ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ: ಮುಂದಿನ ವರ್ಷಕ್ಕೂ ನೀಡುವಂತೆ ಪೋಷಕರ ಆಗ್ರಹ

ಕರ್ನಾಟಕ ಸರ್ಕಾರದ ವಯೋಮಿತಿ ಸಡಿಲಿಕೆ ನೀತಿಯಿಂದ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. 5.5 ವರ್ಷ ವಯಸ್ಸಿನ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶಕ್ಕೆ ಅವಕಾಶ ನೀಡಿದರೂ, UKG ಪೂರ್ಣಗೊಳಿಸುವುದು ಕಡ್ಡಾಯ. ಕಳೆದ ವರ್ಷ ವಯೋಮಿತಿಯಿಂದ ವಂಚಿತರಾದ ಕೆಲ ಮಕ್ಕಳ ಪೋಷಕರು ಮುಂದಿನ ತರಗತಿ ಬಡ್ತಿಗೆ ಆಗ್ರಹಿಸುತ್ತಿದ್ದಾರೆ.

ಹೊಸ ಸಂಘರ್ಷಕ್ಕೆ ಕಾರಣವಾಯ್ತು 1ನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆ: ಮುಂದಿನ ವರ್ಷಕ್ಕೂ ನೀಡುವಂತೆ ಪೋಷಕರ ಆಗ್ರಹ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Apr 17, 2025 | 1:20 PM

ಬೆಂಗಳೂರು, ಏಪ್ರಿಲ್​ 17: ಒಂದನೇ ತರಗತಿಗೆ ಆರು ವರ್ಷ ಕಡ್ಡಾಯ ಎಂಬ ವಿಚಾರ ಕರ್ನಾಟಕದಲ್ಲಿ ಬಹಳ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ಕರ್ನಾಟಕ ಶಿಕ್ಷಣ ಇಲಾಖೆ (Karnataka Education Department) ವಯೋಮಿತಿ ಸಡಿಲಿಕೆ ಮಾಡಿತ್ತು. ಒಂದನೇ ತರಗತಿ ಸೇರಲು 5 ವರ್ಷ 5 ತಿಂಗಳು ಆಗಿರಬೇಕು ಎಂದು ಹೇಳಿತ್ತು. ಆದರೆ ಈ ವಯೋಮಿತಿ ಸಡಲಿಕೆ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದ್ದು, ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡುವಂತೆ ಪೋಷಕರು (parents) ಒತ್ತಾಯಿಸಿದ್ದಾರೆ.

ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿದೆ. ಜೊತೆಗೆ ಯುಕೆಜಿ ಪೂರ್ಣಗೊಳಿಸಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲನೆಯಂತೆ ಎಲ್​ಕೆಜಿ ಶಾಲೆಗೆ ದಾಖಲಾದ ಮಕ್ಕಳಿಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಸದ್ಯ ಎಲ್​ಕೆಜಿ ಮುಗಿಸಿರುವ ವಿದ್ಯಾರ್ಥಿಗಳು ಈ ವರ್ಷ ಯುಕೆಜಿ ಸೇರಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಈ ಮಕ್ಕಳು ಒಂದನೇ ತರಗತಿಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಕಡ್ಡಾಯ 6 ವರ್ಷ ಪೂರ್ಣವಾಗುವುದಿಲ್ಲ. ಇವರೆಲ್ಲಾ ಮತ್ತೆ ಯುಕೆಜಿಗೆ ಸೇರಬೇಕಾದ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ಮತ್ತೊಂದು ಕಡೆ ಕಳೆದ ವರ್ಷ ವಯೋಮಿತಿ ಕಡಿಮೆ ಎನ್ನುವ ಕಾರಣಕ್ಕೆ ಸಾವಿರಾರು ಪೋಷಕರಿಗೆ ಒಂದನೇ ತರಗತಿಗೆ ದಾಖಲಾತಿ ಸಿಕ್ಕಿರಲಿಲ್ಲ. ಲಕ್ಷಂತಾರ ರೂ. ಶುಲ್ಕ ಕಟ್ಟಿ ಮರಳಿ ಯಕೆಜಿಗೆ ಸೇರಿಸಿದ್ದರು. ಸಾಕಷ್ಟು ಖಾಸಗಿ ಶಾಲೆಗಳು ಕೂಡ ದಾಖಲಾತಿ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಪೋಷಕರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಒಂದು ವರ್ಷ ಎಲ್​ಕೆಜಿಯಲ್ಲಿ ಶಿಕ್ಷಣ ಮುಂದುವರೆಸಿದ್ದರು.

ಈ ವರ್ಷ ವಯೋಮಿತಿಯ ಅಹರ್ತೆಯ ಮೇಲೆ ಒಂದನೇ ತರಗತಿಯ ದಾಖಲಾತಿಗೆ ಮುಂದಾಗಿದ್ದಾರೆ. ಆದರೆ ಸರ್ಕಾರ ಈ ವರ್ಷ 5.5 ವರ್ಷಕ್ಕೆ ಅವಕಾಶ ನೀಡಿದೆ. ಕಳೆದ ವರ್ಷ ವಯೋಮಿತಿ ಕಾರಣಕ್ಕೆ ಒಂದನೇ ತರಗತಿಯಿಂದ ವಂಚಿತರಾದ ಪೋಷಕರು, ಇದೀಗ ನಮಗೆ ನೇರವಾಗಿ ಮುಂದಿನ ತರಗತಿಗೆ ಬಡ್ತಿ ಕೊಡಿ ಅಂತಿದ್ದಾರೆ. ಜೊತೆಗೆ ಈಗಾಗಲೇ ಯುಕೆಜಿಯಲ್ಲಿ ಓದುತ್ತಿರುವ ಪೋಷಕರು ಮುಂದಿನ ವರ್ಷಕ್ಕೂ ಅವಕಾಶ ನೀಡಿ ಅಂತಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ಶುಲ್ಕ ಹೆಚ್ಚಿಸುತ್ತಿರುವ ಖಾಸಗಿ ಶಾಲೆಗಳು, ಶುಲ್ಕ ವಿವರ ಪ್ರಕಟಿಸದೆ ಉದ್ಧಟತನ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್

ಸದ್ಯ ಈ ವಯೋಮಿತಿ ಸಡಿಲಿಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಮಾಡಿದೆ. ಮುಂದಿನ ವರ್ಷ ಈ ನಿಯಮ ಸಡಲಿಕೆ ಅನ್ವಯಿಸುವುದಿಲ್ಲ ಅಂತಾ  ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷದಿಂದ ಶಾಲಾ ದಾಖಲಾತಿ ಹಾಗೂ ವಯೋಮಿತಿ ಎಸ್‌ಇಪಿ ನಿಯಮದಂತೆ ನಡೆಯಲಿದೆ ಎಂದು ಕೂಡ ಹೇಳಿದ್ದಾರೆ. ಇನ್ನು ಶಾಲಾ ಶಿಕ್ಷಣ ಇಲಾಖೆಯ ನಡೆಗೆ ಕೆಲ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:12 pm, Thu, 17 April 25