ಸೇರಲು ಗರಿಷ್ಠ 120 ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಇದಕ್ಕೆ ಪ್ರವೇಶವು ಅಖಿಲ ಭಾರತ ಲಿಖಿತ ಪ್ರವೇಶ ಪರೀಕ್ಷೆ, NLSAT-MPP ಮೂಲಕ ಇರುತ್ತದೆ.

ಪ್ರವೇಶ ಬಯಸುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆಗೆ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗಬೇಕು. ಪರೀಕ್ಷೆಯ ವೇಳಾಪಟ್ಟಿಯನ್ನು NLSIU ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ.  NLSAT-MPP ಎ ಮತ್ತು ಬಿ ಎಂಬ ಎರಡು ಭಾಗಗಳನ್ನು ಒಳಗೊಂಡಿರುವ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಎಲ್ಲಾ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ಎರಡೂ ಭಾಗಗಳನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಗರಿಷ್ಠ 75 ಅಂಕಗಳು ಇರತಕ್ಕದ್ದು. ಪರೀಕ್ಷೆಯು 150 ನಿಮಿಷಗಳವರೆಗೆ ಇರುತ್ತದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಪಿಎಚ್‌ಡಿ

ಪಿಎಚ್‌ಡಿ (ಕಾನೂನು) ಕೋರ್ಸ್​ನಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಬಹುದು. ಅಭ್ಯರ್ಥಿಗಳಿಗೆ NLSIU ನಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಯಲು ಅಥವಾ ಭಾಗವಹಿಸಲು ಮುಕ್ತ ಅವಕಾಶವನ್ನು ಒದಗಿಸಲಾಗಿದೆ.

ಪಿಎಚ್‌ಡಿ ಕೋರ್ಸ್​ಗೆ ಸೇರಲು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಾನೂನಿನಲ್ಲಿ 5-ವರ್ಷ/10-ಸೆಮಿಸ್ಟರ್/15-ತ್ರೈಮಾಸಿಕ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ಹೊಂದಿರುವ ವಿದ್ಯಾರ್ಥಿಗಳು ಕನಿಷ್ಠ ಶೇ. 75 ರಷ್ಟು ಅಂಕಗಳನ್ನು ಪಡೆದಿರಬೇಕು. ಅಥವಾ ಅದರ ಸಮಾನ ಶ್ರೇಣಿಯನ್ನು ಗ್ರೇಡಿಂಗ್ ಸಿಸ್ಟಮ್​ನಲ್ಲಿ ಹೊಂದಿರಬೇಕು.

ಕಾನೂನು ಪದವಿಯಲ್ಲಿ (LL.M.) ಸ್ನಾತಕೋತ್ತರ ಪದವಿಯನ್ನು ಹೊಂದಿರುವ ವಿದ್ಯಾರ್ಥಿಗಳು ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಅಥವಾ ಅದರ ಸಮಾನ ಶ್ರೇಣಿಯನ್ನು ಪಡೆದಿರಬೇಕು. ಬಾಂಬೆ ಇನ್‌ಕಾರ್ಪೊರೇಟೆಡ್ ಲಾ ಸೊಸೈಟಿ ನಡೆಸಿದ ಸಾಲಿಸಿಟರ್‌ಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ (ಎಲ್‌ಎಲ್‌ಬಿ/ಎಲ್‌ಎಲ್‌ಬಿ (ಆನರ್ಸ್)) ಪದವಿಯನ್ನು ಪೂರ್ಣಗೊಳಿಸಿರಬೇಕು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಲಾಸ್ (MBL) ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಕನಿಷ್ಟ CGPA (ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಸರಾಸರಿ) 4.00 ರೊಂದಿಗೆ ಮತ್ತು ನಿಯಮಿತ ಮೋಡ್ ಮೂಲಕ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಈ ಕೋರ್ಸ್​ಗೆ ಪ್ರವೇಶವು ಅಖಿಲ ಭಾರತ ಲಿಖಿತ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆ (NLSAT-PhD) ಮೂಲಕ ಇರುತ್ತದೆ. ವಿದ್ಯಾರ್ಥಿಗಳು ಸುಮಾರು 6-8 ಪುಟಗಳ ಸಂಶೋಧನಾ ಪ್ರಸ್ತಾವನೆಯೊಂದಿಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಅರ್ಜಿ ನಮೂನೆ NLSIU ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ.

ಸಂಶೋಧನಾ ಪ್ರಸ್ತಾವನೆ ಹೇಗಿರಬೇಕು?:

i. ತಾತ್ಕಾಲಿಕ ಶೀರ್ಷಿಕೆ ii. ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ (ಹಿನ್ನೆಲೆ ಮಾಹಿತಿ ಕೂಡ ಬೇಕು) iii. ಸಂಶೋಧನೆಗಾಗಿ ಆಯ್ಕೆ ಮಾಡಿದ ಸಮಸ್ಯೆಗೆ ಸಂಬಂಧಿತ ಸಂಕ್ಷಿಪ್ತ ವಿಮರ್ಶೆ ಮತ್ತು ಪ್ರಸ್ತಾವಿತ ವಿಧಾನ ಸೇರಿದಂತೆ ಸಂಶೋಧನಾ ವಿನ್ಯಾಸದ ಸಂಕ್ಷಿಪ್ತ ರೂಪರೇಖೆ ನೀಡಬೇಕು. ತಾವು ಆಯ್ಕೆ ಮಾಡಿಕೊಂಡ ವಿಷಯದ ಕುರಿತು ಯಾವರೀತಿ ಪ್ರಸ್ತಾವನೆ ಮಾಡುತ್ತಾರೆ ಎಂಬ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಒಟ್ಟು ಶೇ. 50 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಸ್ತಾಪದ ಮೌಲ್ಯಮಾಪನಕ್ಕೆ ಅರ್ಹತೆ ಪಡೆಯುತ್ತಾರೆ ಮತ್ತು ವಿಶ್ವವಿದ್ಯಾಲಯವು ನಿಗದಿ ಪಡಿಸಿದ ದಿನಾಂಕದಂದು ತಜ್ಞರ ಸಮಿತಿಯ ಮುಂದೆ ಹಾಜರಾಗಬೇಕು. ಎನ್‌ಎಲ್‌ಎಸ್‌ಎಟಿ-ಪಿಎಚ್‌ಡಿಯಲ್ಲಿ ಪಡೆದ ಅಂಕಗಳು, ಸಂಶೋಧನಾ ಪ್ರಸ್ತಾವನೆ ಮತ್ತು ಮೌಖಿಕ ಪ್ರಸ್ತುತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಪಿಎಚ್‌ಡಿ (ಇಂಟರ್ ಡಿಸಿಪ್ಲಿನರಿ)

NLSIU ನಲ್ಲಿನ ಇಂಟರ್ ಡಿಸಿಪ್ಲಿನರಿ ಪಿಎಚ್‌ಡಿ ಪ್ರೋಗ್ರಾಂ ಒಂದು ನಿರ್ದಿಷ್ಟ ಸಮಸ್ಯೆಯ ಕುರಿತು ಸಮಗ್ರ ದೃಷ್ಟಿಕೋನ ಮತ್ತು ಪರಿಹಾರವನ್ನು ಕಂಡುಹಿಡಿಯುವ ಸಂಶೋಧನೆಯಾಗಿದೆ. ಇದರಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು ಕೂಡ ಪಾಲ್ಗೊಳ್ಳುತ್ತಾರೆ.

ಪಿಎಚ್‌ಡಿ (ಇಂಟರ್ ಡಿಸಿಪ್ಲಿನರಿ)ಗೆ ಸಮಾಜ ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ಅಥವಾ ಯಾವುದೇ ಇತರ ಕ್ಷೇತ್ರದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ ಕನಿಷ್ಠ ಶೇ. 55 ರಷ್ಟು ಅಥವಾ ಸಮಾನ ಗ್ರೇಡ್ ಹೊಂದಿರಬೇಕು.

ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮತ್ತು ಇನ್‌ಸ್ಟಿಟ್ಯೂಟ್‌ನ (ACS) ಸಹಾಯಕ ಸದಸ್ಯತ್ವವನ್ನು ಪಡೆದು ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಾನೂನಿನಲ್ಲಿ (LL.B.) ಸ್ನಾತಕೋತ್ತರ ಪದವಿ ಪಡೆದಿದ್ದರೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಚಾರ್ಟರ್ಡ್ ಅಕೌಂಟೆಂಟ್‌ಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯತ್ವವನ್ನು ಪಡೆದಿದ್ದರೆ ಅರ್ಜಿ ಕಳುಹಿಸಬಹುದು.

ಇದಕ್ಕೆ ಪ್ರವೇಶವು ಅಖಿಲ ಭಾರತ ಲಿಖಿತ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಕಾನೂನು ಶಾಲೆಯ ಪ್ರವೇಶ ಪರೀಕ್ಷೆ (NLSAT-PhD) ಮೂಲಕ ಇರುತ್ತದೆ. ಅಭ್ಯರ್ಥಿಗಳು ಸುಮಾರು 6-8 ಪುಟಗಳ ಸಂಶೋಧನಾ ಪ್ರಸ್ತಾವನೆಯೊಂದಿಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಅರ್ಜಿ ನಮೂನೆ ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಒಟ್ಟು ಶೇ. 50 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಸ್ತಾಪದ ಮೌಲ್ಯಮಾಪನಕ್ಕೆ ಅರ್ಹತೆ ಪಡೆಯುತ್ತಾರೆ ಮತ್ತು ವಿಶ್ವವಿದ್ಯಾಲಯವು ನಿಗದಿ ಪಡಿಸಿದ ದಿನಾಂಕದಂದು ತಜ್ಞರ ಸಮಿತಿಯ ಮುಂದೆ ಹಾಜರಾಗಬೇಕು. ಎನ್‌ಎಲ್‌ಎಸ್‌ಎಟಿ-ಪಿಎಚ್‌ಡಿಯಲ್ಲಿ ಪಡೆದ ಅಂಕಗಳು, ಸಂಶೋಧನಾ ಪ್ರಸ್ತಾವನೆ ಮತ್ತು ಮೌಖಿಕ ಪ್ರಸ್ತುತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಎಲ್.ಎಲ್.ಎಂ.

NLSIU ಕಾನೂನಿನಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿಯನ್ನು (Master of Laws) ಕೂಡ ನೀಡಲಾಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸುಮಾರು ಮೂರು ತ್ರೈಮಾಸಿಕಗಳನ್ನು ಆಯೋಜಿಸಲಾಗಿದೆ. LLM ಕೋರ್ಸ್​ಗೆ ಪ್ರವೇಶವು NLU ಗಳ ಒಕ್ಕೂಟದಿಂದ ನಿರ್ವಹಿಸಲ್ಪಡುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (CLAT) ಮೂಲಕವಾಗಿದೆ. ಈ ಪದವಿಗೆ ಸೇರಲು ವಿದ್ಯಾರ್ಥಿಯು ಎಲ್‌ಎಲ್‌ಬಿ ಹೊಂದಿರಬೇಕು. ಮತ್ತು ಐವತ್ತು ಶೇಕಡಾ (50%) ಅಂಕ ಕಡ್ಡಾಯವಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಆನ್‌ಲೈನ್ ಮತ್ತು ಹೈಬ್ರಿಡ್ ಕೋರ್ಸ್

NIRF ಕಾನೂನು ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್ ಮತ್ತು ಹೈಬ್ರಿಡ್ ಕೋರ್ಸ್ ಮೂಲಕ ಕಾನೂನು ಕೌಶಲ್ಯಗಳನ್ನು ಹೆಚ್ಚಿಸುವ ಅವಕಾಶ ನೀಡಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವ ವಿದ್ಯಾರ್ಥಿಯು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ. ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಪದವಿಯನ್ನು ಹೊಂದಿರದ ವಿದ್ಯಾರ್ಥಿಗಳು ಯಾವುದೇ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದಿಂದ ಪದವಿ ಪ್ರಮಾಣಪತ್ರ ಅಥವಾ ಅದಕ್ಕೆ ಸಮಾನವಾದ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. CA, CS, ICWA ಎಂದು ಪ್ರಮಾಣೀಕರಣ ಹೊಂದಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ದಾಖಲಾತಿ ಯಾವಾಗ?

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು 2024ರ ಅಪ್ಲಿಕೇಶನ್ ಪ್ರಕ್ರಿಯೆ ಈಗಾಗಲೇ ಕೊನೆಗೊಂಡಿದೆ. NLSIU 2024 ಕ್ಕೆ ನೋಂದಾಯಿಸಲು ಕೊನೆಯ ದಿನಾಂಕ ಫೆಬ್ರವರಿ 28, 2024 ಆಗಿತ್ತು. ಶೈಕ್ಷಣಿಕ ವರ್ಷವು ಜುಲೈ 1, 2024 ರಂದು ಪ್ರಾರಂಭವಾಗುತ್ತದೆ. ಪ್ರತಿವರ್ಷ NLSIU 2024 ಅಧಿಕೃತ ವೆಬ್‌ಸೈಟ್​ಗೆ ಭೇಟಿ ನೀಡುವ ಮೂಲಕ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಏನು ನಿಯಮ?

2024-25ರ ಶೈಕ್ಷಣಿಕ ವರ್ಷದಿಂದ, ಹೊಸ ಪ್ರವೇಶ ಪ್ರಕ್ರಿಯೆಯ ಮೂಲಕ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕೋರ್ಸ್​ಗಳಿಗೆ ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸೇರಿಸಲಾಗುತ್ತಿದೆ. NLSIU ನಿರ್ವಹಿಸುವ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯ ಕುರಿತ ವಿವರಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ತಿಳಿಸಲಾಗುತ್ತದೆ. “ಅಂತರಾಷ್ಟ್ರೀಯ ವಿದ್ಯಾರ್ಥಿ” ವಿಭಾಗದ ಅಡಿಯಲ್ಲಿ ಸೀಟುಗಳು ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತವೆ. ಅಂತರಾಷ್ಟ್ರೀಯ ವಿದ್ಯಾರ್ಥಿ ವರ್ಗಕ್ಕೆ ಪ್ರವೇಶ ಪಡೆಯಲು, ಅಭ್ಯರ್ಥಿಯು ಭಾರತವನ್ನು ಹೊರತುಪಡಿಸಿ ಬೇರೆ ದೇಶದ ಪ್ರಜೆಯಾಗಿರಬೇಕು ಮತ್ತು ಭಾರತದ ಹೊರಗಿನ ಶಾಲೆ/ಕಾಲೇಜು/ವಿಶ್ವವಿದ್ಯಾಲಯದಲ್ಲಿ ಕನಿಷ್ಠ 10 ವರ್ಷಗಳ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ:

NLSIU ಕರ್ನಾಟಕದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ನೀಡುತ್ತದೆ. 1988 ರಲ್ಲಿ ಮೊದಲ ಬ್ಯಾಚ್‌ನಿಂದ, ಎನ್‌ಎಲ್‌ಎಸ್‌ಐಯು ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಆಧಾರದ ಮೇಲೆ ಕರ್ನಾಟಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆಂದು ಶೇ. 25 ರಷ್ಟು ಸೀಟುಗಳನ್ನು ಕಾಯ್ದಿರಿಸಿದೆ. 2021 ರಿಂದ, ವಿಶ್ವವಿದ್ಯಾನಿಲಯವು NLSIU ಸೇರ್ಪಡೆ ಮತ್ತು ವಿಸ್ತರಣೆ ಯೋಜನೆ 2021-25 ಅಡಿಯಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ. ಇದಕ್ಕೂ ಮೊದಲು, 1988 ಮತ್ತು 2020 ರ ನಡುವೆ NLSIU ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಯಾವುದೇ ಮೀಸಲಾತಿ ನೀತಿ ಜಾರಿಯಲ್ಲಿರಲಿಲ್ಲ.

NLSIU ಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರವೇಶ ಕುರಿತು ಟಿ9 ಕನ್ನಡ ಪ್ರೀಮಿಯಂ ನ್ಯೂಸ್​​ ಆ್ಯಪ್​ ಜೊತೆ ಮಾತನಾಡಿದ ಕಾನೂನು ಸಹ ಪ್ರಾಧ್ಯಾಪಕಿ ಡಾ. ಎ. ನಾಗರತ್ನ, ”ಕರ್ನಾಟಕದ ವಿದ್ಯಾರ್ಥಿಗಳು ಇಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 10 ವರ್ಷ ಅಧ್ಯಯನ ಮಾಡಿರಬೇಕು. ಆಗ ಅವರನ್ನು ‘ಕರ್ನಾಟಕ ವಿದ್ಯಾರ್ಥಿಗಳು’ ಎಂದು ಪರಿಗಣಿಸಲಾಗುತ್ತದೆ. ಇಂತವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆಂದು ಶೇ. 25 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದೆ,” ಎಂದು ಹೇಳಿದರು.

ಡಾ. ಎ. ನಾಗರತ್ನ, NLSIU ಸಹ ಪ್ರಾಧ್ಯಾಪಕಿ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಮೂಲಸೌಕರ್ಯದ ಬಗ್ಗೆ ಮಾತನಾಡಿದ ಅವರು, ”NLSIUನಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ವಿಭಿನ್ನವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪುರುಷರಿಗಾಗಿ ಗಂಗಾ, ಕಾವೇರಿ, ಹಿಮಾಲಯ ಮತ್ತು ಹೂಗ್ಲಿ ಎಂಬ ನಾಲ್ಕು ಹಾಸ್ಟೆಲ್‌ಗಳನ್ನು ನೀಡಲಾಗಿದೆ. ಮಹಿಳೆಯರಿಗಾಗಿ ನೀಲಗಿರಿ, ನರ್ಮದಾ, ಯಮುನಾ, ಗಂಗೋತ್ರಿ, ವಿಂಧ್ಯಾಸ್ (ಅನೆಕ್ಸ್ ಬ್ಲಾಕ್), ಮತ್ತು ಅನ್ನಪೂರ್ಣ (ಮೆಸ್ ಬ್ಲಾಕ್) ಹಾಸ್ಟೆಲ್ ಇದೆ. ಎಲ್ಲವೂ ಅನುಕೂಲಕರವಾಗಿ ಆವರಣದಲ್ಲೇ ನಿರ್ಮಿಸಲಾಗಿದೆ. ಪ್ರತಿ ಹಾಸ್ಟೆಲ್ 24-ಗಂಟೆಗಳ ನೀರು ಸರಬರಾಜು ಮತ್ತು ಲಾಂಡ್ರಿ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಆರಾಮದಾಯಕ ವಾಸ್ತವ್ಯಕ್ಕೆ ಅನುವು ಮಾಡಿಕೊಡುತ್ತದೆ,” ಎಂದರು.

ಹಾಗೆಯೆ ಕ್ಯಾಂಪಸ್ ಆವರಣದಲ್ಲಿ, ಲೈಬ್ರರಿ, ಬ್ಯಾಸ್ಕೆಟ್‌ಬಾಲ್ ಕೋರ್ಟ್, ಟೆನ್ನಿಸ್ ಕೋರ್ಟ್, ಕ್ರಿಕೆಟ್ ಮತ್ತು ಫುಟ್‌ಬಾಲ್ ಆಟದ ಮೈದಾನ ಮತ್ತು ಒಳಾಂಗಣ ಕ್ರೀಡಾ ಸೌಕರ್ಯಗಳು ಸೇರಿದಂತೆ ಹಲವಾರು ಕ್ರೀಡಾ ಸೌಲಭ್ಯಗಳು ಲಭ್ಯವಿದೆ. ವಿಶ್ವವಿದ್ಯಾನಿಲಯವು ವಾರ್ಷಿಕ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಕ್ಯಾಂಪಸ್‌ನಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ಕೂಡ ಇದೆ. ಕ್ಯಾಂಪಸ್‌ಗೆ ಸಮೀಪದಲ್ಲಿರುವ ನಾಗರಭಾವಿಯ ಎಸ್​ಕೆ ಆಸ್ಪತ್ರೆಯೊಂದಿಗೆ ಪಾಲುದಾರಿಕೆ ಹೊಂದಿದೆ ಎನ್ನುತ್ತಾರೆ ಡಾ. ಎ ನಾಗರತ್ನ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್​ನಲ್ಲಿ ಬಿಎಎಲ್‌ಎಲ್‌ಬಿ ಕಲಿತು ಸದ್ಯ ಸಿರಿಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆಯಲ್ಲಿ ಅಸೋಸಿಯೇಟ್ ಆಗಿರುವ ಸಜಿತ್ ಅಂಜಿಕಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ”ಇಲ್ಲಿನ ಬಿಎಎಲ್‌ಎಲ್‌ಬಿ ಕೋರ್ಸ್ ನನಗೆ ಅತ್ಯುತ್ತಮ ಅನುಭವ ನೀಡಿತು. ಎನ್‌ಎಲ್‌ಎಸ್‌ನಲ್ಲಿ ಐದು ವರ್ಷಗಳಲ್ಲಿ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಇಲ್ಲಿ ಕೇವಲ ಪಠ್ಯದಲ್ಲಿರುವ ವಿಚಾರಗಳನ್ನು ಮಾತ್ರವಲ್ಲದೆ ಅದನ್ನು ಮೀರಿದ ಅನನ್ಯ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಎಲ್ಲ ವಿಚಾರಗಳನ್ನು ಕಲಿಸಲಾಗುತ್ತದೆ. ಸ್ವಯಂ-ಕಲಿಕೆಯನ್ನು ಪ್ರೋತ್ಸಾಹಿಸುತ್ತಾರೆ. ಇದು ನನಗೆ ಕಲಿಕೆಯ ಶೈಲಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿತು. ಐದು ವರ್ಷಗಳಲ್ಲಿ, ನನ್ನ ಸಂಶೋಧನೆ ಮತ್ತು ಬರವಣಿಗೆಯಲ್ಲಿ ಬದಲಾವಣೆಗಳಾಗಿವೆ. ಇದು ನನಗೆ ಕಾನೂನು ಶಾಲೆಯಲ್ಲಿ ಮತ್ತು ಅಲ್ಲಿಂದ ಹೊರಬಂದ ಬಳಿಕ ತುಂಬಾ ಸಹಕಾರ ನೀಡುತ್ತಿದೆ,” ಎಂದಿದ್ದಾರೆ.

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್- ಪ್ರವೇಶ ಶುಲ್ಕ ಎಷ್ಟು?:

ಕೋರ್ಸ್ ವರ್ಷ ಒಟ್ಟು ಶುಲ್ಕ (ವರ್ಷಕ್ಕೆ)
B.A.LL.B (Hons) 5 Years INR 3,93,500 Lakhs (1st Year)
LL.B 3 Years INR 2,81,000 Lakhs (1st Year)
LL.M 1 Years INR 2,81,000 Lakhs (Total fees)
MPP 2 Years INR 2,81,000 Lakhs (1st Year)
Ph.D 3 Years INR 1,95,000 (1st Year)
Master of Business Law (MBL) 2 Years INR 50,500 (1st Year)
Post Graduate Diploma (Online and Hybrid mode) 1 Years INR 50,500 (Total fees)

NLU ಮತ್ತು ಖಾಸಗಿ ಕಾನೂನು ಕಾಲೇಜಿನ ನಡುವಿನ ವ್ಯತ್ಯಾಸವೇನು?

NLU ಗಳನ್ನು ಸರ್ಕಾರಗಳು ಸ್ಥಾಪಿಸುತ್ತವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ನೇರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಸಂಸ್ಥೆಗಳಿಗೆ ಪ್ರವೇಶ ಪಡೆಯಲು CLAT ಹೆಸರಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು ಮತ್ತು ಕಾನೂನು ಕ್ಷೇತ್ರದಲ್ಲಿ IIM/IIT ಗಳಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಅವರ ಪಠ್ಯಕ್ರಮ ಮತ್ತು ಶಿಕ್ಷಣದ ಗುಣಮಟ್ಟವನ್ನು ಇತರ ಯಾವುದೇ ಖಾಸಗಿ ಕಾನೂನು ಕಾಲೇಜುಗಳಿಗಿಂತ ಹೆಚ್ಚು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಈ ಬಗ್ಗೆ ಟಿ9 ಕನ್ನಡ ಪ್ರೀಮಿಯಂ ನ್ಯೂಸ್​​ ಆ್ಯಪ್​ ಜೊತೆ ಮಾತನಾಡಿದ ವಕೀಲರೊಬ್ಬರು, ”NLU ಗಳಲ್ಲಿ ಕಲಿತರೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಬೇಡಿಕೆ ಇದೆ. ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡುವ ಪ್ರಮುಖ ಅಂಶಗಳಲ್ಲಿ ಇದು ಒಂದಾಗಿದೆ. BCI (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ಅನುಮೋದಿತ ಕಾನೂನು ಕೋರ್ಸ್‌ಗಳಲ್ಲಿ ಪದವಿ ಪಡೆದ ನಂತರ ಎಲ್ಲಾ ವಿದ್ಯಾರ್ಥಿಗಳು ಕಾನೂನು ಅಭ್ಯಾಸಕರಾಗಬಹುದು ಎಂಬುದು ನಿಜ, ಆದರೆ NLU ನಲ್ಲಿ ಓದುವುದು ವಿದ್ಯಾರ್ಥಿಗಳಿಗೆ ಕಾರ್ಪೊರೇಟ್‌ಗೆ ಪ್ರವೇಶಿಸುವ ಸುಲಭ ಮಾರ್ಗವಾಗಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಕಾನೂನು ಸಂಸ್ಥೆಗಳು NLU ಗಳಿಂದ ಯುವ ಕಾನೂನು ಪದವೀಧರರನ್ನು ಪಡೆಯಲು ಬಯಸುತ್ತವೆ,” ಎಂದು ಹೇಳುತ್ತಾರೆ.

”ಖಾಸಗಿ ಕಾನೂನು ಕಾಲೇಜುಗಳಲ್ಲಿ ನಿಗಧಿತ ಶುಲ್ಕ ಇಲ್ಲ. ಕಾನೂನು ಕೋರ್ಸ್‌ಗಳಲ್ಲಿ ಶುಲ್ಕಕ್ಕೆ ಯಾವುದೇ ನಿರ್ಬಂಧವಿಲ್ಲ, ಹೀಗಾಗಿ, ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಕಾನೂನು ಕೋರ್ಸ್‌ಗಳಿಗೆ ವಾರ್ಷಿಕ 7 ಲಕ್ಷ ರೂ. ಪಡೆಯುತ್ತವೆ. ಮಧ್ಯಮ-ವರ್ಗದ ಮತ್ತು ಕೆಳ-ವರ್ಗದ ವ್ಯಕ್ತಿಗಳು ಅಂತಹ ಭಾರಿ ವೆಚ್ಚವನ್ನು ಪಾವತಿಸಲು ಕಷ್ಟ ಪಡುತ್ತಾರೆ. ಹಾಗೆಯೆ ಕೆಲ ಖಾಸಗಿ ಕಾಲೇಜುಗಳ ಪಠ್ಯಕ್ರಮವು ವಿಶಾಲವಾಗಿರುತ್ತದೆ. ಇದರಲ್ಲಿ ಎಲ್ಲವನ್ನೂ ಕಲಿಯುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ,” ಎಂಬುದು ವಕೀಲರ ಅಭಿಪ್ರಾಯ.

ಮಾತು ಮುಂದುವರೆಸಿದ ಅವರು, ”ಖಾಸಗಿ ಅಥವಾ NLU ಅಲ್ಲದ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಅನೇಕ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವುದಿಲ್ಲ. ಅವರು ಸ್ವಂತವಾಗಿ ದಾರಿ ಕಂಡುಹಿಡಿಯಬೇಕು. ಆದರೆ, NLU ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಆಯ್ಕೆ ನೀಡಲಾಗುತ್ತದೆ. ಹಾಗೆಯೆ NLU ನಲ್ಲಿ ತಮ್ಮ ಐದನೇ ವರ್ಷದ ಮೊದಲ ತ್ರೈಮಾಸಿಕದಲ್ಲಿ BA, LL.B ವಿದ್ಯಾರ್ಥಿಗಳಿಗೆ ಮತ್ತು ಹೊರಹೋಗುವ LL.M ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉದ್ಯೋಗ ಅವಕಾಶಗಳನ್ನು ಆಯೋಜಿಸಲಾಗುತ್ತದೆ. ಹೊರಹೋಗುವ ಬ್ಯಾಚ್ ತನ್ನದೇ ಆದ ವಿದ್ಯಾರ್ಥಿಗಳಿಂದ ನೇಮಕಾತಿ ಸಮನ್ವಯ ಸಮಿತಿಯನ್ನು (RCC) ಆಯ್ಕೆ ಮಾಡುತ್ತದೆ, ಇದು ವಕೀಲರು, ಕಾನೂನು ಸಂಸ್ಥೆಗಳು ಮತ್ತು NLSIU ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿರುವ ಕಂಪನಿಗಳೊಂದಿಗೆ ನೆಟ್‌ವರ್ಕ್ ಮಾಡುತ್ತದೆ. ನೇಮಕಾತಿ ಪ್ರಕ್ರಿಯೆಯು ವಿಫಲಗೊಳ್ಳುವುದು ತೀರಾ ಕಡಿಮೆ,” ಎಂದು ಹೇಳಿದರು.

Published On - 4:28 pm, Tue, 30 April 24

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್