ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಮಂಡಳಿ: ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಮುಂದೂಡಿಕೆ
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪದ ಹಿನ್ನಲೆಯಲ್ಲಿ ಪಿಯು ಮಂಡಳಿ ಪರೀಕ್ಷೆಯನ್ನು ಮುಂದೂಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಕಾಲೇಜಿನ ಹಂತದಲ್ಲಿಯೇ ನಡೆಯಲಿದೆ.
ಬೆಂಗಳೂರು: ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲು ಪಿಯು ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ನ.29ರಿಂದ ಡಿ.30ರವರೆಗೆ ಪರೀಕ್ಷೆಗಳು ನಡೆಯುವುದಿಲ್ಲ. ಅದರ ಬದಲಿಗೆ ಡಿ.9 ರಿಂದ 23ರವರೆಗೆ ಪರೀಕ್ಷೆಗಳು ನಡೆಯಲಿವೆ. ಆದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪದ ಹಿನ್ನಲೆಯಲ್ಲಿ ಪಿಯು ಮಂಡಳಿ ಪರೀಕ್ಷೆಯನ್ನು ಮುಂದೂಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಕಾಲೇಜಿನ ಹಂತದಲ್ಲಿಯೇ ನಡೆಯಲಿದೆ.
ನವೆಂಬರ್ 16ರಂದು ಪಿಯು ಕಾಲೇಜು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಪಿಯು ಮಂಡಳಿ ನಿರ್ದೇಶಕರನ್ನು ಭೇಟಿಯಾಗಿದ್ದರು. ನವೆಂಬರ್ 17ರಂದು ವಿದ್ಯಾರ್ಥಿಗಳು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಂಡಳಿಯು ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.
ಅರ್ಧವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವುದಾಗಿ ನವೆಂಬರ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದರು. ಮಂಡಳಿಯೇ ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಜಿಲ್ಲಾಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿಯು ಹೇಳಿತ್ತು. ಇದನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿರೋಧಿಸಿದ್ದರು.
ಈ ಮೊದಲು ಅರ್ಧವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತಿತ್ತು. ಕಾಲೇಜುಗಳಲ್ಲಿ ಮುಕ್ತಾಯವಾಗಿರುವ ಪಠ್ಯಕ್ರಮವನ್ನು ಗಮನಿಸಿ ಪ್ರಶ್ನಪತ್ರಿಕೆಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈ ಬಾರಿ ಮಂಡಳಿ ಹೊಸ ಪರೀಕ್ಷಾ ಕ್ರಮವನ್ನು ಸಲಹೆ ಮಾಡಿ, ಪಠ್ಯಕ್ರಮದ ಅರ್ಧದಷ್ಟು ಪಾಠಗಳನ್ನು ಆಧರಿಸಿ ಪ್ರಶ್ನಪತ್ರಿಕೆ ರೂಪಿಸಲಾಗುವುದು ಎಂದು ಹೇಳಿತ್ತು. ಆದರೆ ಕಾಲೇಜುಗಳಲ್ಲಿ ಇಷ್ಟು ಪಾಠವೇ ಆಗಿಲ್ಲ ಎನ್ನುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪವಾಗಿತ್ತು.
ಇದನ್ನೂ ಓದಿ: ಕೊರೊನಾ ಆತಂಕದಿಂದ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್ ಇದನ್ನೂ ಓದಿ: 3 ವರ್ಷಗಳ ಡಿಪ್ಲೊಮಾ ನೇರ ನೇಮಕಾತಿ, ಅನುಕಂಪದ ನೇಮಕಾತಿ, ಉನ್ನತ ಶಿಕ್ಷಣ ಪಡೆಯಲು ಪಿಯುಸಿಗೆ ಸಮ